ಸಮುದ್ರ ತಳದಲ್ಲಿ ಆಸ್ಪತ್ರೆ, ಸಮಾಧಿಕಲ್ಲು ಪತ್ತೆ ಹಚ್ಚಿದ ಮುಳುಗುತಂಡ!
ಫ್ಲೋರಿಡ (ಅಮೆರಿಕ), ಮೇ 4: ಅಮೆರಿಕದ ಫ್ಲೋರಿಡ ರಾಜ್ಯದ ಸಮೀಪದಲ್ಲಿರುವ ಫ್ಲೋರಿಡ ಕೀಸ್ ದ್ವೀಪಸಮೂಹದ ಸಮುದ್ರದ ತಳದಲ್ಲಿ 19ನೇ ಶತಮಾನದ ಒಂದು ಆಸ್ಪತ್ರೆ ಮತ್ತು ಒಂದು ಗೋರಿಕಲ್ಲನ್ನು ಮುಳುಗುಗಾರರ ತಂಡವೊಂದು ಪತ್ತೆಹಚ್ಚಿದೆ ಎಂದು ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ.
ಈ ಸ್ಥಳವನ್ನು 1890 ಮತ್ತು 1900ರ ನಡುವಿನ ಅವಧಿಯಲ್ಲಿ ಹಳದಿ ಜ್ವರ ರೋಗಿಗಳನ್ನು ಕ್ವಾರಂಟೈನ್ನಲ್ಲಿರಿಸಲು ಬಳಸಿರಬಹುದು ಎಂದು ಪುರಾತನಶಾಸ್ತ್ರಜ್ಞರು ಭಾವಿಸಿದ್ದಾರೆ ಎಂಬುದಾಗಿಯೂ ಸಿಬಿಎಸ್ ನ್ಯೂಸ್ ಹೇಳಿದೆ.
ಫ್ಲೋರಿಡ ಕೀಸ್ನಲ್ಲಿರುವ ಡ್ರೈ ಟೋರ್ಟಗಸ್ ನ್ಯಾಶನಲ್ ಪಾರ್ಕ್ಗೆ ಸಮೀಪದ ಸಮುದ್ರದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಡ್ರೈ ಟೋರ್ಟಗಸ್ನ ಸಿಬ್ಬಂದಿ ಕಳೆದ ವರ್ಷದ ಆಗಸ್ಟ್ನಲ್ಲಿ ಸಮೀಕ್ಷೆ ನಡೆಸಿದಾಗ ಈ ವಸ್ತುಗಳು ಪತ್ತೆಯಾಗಿವೆ ಎಂದು ನ್ಯಾಶನಲ್ ಪಾರ್ಕ್ ಸರ್ವಿಸ್ (ಎನ್ಪಿಎಸ್)ನ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.
ಫೋರ್ಟ್ ಜೆಫರ್ಸನ್ ಸ್ಮಶಾನದಲ್ಲಿ ಕೇವಲ ಒಂದು ಗೋರಿಯನ್ನು ಗುರುತಿಸಲಾಗಿದೆ. ಹತ್ತಾರು ಜನರ, ಅದರಲ್ಲೂ ಮುಖ್ಯವಾಗಿ ಕೋಟೆಯಲ್ಲಿ ನಿಯೋಜಿಸಲಾಗಿದ್ದ ಸೇನೆಯ ಸದಸ್ಯರ ಅವಶೇಷಗಳು ಅಲ್ಲಿರಬಹುದೆಂದು ಪರಿಣತರು ಊಹಿಸಿದ್ದಾರೆ.
ಆಂತರಿಕ ಯುದ್ಧದ ಅವಧಿಯಲ್ಲಿ ಫೋರ್ಟ್ ಜೆಫರ್ಸನ್ನ್ನು ಬಂದೀಖಾನೆಯಾಗಿ ಬಳಸಲಾಗಿತ್ತು. ಕೈದಿಗಳು, ಸೇನಾ ಸಿಬ್ಬಂದಿ, ಗುಲಾಮರು, ಎಂಜಿನಿಯರ್ಗಳು ಮತ್ತು ನೆರವು ಸಿಬ್ಬಂದಿಯ ಸಂಖ್ಯೆ ಹೆಚ್ಚಿದಂತೆ ರೋಗ ಹರಡಿತು ಎಂದು ನ್ಯಾಶನಲ್ ಪಾರ್ಕ್ ಸರ್ವಿಸ್ ತಿಳಿಸಿದೆ. 1860 ಮತ್ತು 1870ರ ದಶಕಗಳಲ್ಲಿ ನೂರಾರು ಮಂದಿ ರೋಗದಿಂದಾಗಿ ಸಾವಿಗೀಡಾದರು ಎಂದು ಅದು ಹೇಳಿದೆ.