#Metoo ಪ್ರತಿಭಟನೆ ತೀವ್ರ: ಸಚಿವ ಅನುರಾಗ್ ಠಾಕೂರ್ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಆರೋಪ

Update: 2023-05-03 07:47 GMT

ಹೊಸದಿಲ್ಲಿ: ಬಲಿಷ್ಠ ಹಾಗೂ ತನ್ನ ಅಧಿಕಾರ ಮತ್ತು ಹುದ್ದೆಯನ್ನು ದೀರ್ಘಕಾಲದಿಂದ ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ನಿಲ್ಲುವುದು ತೀರಾ ಕಠಿಣ ಎಂದು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಚಣ್ ಶರಣ್ ಸಿಂಗ್ ವಿರುದ್ಧ ಇತರ ಖ್ಯಾತ ಕುಸ್ತಿ ಪಟುಗಳೊಂದಿಗೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿರುವ ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಒಲಿಂಪಿಕ್ ಪದಕ ವಿಜೇತೆ ವಿನೇಶ್ ಫೋಗಟ್, ಪ್ರಕರಣದ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ಸಮಿತಿಯೊಂದನ್ನು ರಚಿಸಿ ಪ್ರಕರಣವನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮುಚ್ಚಿ ಹಾಕಿದರು ಎಂದು ವಾಗ್ದಾಳಿ ನಡೆಸಿದರು.

"ನಾನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ನಮ್ಮ ಪ್ರತಿಭಟನೆಯನ್ನು ಹಿಂಪಡೆದೆವು. ಎಲ್ಲ ಕ್ರೀಡಾಪಟುಗಳೂ ಲೈಂಗಿಕ ಕಿರುಕುಳದ ಕುರಿತು ಅವರಿಗೆ ತಿಳಿಸಿದರು. ಆದರೆ, ಸಮಿತಿಯೊಂದನ್ನು ರಚಿಸಿ, ಪ್ರಕರಣವನ್ನು ಅಲ್ಲೇ ಮುಚ್ಚಿ ಹಾಕಲು ಅವರು ಯತ್ನಿಸಿದರು. ಆ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ" ಎಂದು ವಿನೇಶ್ ಫೋಗಟ್ ದೂರಿದ್ದಾರೆ.

"ಇದಕ್ಕೂ ಮುನ್ನ ಮೂರ್ನಾಲ್ಕು ತಿಂಗಳ ಹಿಂದೆ ನಾವು ಜಂತರ್ ಮಂತರ್ ಬಳಿ ಧರಣಿ ಕುಳಿತುಕೊಳ್ಳುವ ಮುನ್ನ, ನಾವು ಓರ್ವ ಅಧಿಕಾರಿಯನ್ನು ಭೇಟಿ ಮಾಡಿ, ಹೇಗೆ ಮಹಿಳಾ ಕ್ರೀಡಾಪಟುಗಳು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ ಹಾಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಹೇಗೆ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ಎಲ್ಲವನ್ನೂ ಅವರಿಗೆ ತಿಳಿಸಿದ್ದೆವು. ಆನಂತರವಷ್ಟೇ ನಾವು ಧರಣಿ ಕುಳಿತೆವು" ಎಂದೂ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥನ ವಿರುದ್ಧ ಪ್ರತಿಭಟಿಸುತ್ತಿರುವ ಕುಸ್ತಿ ಪಟುಗಳು, ಆತನ ಬಂಧನವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

Similar News