ಈಡಿ ಮುಖ್ಯಸ್ಥರ ಸೇವಾವಧಿ ವಿಸ್ತರಣೆ: ಬೇರೆ ಯಾರೂ ಅರ್ಹ ವ್ಯಕ್ತಿಗಳಿಲ್ಲವೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

Update: 2023-05-04 09:23 GMT

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಅವರ ಸೇವಾವಧಿಯನ್ನು ವಿಸ್ತರಿಸಿರುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಕೆಲವೊಂದು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದೆ. ಆದರೆ ಪ್ರಮುಖ ಪರಿಶೀಲನಾ ಸಭೆಯಲ್ಲಿ ಜಾರಿ ನಿರ್ದೇಶನಾಲಯದ ಕೆಲವೊಂದು ಮಹತ್ವದ ಕಾರ್ಯಗಳ ಮುಂದುವರಿಕೆಗೆ ಇದು ಅಗತ್ಯವೆಂದು ಹೀಗೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ಈಡಿ ಮುಖ್ಯಸ್ಥರ ಸೇವಾವಧಿ ವಿಸ್ತರಣೆಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುವ ವೇಳೆ “ಇಡೀ ಏಜನ್ಸಿಯಲ್ಲಿ ಬೇರೆ ಯಾರೂ ಅರ್ಹ ವ್ಯಕ್ತಿಗಳಿಲ್ಲವೇ?” ಎಂದು ನ್ಯಾಯಮೂರ್ತಿಗಳಾದ  ಬಿ ಆರ್‌ ಗವಾಯಿ, ವಿಕ್ರಮ್‌ ನಾಥ್‌ ಮತ್ತು ಸಂಜಯ್‌ ಕರೋಲ್‌ ಅವರ ಪೀಠ ಹೇಳಿದೆ.

ಮಿಶ್ರಾ ಅವರನ್ನು ನವೆಂಬರ್‌ 19, 2018ರಲ್ಲಿ ಎರಡು ವರ್ಷಗಳ ಅವಧಿಗೆ ಇಡಿ ನಿರ್ದೇಶಕರನ್ನಾಗಿ ಮೊದಲು ನೇಮಿಸಲಾಗಿತ್ತು. ನವೆಂಬರ್‌ 2020 ರಲ್ಲಿ ಅವರ ಸೇವಾವಧಿ ಮುಕ್ತಾಯಗೊಳ್ಳಬೇಕಿತ್ತು. ಅದೇ ವರ್ಷದ ಮೇ ತಿಂಗಳಲ್ಲಿ ಅವರು ನಿವೃತ್ತಿ ವಯಸ್ಸಾದ 60 ತಲುಪಿದ್ದರು.

ನವೆಂಬರ್‌ 13, 2020ರ ಆದೇಶದನ್ವಯ ಪೂರ್ವಾನ್ವಯವಾಗುವಂತೆ ಮಿಶ್ರಾ ಅವರ ಸೇವಾವಧಿಯನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ವಿಸ್ತರಿಸಲಾಗಿತ್ತು.

ಜಸ್ಟಿಸ್‌ ಎಲ್‌ ನಾಗೇಶ್ವರ ರಾವ್‌ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ ಸೆಪ್ಟೆಂಬರ್‌ 2022ರಲ್ಲಿ ಈ ಕ್ರಮವನ್ನು ಎತ್ತಿಹಿಡಿದಿತ್ತಲ್ಲದೆ, ಈ ರೀತಿ ಪೂರ್ವಾನ್ವಯವಾಗುವಂತಹ ಕ್ರಮ ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾಡಲಾಗುತ್ತದೆ ಮತ್ತು ಮಿಶ್ರಾ ಅವರಿಗೆ ಇನ್ನು ವಿಸ್ತರಣೆ ನೀಡುವ ಹಾಗಿಲ್ಲ ಎಂದು ಹೇಳಿತ್ತು.

ಸರ್ಕಾರದ 2020 ಆದೇಶವನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.  ಕಳೆದ ವರ್ಷ ಮಿಶ್ರಾ ಅವರಿಗೆ ಇನ್ನೊಂದು ವಿಸ್ತರಣೆ ನೀಡಲಾಗಿತ್ತು.

ಬುಧವಾರದ ವಿಚಾರಣೆ ವೇಳೆ ಮಿಶ್ರಾ ಅವರ ಸೇವಾವಧಿ ವಿಸತರಣೆಯನ್ನು ಸಮರ್ಥಿಸಿದ ಕೇಂದ್ರ ಸರ್ಕಾರದ ಪರ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಫೈನಾನ್ಶಿಯಲ್‌ ಆಕ್ಷನ್‌ ಟಾಸ್ಕ್‌ ಫೋರ್ಸ್‌ ಪರಿಶೀಲನಾ ಸಭೆ ದಶಕಕ್ಕೊಂದು ಬಾರಿ ನಡೆಯುವುದರಿಂದ ಈಗಿನ ನಾಯಕತ್ವ ಮುಂದುವರಿಕೆ ಅಗತ್ಯ ಎಂದು ಹೇಳಿದರು.

Similar News