×
Ad

ಉಡುಪಿ ಜಿಲ್ಲಾದ್ಯಂತ ನೀರಿನ ಸಮಸ್ಯೆ ಉಲ್ಬಣ

► 46 ಗ್ರಾಪಂಗಳಲ್ಲಿ ಗಂಭೀರ ಸಮಸ್ಯೆ ► ಉಡುಪಿ ನಗರಕ್ಕೆ ಇನ್ನು 2 ದಿನಗಳಿಗೊಮ್ಮೆ ನೀರು

Update: 2023-05-04 14:10 IST

ಉಡುಪಿ, ಮೇ 4: ಉಡುಪಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಚುನಾವಣಾ ಭರವಸೆಗಳ ಮಧ್ಯೆ ಜಿಲ್ಲೆಯ ಜನತೆ ನೀರಿನ ಸಮಸ್ಯೆಗೆ ಪರಿಹಾರ ದೊರೆಯದೆ ತತ್ತರಿಸಿದ್ದಾರೆ. ಜಲಮೂಲಗಳು ಬತ್ತಿ ಹೋಗುತ್ತಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸುವ ಪರಿಸ್ಥಿತಿ ಎದುರಾಗಿದೆ. ಅದೇರೀತಿ ನಗರ ಪ್ರದೇಶಗಳಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ.

ದಿನ ಕಳೆದಂತೆ ಬಿಸಿಲ ಧಗೆ ಹೆಚ್ಚುತ್ತಲೇ ಇದ್ದು, ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿದ್ದೆ. ಇದರಿಂದ ಜಿಲ್ಲೆಯಲ್ಲಿರುವ ಬಾವಿ, ಕೊಳವೆ ಬಾವಿಗಳ ನೀರು ಬತ್ತಿ ಹೋಗುತ್ತಿವೆ. ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ವಿಸ್ತರಿಸಿಕೊಂಡು ಹೋಗುತ್ತಿದೆ. ಒಂದೊಂದು ಗ್ರಾಪಂನಲ್ಲಿ 30-40 ಮನೆಗಳು ನೀರಿನ ಸಮಸ್ಯೆಗೆ ಸಿಲುಕಿವೆ.

ಜಿಲ್ಲೆಯ ಕಾಪು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು ಹಾಗೂ ಕುಂದಾಪುರ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಈಗಾಗಲೇ ನೀರಿನ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಪಂಗಳಿಂದ ಟ್ಯಾಂಕರ್ ನೀರಿಗೆ ಬೇಡಿಕೆಗಳು ಕೇಳಿ ಬಂದಿದ್ದು, ಈ ತಿಂಗಳಿನಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

46 ಗ್ರಾಪಂಗಳಲ್ಲಿ ಗಂಭೀರ ಸಮಸ್ಯೆ

ಜಿಲ್ಲೆಯ ಒಟ್ಟು 155 ಗ್ರಾಮ ಪಂಚಾಯತ್ಗಳ ಪೈಕಿ ಕೋಟೆ, ನೀರೆ, ಕಟಪಾಡಿ, ಮುದ್ರಾಡಿ, ಪೆರ್ಡೂರು, ಬೊಮ್ಮಾರಬೆಟ್ಟು, ಐರೋಡಿ ಸೇರಿದಂತೆ 46 ಗ್ರಾಪಂಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಯನ್ನು ಎದುರಿಸುತ್ತಿವೆ. ಎರಡು ತಿಂಗಳ ಹಿಂದೆ ಇದ್ದ ಪರಿಸ್ಥಿತಿ ಬದಲಾಗಿದೆ. ಇದೀಗ ಬಾವಿ, ಕೊಳವೆಬಾವಿಗಳ ನೀರು ತೀರಾ ಕೆಳಮಟ್ಟಕ್ಕೆ ಇಳಿದಿದೆ. ಇದರಿಂದ ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಎರಡು ದಿನಗಳ ಬದಲು ನಾಲ್ಕು ದಿನಗಳಿಗೊಮ್ಮೆ ನೀರು ಪೊರೈಸುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ನೀರಿಗಾಗಿ ತತ್ವಾರ ಉಂಟಾಗಿದೆ.  

