ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 180 ದೇಶಗಳ ಪೈಕಿ 150ರಿಂದ 161ನೇ ಸ್ಥಾನಕ್ಕೆ ಜಾರಿದ ಭಾರತ
ಹೊಸದಿಲ್ಲಿ: ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (RSF) ತನ್ನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ 21ನೇ ಆವೃತ್ತಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದು,ಇದು ಭಾರತದ ಪಾಲಿಗೆ ಕೆಟ್ಟ ಸುದ್ದಿಯನ್ನು ತಂದಿದೆ. ಪಟ್ಟಿಯಲ್ಲಿರುವ 180 ರಾಷ್ಟ್ರಗಳ ಪೈಕಿ ಭಾರತವು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ 161ನೇ ಸ್ಥಾನಕ್ಕೆ ಜಾರಿದೆ. 2022ರಲ್ಲಿ 150ನೇ ಸ್ಥಾನದಲ್ಲಿದ್ದ ಅದು 2023ರಲ್ಲಿ 11 ಸ್ಥಾನ ಕೆಳಕ್ಕೆ ಕುಸಿಯುವ ಮೂಲಕ ಇನ್ನಷ್ಟು ಕಳಪೆ ಸಾಧನೆಯನ್ನು ಪ್ರದರ್ಶಿಸಿದೆ. ಪತ್ರಕರ್ತರ ಪಾಲಿಗೆ ಅತ್ಯಂತ ಗಂಭೀರ ಸ್ಥಿತಿಯಿರುವ 31 ರಾಷ್ಟ್ರಗಳನ್ನು RSF ಗುರುತಿಸಿದ್ದು, ಭಾರತವೂ ಈ ಗುಂಪಿನಲ್ಲಿ ಸೇರಿದೆ.
ಭಾರತವನ್ನು ಈ ರೀತಿ ಏಕೆ ವರ್ಗೀಕರಿಸಲಾಗಿದೆ ಎನ್ನುವುದರ ಕುರಿತು ತನ್ನ ಆರಂಭಿಕ ಹೇಳಿಕೆಯಲ್ಲಿ ಆರ್ಎಸ್ಎಫ್, ಪತ್ರಕರ್ತರ ವಿರುದ್ಧ ಹಿಂಸಾಚಾರ, ರಾಜಕೀಯ ಪಕ್ಷಪಾತದ ಮಾಧ್ಯಮಗಳು ಮತ್ತು ಮಾಧ್ಯಮ ಒಡೆತನ ಕೆಲವೇ ಪ್ರಬಲ ವ್ಯಕ್ತಿಗಳಲ್ಲಿ ಕೇಂದ್ರಿತವಾಗಿರುವುದು ಇವೆಲ್ಲ 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಬಿಕ್ಕಟ್ಟಿನಲ್ಲಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ತಿಳಿಸಿದೆ.
RSF ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿಯ ಹಲವಾರು ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದು, ಮಾಲಕತ್ವ ಕೇಂದ್ರೀಕರಣ ಇವುಗಳಲ್ಲಿ ಒಂದಾಗಿದೆ.
