×
Ad

ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ: ಖ್ಯಾತ ಬಾಕ್ಸರ್ ಮೇರಿ ಕೋಮ್ ಮನವಿ

Update: 2023-05-04 13:59 IST

ಇಂಫಾಲ್ : ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಯಂತ್ರಿಸಲು ಸಹಾಯ ಮಾಡುವಂತೆ ಬಾಕ್ಸಿಂಗ್ ಪಟು ಎಂ.ಸಿ. ಮೇರಿ ಕೋಮ್ ಗುರುವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

“ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ,” ಎಂದು ಈ ಹಿರಿಯ ಬಾಕ್ಸಿಂಗ್ ಪಟು ಇಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮಣಿಪುರ ಹಿಂಸಾಚಾರದ ಫೋಟೋಗಳನ್ನು ಶೇರ್ ಮಾಡಿದ್ದಾರಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಬುಧವಾರ ಬುಡಕಟ್ಟು ಸಮುದಾಯಗಳ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ ನಿಯಂತ್ರಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳನ್ನು ನಿಯೋಜಿಸಲಾಗಿದೆ. ಗಲಭೆ ಪೀಡಿತ ಪ್ರದೇಶಗಳಿಂದ ರಕ್ಷಣಾ ಸಿಬ್ಬಂದಿ ಇಲ್ಲಿಯ ತನಕ 4000 ಜನರನ್ನು ರಕ್ಷಿಸಿ ಅವರಿಗೆ ಆಶ್ರಯ ಕಲ್ಪಿಸಿದ್ದಾರೆ ಮತ್ತು ಇನ್ನಷ್ಟು ಜನರನ್ನು ರಕ್ಷಿಸಲಾಗುತ್ತಿದೆ.
ಪರಿಸ್ಥಿತಿ ನಿಯಂತ್ರಿಸಲು ಫ್ಲ್ಯಾಗ್ ಮಾರ್ಚ್ ಕೂಡ ನಡೆಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಬುಧವಾರ ಟ್ರೈಬಲ್ ಸಾಳಿಡಾರಿಟಿ ಮಾರ್ಚ್ ಅನ್ನು ಚುರಚಂದಪುರ್ ಜಿಲ್ಲೆಯ ತೊರ್ಬುಂಗ್ ಪ್ರದೇಶದಲ್ಲಿ ಆಯೋಜಿಸಿದ್ದ ವೇಳೆ ಹಿಂಸೆ ಆರಂಭಗೊಂಡಿತ್ತು.

ಇಂಫಾಲ್ ನಲ್ಲಿ ಬುಡಕಟ್ಟು ಸಮುದಾಯದವರಲ್ಲದ ಮೀಟೀಸ್  ತಮಗೆ ಎಸ್ಟಿ ಸ್ಥಾನಮಾನ ನೀಡಬೇಕೆಂಬ ಆಗ್ರಹ ಮುಂದಿಟ್ಟಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸಾವಿರಾರು ಮಂದಿ ಭಾಗವಹಿಸಿದ್ದ ಈ ರ್ಯಾಲಿಯಲ್ಲಿ ಬುಡಕಟ್ಟು ಜನರು ಮತ್ತು ಬುಡಕಟ್ಟುಯೇತರರ ನಡುವೆ ಘರ್ಷಣೆ ಏರ್ಪಟ್ಟಿತ್ತು.

Similar News