ಬೈಂದೂರು ತಾಲೂಕಿನಲ್ಲಿ ಒಟ್ಟು 15 ಗ್ರಾಪಂಗಳಿದ್ದು, ಇವುಗಳಲ್ಲಿ ಮರವಂತೆ, ಹೇರಂಜಾಲು, ಜಡ್ಕಲ್, ಬಿಜೂರು, ಉಪ್ಪುಂದ ಸೇರಿದಂತೆ ಬಹುತೇಕ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಶಿರೂರು, ಆಲೂರು, ನಾಡ ಸೇರಿದಂತೆ ಮತ್ತಿತರೆಡೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ, ಕಟ್ಬೆಲ್ತೂರು ಗ್ರಾಪಂನ ದೇವಲ್ಕುಂದ, ಹೆಮ್ಮಾಡಿ, ಹೆಂಗವಳ್ಳಿ, ಹಟ್ಟಿಯಂಗಡಿ ಗ್ರಾಪಂನ ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ಸಿದ್ದಾಪುರ, ಗುಜ್ಜಾಡಿ, ವಂಡ್ಸೆ, ತಲ್ಲೂರು ಗ್ರಾಪಂನ ತಲ್ಲೂರು, ಉಪ್ಪಿನಕುದ್ರು, ಹೊಸಾಡು, ಹೊಂಬಾಡಿ ಮಂಡಾಡಿ ಗ್ರಾಪಂನ ಯಡಾಡಿ- ಮತ್ಯಾಡಿ, ಜಪ್ತಿ, ಹೊಂಬಾಡಿ- ಮಂಡಾಡಿ, ಕೊರ್ಗಿ ಗ್ರಾಪಂನ ಕೊರ್ಗಿ, ಹೆಸ್ಕುತ್ತೂರು, ಕೆದೂರು, ಉಳ್ಳೂರು, ಅಮಾಸೆಬೈಲು ಗ್ರಾಪಂನ ಅಮಾಸೆಬೈಲು, ರಟ್ಟಾಡಿ, ಮಚ್ಚಟ್ಟು, ಕಾವ್ರಾಡಿ, ಆಜ್ರಿ, ಕೆರಾಡಿ, ಕಾಳಾವರ, ವಕ್ವಾಡಿ, ಹಕ್ಲಾಡಿ, ಗುಲ್ವಾಡಿ ಹಾಗೂ ತ್ರಾಸಿ ಗ್ರಾಮಗಳಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಟ್ಯಾಂಕರ್ ನೀರಿಗೆ ಹಣ ಇಲ್ಲ

ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಬೇಕಾದರೆ ಟ್ಯಾಂಕರ್ ಮೂಲಕ ನೀರು ಪೂರೈಸುವುದೊಂದೇ ಪರಿಹಾರ. ಆದರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಅನುದಾನದ ಕೊರತೆ ದೊಡ್ಡ ತೊಡಕಾಗಿದೆ.

ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸರಕಾರದಿಂದ ಅನುದಾನ ಬರುತ್ತಿಲ್ಲ. ಇದರಿಂದ ಕೆಲವು ಗ್ರಾಪಂಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಕಷ್ಟವಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳ ಘೋಷಣೆ ಆಗದೆ ಇರುವುದರಿಂದ ಕುಡಿ ಯುವ ನೀರು ಪೂರೈಕೆಗೆ ಗ್ರಾಪಂಗಳಿಗೆ ಕಂದಾಯ ಇಲಾಖೆಯಿಂದಲೂ ಅನುದಾನ ಹಂಚಿಕೆ ಆಗಿಲ್ಲ. ಹೀಗಾಗಿ ಗ್ರಾಪಂಗಳು ತಮ್ಮ ಸ್ವಂತ ನಿಧಿಯಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಅದಕ್ಕಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿರುವ 48 ಗ್ರಾಪಂಗಳ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ಟ್ಯಾಂಕರ್ ನೀರು ಪೊರೈಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರಕಾರದಿಂದ ಕುಡಿಯುವ ನೀರಿನ ನಿರ್ವಹಣೆಗೆ ಗ್ರಾಪಂ ಗಳಿಗೆ ಅನುದಾನ ಬಾರದೇ ಇರುವುದರಿಂದ ಸ್ವಂತ ಆದಾಯ ಕಡಿಮೆ ಇರುವ ಪಂಚಾಯತ್ಗಳು ಟ್ಯಾಂಕರ್ ನೀರು ಪೂರೈಕೆಗೆ ಪರದಾಡುತ್ತಿವೆ. ನೀರಿನ ಮೂಲವೇ ಬರಿದಾಗುತ್ತಿರುವುದರಿಂದ ಮನೆ ಮನೆಗೆ ನೀರು ಹೇಗೆ ಒದಗಿಸುವುದು ಎಂಬ ಯೋಚನೆ ಬಹುತೇಕ ಗ್ರಾಪಂಗಳನ್ನು ಕಾಡುತ್ತಿದೆ.