ಟೈಮ್ಸ್ ಗ್ರೂಪ್, ಎಚ್ಟಿ ಮೀಡಿಯಾ, ಹಿಂದು ಗ್ರೂಪ್ ಮತ್ತು ನೆಟ್ವರ್ಕ್ 18 ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯ ಬೃಹತ್ ಮಾಧ್ಯಮ ಸಂಸ್ಥೆಗಳು ಪ್ರಾಬಲ್ಯವನ್ನು ಹೊಂದಿವೆ. ದೇಶದ ಪ್ರಮುಖ ಭಾಷೆಯಾಗಿರುವ ಹಿಂದಿಯ ನಾಲ್ಕು ದೈನಿಕಗಳು ಶೇ.75ರಷ್ಟು ಓದುಗರನ್ನು ಹಂಚಿಕೊಂಡಿವೆ. ಕೋಲ್ಕತಾದ ಬೆಂಗಾಳಿ ಭಾಷೆಯ ಅಮೃತ ಬಝಾರ್ ಪತ್ರಿಕಾ, ಮುಂಬೈನ ಮರಾಠಿ ದೈನಿಕ ಲೋಕಮತ, ಕೇರಳದ ಮಲಯಾಳ ಮನೋರಮಾದಂತಹ ಪ್ರಾದೇಶಿಕ ಭಾಷೆಗಳಲ್ಲಿಯ ಪ್ರಕಟಣೆಗಳಲ್ಲಿಯೂ ಕೆಲವೇ ಮಾಧ್ಯಮ ಸಂಸ್ಥೆಗಳು ಇನ್ನೂ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿವೆ. ಮುದ್ರಣ ಮಾಧ್ಯಮಗಳಲ್ಲಿನ ಈ ಮಾಲಿಕತ್ವ ಕೇಂದ್ರೀಕರಣವನ್ನು ಟಿವಿ ಕ್ಷೇತ್ರದಲ್ಲಿಯೂ ನೋಡಬಹುದು. NDTV ಇದಕ್ಕೊಂದು ನಿದರ್ಶನ. ಸರಕಾರಿ ಸ್ವಾಮ್ಯದ ಆಕಾಶವಾಣಿಯು ಎಲ್ಲ ಸುದ್ದಿ ರೇಡಿಯೊ ಕೇಂದ್ರಗಳ ಒಡೆತನವನ್ನು ಹೊಂದಿದೆ ಎಂದು ಆರ್ಎಸ್ಎಫ್ ಹೇಳಿದೆ.
ಈ ಕಂಪನಿಗಳು ಮತ್ತು ಮೋದಿ ಸರಕಾರದ ನಡುವಿನ ಬಹಿರಂಗ ಪರಸ್ಪರ ಲಾಭದಾಯಕ ಸಂಬಂಧಗಳು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ ನಿಸ್ಸಂಶಯವಾಗಿ ಪ್ರಮುಖ ಉದಾಹರಣೆಯಾಗಿದೆ. ಈಗ ಮೋದಿಯವರ ಖಾಸಾ ದೋಸ್ತ್ ಆಗಿರುವ ಅಂಬಾನಿ 70ಕ್ಕೂ ಅಧಿಕ ಮಾಧ್ಯಮ ಸಂಸ್ಥೆಗಳ ಮಾಲಿಕರಾಗಿದ್ದು,ಕನಿಷ್ಠ 80 ಕೋ.ಭಾರತೀಯರು ಅವುಗಳನ್ನು ಫಾಲೋ ಮಾಡುತ್ತಿದ್ದಾರೆ. ಇದೇ ರೀತಿ,ಮೋದಿಯವರಿಗೆ ಅತ್ಯಂತ ನಿಕಟರಾಗಿರುವ ಕೈಗಾರಿಕೋದ್ಯಮಿ ಗೌತಮ ಅದಾನಿ ಇತ್ತೀಚಿಗೆ ಎನ್ಡಿಟಿವಿ ವಾಹಿನಿಯನ್ನು ಸ್ವಾಧೀನ ಪಡಿಸಿಕೊಂಡಿರುವುದು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬಹುತ್ವದ ಅಂತ್ಯವನ್ನು ಸೂಚಿಸಿದೆ ಎಂದು ಆರ್ಎಸ್ಎಫ್ ಬೆಟ್ಟು ಮಾಡಿದೆ.
ಅಧಿಕಾರದಲ್ಲಿರುವವರು ದೇಶದ್ರೋಹ ಆರೋಪಗಳು ಮತ್ತು ಕ್ರಿಮಿನಲ್ ಮಾನನಷ್ಟ ಪ್ರಕರಣಗಳು ಸೇರಿದಂತೆ ಕಾನೂನಿನ ಮೂಲಕವೂ ಹಲವಾರು ರೀತಿಗಳಲ್ಲಿ ಪತ್ರಕರ್ತರಿಗೆ ಕಿರುಕುಳಗಳನ್ನು ನೀಡುತ್ತಿದ್ದಾರೆ ಎಂದು ತನ್ನ ವರದಿಯಲ್ಲಿ ಹೇಳಿರುವ ಆರ್ಎಸ್ಎಫ್, ಭಾರತೀಯ ಕಾನೂನು ರಕ್ಷಣಾತ್ಮಕವಾಗಿದೆ ನಿಜ, ಆದರೆ ಮಾನನಷ್ಟ, ದೇಶದ್ರೋಹ, ನ್ಯಾಯಾಂಗ ನಿಂದನೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡುವ ಆರೋಪಗಳನ್ನು ಸರಕಾರವನ್ನು ಟೀಕಿಸುವ ಪತ್ರಕರ್ತರ ವಿರುದ್ಧ ಬಳಸಲಾಗುತ್ತಿದೆ ಮತ್ತು ಅವರನ್ನು ದೇಶವಿರೋಧಿಗಳು ಎಂದು ಬ್ರ್ಯಾಂಡ್ ಮಾಡಲಾಗುತ್ತಿದೆ ಎದು ಬೆಟ್ಟು ಮಾಡಿದೆ.
