ಜೈಲಿನಲ್ಲಿದ್ದರೂ ಅತೀಕ್‌ ಅಹ್ಮದ್‌ ಹತ್ಯೆ ಆರೋಪಿಯ ಸಾಮಾಜಿಕ ಜಾಲತಾಣ ಖಾತೆಗಳು ಸಕ್ರಿಯ; ತನಿಖೆ ಆರಂಭ

Update: 2023-05-03 07:52 GMT

ಲಕ್ನೋ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌, ಸಹೋದರನನ್ನು ಹತ್ಯೆಗೈದ ಆರೋಪದ ಮೇಲೆ ಬಂಧಿತರಾಗಿರುವ ಮೂವರಲ್ಲಿ ಒಬ್ಬನಾದ ಲವ್ಲೇಶ್‌ ತಿವಾರಿ, ಜೈಲಿನಲ್ಲಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದಾನೆಂದು ತಿಳಿದು ಬಂದಿದೆ.

ಕಳೆದೆರಡು ವಾರಗಳಲ್ಲಿ ತಿವಾರಿಯ ಸಾಮಾಜಿಕ ಜಾಲತಾಣಗಳ್ಲಲಿ ಪೋಸ್ಟ್‌ ಮಾಡಿರುವ ವಿಷಯಗಳನ್ನು ಬಂಡಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪೋಸ್ಟ್‌ಗಳು ಪ್ರಚೋದಕ ಹಾಗೂ ದ್ವೇಷದಿಂದ ಕೂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ತಿವಾರಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಯಾರು ನಿರ್ವಹಿಸುತ್ತಿದ್ದಾರೆಂದು ಪೊಲೀಸರು ಪರಿಶೀಲಿಸುತ್ತಿದ್ದು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಲಾಗಿದೆ. ಇದೊಂದು ಗಂಭೀರ ವಿಚಾರ ಎಂದು ಪೊಲೀಸರು ಹೇಳಿದ್ದಾರೆ.

ಎಪ್ರಿಲ್‌ 15ರಂದು ಅತೀಕ್‌ ಅಹ್ಮದ್‌ ಮತ್ತಾತನ ಸಹೋದರನನ್ನು ಪೊಲೀಸರು ಪ್ರಯಾಗರಾಜ್‌ನ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಪತ್ರಕರ್ತರ ಸೋಗಿನಲ್ಲಿ ಅವರ ತೀರಾ ಸನಿಹಕ್ಕೆ ಬಂದು ಗುಂಡು ಹಾರಿಸಿ ಕೊಂದ ಆರೋಪದಲ್ಲಿ ಲವ್ಲೇಶ್‌ ಸಹಿತ ಬಂಧಿತ ಇತರರಾದ  ಅರುಣ್‌ ಮೌರ್ಯ, ಸನ್ನಿ ಅವರನ್ನು ಪ್ರತಾಪಘರ್‌ ಜೈಲಿನಲ್ಲಿರಿಸಲಾಗಿದೆ.

ಲವ್ಲೇಶ್‌ ತಿವಾರಿಯ ಸಾಮಾಜಿಕ ಜಾಲತಾಣ ಖಾತೆಯಿಂದ ಎಪ್ರಿಲ್‌ 19ರಂದು ಮಾಡಲಾದ ಪೋಸ್ಟ್‌ನಲ್ಲಿ ಆತನನ್ನು ಜನರು ಬೆಂಬಲಿಸುತ್ತಾರೆಯೇ ಎಂದು ಕೇಳಲಾಗಿತ್ತು. ಇದಕ್ಕೆ 326 ಮಂದಿ ಮೋಟ್‌ ಮಾಡಿದ್ದರು, 42 ಮಂದಿ ಲೈಕ್‌ ಮಾಡಿದ್ದರೆ ಆರು ಕಾಮೆಂಟ್‌ಗಳಿದ್ದವು.

ಇನ್ನೊಂದು ಖಾತೆಯಲ್ಲಿ ತಿವಾರಿ ತನ್ನ ಹೆತ್ತವರೊಂದಿಗೆ ಇರುವ ಚಿತ್ರವನ್ನು ಎಪ್ರಿಲ್‌ 24ರಂದು ಶೇರ್‌ ಮಾಡಲಾಗಿತ್ತು. ಇನ್ನೊಂದು ಲಾಕ್‌ ಆಗಿರುವ ಪ್ರೊಫೈಲ್‌ನಲ್ಲೂ ಇದೇ ಚಿತ್ರವನ್ನು ಎಪ್ರಿಲ್‌ 19ರಂದು ಪೋಸ್ಟ್‌ ಮಾಡಲಾಗಿತ್ತು.

ಸೋಮವಾರ ಎಂಟು ದ್ವೇಷಕಾರಕ ಪೋಸ್ಟ್‌ಗಳನ್ನು ಬೆನ್ನುಬೆನ್ನಿಗೆ ಮಾಡಲಾಗಿತ್ತು.

Similar News