ಶರದ್ ಪವಾರ್ ರಾಜೀನಾಮೆ ಹಿನ್ನೆಲೆ; ನಾಳೆ ಎನ್ ಸಿಪಿ ಹೊಸ ಅಧ್ಯಕ್ಷರ ಆಯ್ಕೆ ಸಾಧ್ಯತೆ
ಮುಂಬೈ: ಎರಡು ದಿನಗಳ ಹಿಂದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಸ್ಥಾನಕ್ಕೆ ಹಿರಿಯ ರಾಜಕೀಯ ನಾಯಕ ಶರದ್ ಪವಾರ್(Sharad Pawar) ಅವರು ರಾಜೀನಾಮೆ ನೀಡಿದ ನಂತರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಮುಖ ಪ್ರಶ್ನೆಗೆ ನಾಳೆ ಮುಂಬೈನಲ್ಲಿ ನಡೆಯುವ ಸಭೆಯ ನಂತರ ಉತ್ತರ ಸಿಗಬಹುದು ಎಂದು ಪಕ್ಷದ ಮೂಲಗಳು ಗುರುವಾರ ತಿಳಿಸಿವೆ.
ಪವಾರ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ನೇಮಿಸಿದ ಸಮಿತಿಯು ಮುಂಬೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ.
ಪವಾರ್ ತಮ್ಮ ನಿರ್ಧಾರವನ್ನು ಬದಲಿಸದೇ ಇದ್ದರೆ ಅವರ ಪುತ್ರಿ ಸುಪ್ರಿಯಾ ಸುಳೆ ಪಕ್ಷದ ಮುಖ್ಯಸ್ಥರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಪಕ್ಷವನ್ನು ಒಡೆದು ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸಾದ್ಯತೆಯ ಹಿನ್ನೆಲೆಯಲ್ಲಿ ಬಂಡಾಯ ಪ್ರಯತ್ನವನ್ನು ಮೀರಿಸುವ ಲೆಕ್ಕಾಚಾರದ ಹೆಜ್ಜೆಯೊಂದರಲ್ಲಿ ಪವಾರ್ ರಾಜೀನಾಮೆ ನೀಡಿದ್ದಾರೆ ಎಂದು ತರ್ಕಿಸಲಾಗಿದೆ.
"ಅಜಿತ್ ಪವಾರ್ ರಾಜ್ಯವನ್ನು ನೋಡಿಕೊಳ್ಳಬೇಕು ಹಾಗೂ (ಸುಪ್ರಿಯಾ) ಸುಳೆ ರಾಷ್ಟ್ರೀಯ ರಾಜಕೀಯವನ್ನು ನೋಡಿಕೊಳ್ಳಬೇಕು. ಶರದ್ ಪವಾರ್ ಅಧ್ಯಕ್ಷರಾಗಿ ಮುಂದುವರಿಯಲು ಬಯಸದಿದ್ದರೆ ಸುಳೆ ಮುಂದಿನ ರಾಷ್ಟ್ರೀಯ ಅಧ್ಯಕ್ಷರಾಗಬೇಕು'' ಎಂದು ಹಿರಿಯ ನಾಯಕ ಛಗನ್ ಭುಜಬಲ್ NDTVಗೆ ತಿಳಿಸಿದ್ದಾರೆ.