ಭಾರತೀಯ ಸುದ್ದಿಮನೆಗಳಲ್ಲಿ ವೈವಿಧ್ಯತೆಯ ಕೊರತೆಯಿದೆ. ಪತ್ರಿಕೋದ್ಯಮದಲ್ಲಿ ಹಿರಿಯ ಹುದ್ದೆಗಳಲ್ಲಿ ಅಥವಾ ಮಾಧ್ಯಮ ಕಾರ್ಯ ನಿರ್ವಾಹಕರಾಗಿ ಮೇಲ್ಜಾತಿಗಳಿಗೆ ಸೇರಿದ ಹಿಂದು ಪುರುಷರೇ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದಾರೆ ಮತ್ತು ಈ ತಾರತಮ್ಯವು ಮಾಧ್ಯಮ ವಿಷಯಗಳಲ್ಲಿಯೂ ಪ್ರತಿಫಲಿಸುತ್ತಿದೆ. ಉದಾಹರಣೆಗೆ ಸಂಜೆಯ ಪ್ರಮುಖ ಟಾಕ್ ಶೋಗಳಲ್ಲಿ ಭಾಗಿಯಾಗುತ್ತಿರುವ ಮಹಿಳೆಯರ ಸಂಖ್ಯೆ ಶೇ.15ಕ್ಕಿಂತ ಕಡಿಮೆಯಿದೆ ಎಂದು ವರದಿಯು ಹೇಳಿದೆ.
ಪತ್ರಕರ್ತರ ಸುರಕ್ಷತೆಯ ವಿಷಯದಲ್ಲಿಯೂ ಭಾರತದ ಸಾಧನೆಯು ಕಳಪೆಯಾಗಿದೆ. ಪ್ರತಿ ವರ್ಷ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಸರಾಸರಿ ಮೂರರಿಂದ ನಾಲ್ಕು ಪತ್ರಕರ್ತರು ಹತ್ಯೆಯಾಗುತ್ತಿದ್ದು,ಭಾರತವು ಮಾಧ್ಯಮಗಳ ಪಾಲಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲೊಂದಾಗಿದೆ ಎಂದು ಹೇಳಿರುವ ವರದಿಯು, ಆನ್ಲೈನ್ ನಲ್ಲಿ ಮಹಿಳಾ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಕಿರುಕುಳ ಮತ್ತು ಕಾಶ್ಮೀರದಲ್ಲಿ ಮಾಧ್ಯಮಗಳನ್ನು ಪೊಲೀಸರು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿದೆ.
ದಕ್ಷಿಣ ಏಶ್ಯಾದ ಮಟ್ಟಿಗೂ ಭಾರತವು ಅತ್ಯಂತ ಕಳಪೆ ಸೂಚ್ಯಂಕದ ದೇಶಗಳಲ್ಲಿ ಸೇರಿದೆ. ಬಾಂಗ್ಲಾದೇಶವು 163ನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನವು 150ನೇ ಸ್ಥಾನದಲ್ಲಿದೆ,ತನ್ಮೂಲಕ ಭಾರತಕ್ಕೆ ಸಡ್ಡು ಹೊಡೆದಿದೆ. ಅಫ್ಘಾನಿಸ್ಥಾನ್ 152ನೇ,ಭೂತಾನ 90ನೇ ಮತ್ತು ಶ್ರೀಲಂಕಾ 135ನೇ ಸ್ಥಾನಗಳಲ್ಲಿವೆ.