ದುಬಾರಿ ಕೊಳವೆ ಬಾವಿ!

ಜಲ ಜೀವನ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ 31 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, ಅದರಲ್ಲಿ 28 ನೀರು ಲಭಿಸಿದರೆ ಮೂರಲ್ಲಿ ನೀರು ದೊರೆತಿಲ್ಲ. ಮತ್ತೆ ಹೊಸದಾಗಿ 148 ಕೊಳವೆಬಾವಿಗಳನ್ನು ಕೊರೆಯಲು ಉಡುಪಿ ಜಿಪಂ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಮತಿ ಸಿಕ್ಕಿಲ್ಲ.

ಅದಲ್ಲದೆ, ಹೊಸ ಕೊಳವೆಬಾವಿ ಕೊರೆಸಲು ಸುಮಾರು ಒಂದೂವರೆ ಲಕ್ಷ ರೂ. ವೆಚ್ಚವಾಗುತ್ತದೆ. ವಿದ್ಯುತ್ ಸಂಪರ್ಕ ದೂರ ಇರುವಲ್ಲಿ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸಿ ಕೊಳವೆ ಬಾವಿ ಕೊರೆಸಬೇಕಾಗುತ್ತದೆ. ಟ್ರಾನ್ಸ್ಫಾರ್ಮರ್ಗಳಿಗೆ 6-7 ಲಕ್ಷ ರೂ. ವೆಚ್ಚ ತಗಲುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಚಾರ.

ಮಳೆಗಾಲ ಆರಂಭವಾಗಲು ಇನ್ನು ಕೇವಲ 10-15 ದಿನ ಇರು ವುದು. ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಕೊಳವೆಬಾವಿ ಕೊರೆಸುವುದು ಮತ್ತು ಟ್ರಾನ್ಸ್ಫಾರ್ಮರ್ ಅಳವಡಿಸುವ ಬದಲು 50-60 ಸಾವಿರ ರೂ. ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಉತ್ತಮ ಎಂಬುದು ಅಧಿಕಾರಿಗಳ ಯೋಚನೆಯಾಗಿದೆ.

ಬೈಂದೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಲು ಕಾರಣ ಉಪ್ಪು ನೀರು. ಮುಖ್ಯವಾಗಿ ಮರವಂತೆ, ನಾವುಂದ, ಕಿರಿಮಂಜೇಶ್ವರ, ಬಿಜೂರು, ಉಪ್ಪುಂದ, ಶಿರೂರು ಭಾಗದಲ್ಲಿ ಈ ಸಮಸ್ಯೆ ಹೆಚ್ಚಿದೆ. ಇಲ್ಲಿನ ಬಹುತೇಕ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಹೇರಂಜಾಲಿ ನಂತಹ ಗ್ರಾಮೀಣ ಭಾಗದಲ್ಲಿ ಕೊಳವೆಬಾವಿ ಕೊರೆದರೂ, ನೀರೇ ಸಿಗದ ಪರಿಸ್ಥಿತಿಯಿದೆ.

ಉಡುಪಿ ನಗರಸಭೆಯ 35 ವಾರ್ಡ್ ಮತ್ತು ಸುತ್ತಮುತ್ತಲಿನ ಗ್ರಾಪಂಗಳಿಗೆ ನೀರು ಪೂರೈಸುತ್ತಿರುವ ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದೇರೀತಿ ಮುಂದುವರಿದರೆ ವಾರದೊಳಗೆ ಉಡುಪಿ ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಸಲು ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

ಸದ್ಯ ಬಜೆ ಡ್ಯಾಂನಲ್ಲಿ 3.65 ಮೀಟರ್ ನೀರಿನ ಸಂಗ್ರಹವಿದ್ದು, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬಜೆಯಿಂದ ಪ್ರತಿದಿನ ನೀರನ್ನು ಪೂರೈಸಲಾಗುತ್ತಿದೆ.  ಇಲ್ಲಿನ ನೀರಿನ ಸಂಗ್ರಹ ಮೂರು ಮೀಟರ್ಗೆ ಇಳಿದ ನಂತರ ಎರಡು ದಿನಗಳಿಗೊಮ್ಮೆ ನೀರು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇನ್ನು ಆರು ದಿನಗಳಲ್ಲಿ ನೀರಿನ ಸಂಗ್ರಹ 3 ಮೀಟರ್ಗೆ ಇಳಿಯುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಅಂದಾಜು.

ಮಣಿಪಾಲ, ಗುಂಡಿಉಬೈಲು, ನಯಂಪಳ್ಳಿ ಸೇರಿದಂತೆ ನಗರಸಭೆ ವ್ಯಾಪ್ತಿಯ ಎತ್ತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸಾಕಷ್ಟು ಬಿಗಡಾಯಿಸಿದೆ. ನಗರದ ಇತರ ಪ್ರದೇಶಗಳಿಗೆ ಪ್ರತಿದಿನ ನೀರು ಪೂರೈಕೆಯಾದರೆ, ಇಲ್ಲಿ ಮೂರು ದಿನಗಳಿಗೊಮ್ಮೆ ನೀರು ಬರುತ್ತದೆ. ಇದರಿಂದ ಇಲ್ಲಿನ ಜನತೆ ನೀರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

ನೀರು ಸರಿಯಾಗಿ ಪೂರೈಕೆಯಾಗದ ಪ್ರದೇಶಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲು ಕರೆಯಲಾದ ಟೆಂಡರ್ಗೆ ಚುನಾವಣಾ ಆಯೋಗದಿಂದ ಅನುಮತಿ ಲಭಿಸಿಲ್ಲ. ಈ ನಿಟ್ಟಿನಲ್ಲಿ ಎತ್ತರ ಪ್ರದೇಶಗಳಿಗೆ ಪರ್ಯಾಯವಾಗಿ ಫುಲ್ ಫ್ರೆಶರ್ನಲ್ಲಿ ನೀರು ಕೊಡುವ ಕಾರ್ಯ ನಡೆಯುತ್ತಿದೆ ಎಂದು ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ್ ತಿಳಿಸಿದ್ದಾರೆ.

ಕಾಪು ಪುರಸಭೆಗೂ ತಟ್ಟಿದ ನೀರಿನ ಅಭಾವದ ಬಿಸಿ!

ಕಾಪು ಪುರಸಭೆಗೂ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸದ್ಯ 26 ಕೊಳವೆಬಾವಿ ಹಾಗೂ 11 ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಇದೀಗ ಕೊಳವೆಬಾವಿ ನೀರು ಬತ್ತಿ ಹೋಗುತ್ತಿರುವುದರಿಂದ ಮುಂದೆ ಎರಡು ದಿನಗಳಿಗೊಮ್ಮೆ ನೀರು ಪೂರೈಸಲು ಯೋಚನೆ ಹಾಕಿ ಕೊಂಡಿರುವುದಾಗಿ ಪುರಸಭೆ ಮುಖ್ಯ ಅಧಿಕಾರಿ ತಿಳಿಸಿದ್ದಾರೆ.

Similar News