ಇದು ರಾಜಕೀಯ ಪಕ್ಷಗಳಿಂದ ನ್ಯಾಯಾಂಗ ನಿಂದನೆ ಅಲ್ಲವೆ?!
ಗಾದಿ May
ಚುನಾವಣಾ ಆಯೋಗ ಚಾಪೆಯಡಿ ತೂರಿದರೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ರಂಗೋಲಿಯಡಿಗೆ ತೂರಿಕೊಂಡಿರುತ್ತಾರೆ. ಈ ಮೇಲಾಟವನ್ನು ಆನಂದಿಸಬೇಕೋ ಅಥವಾ ಅಳಬೇಕೋ ಗೊತ್ತಾಗದ ಪರಿಸ್ಥಿತಿ, ರಾಜಕೀಯ ಜಗತ್ತನ್ನು ಕ್ರಿಮಿನಲ್‌ಗಳು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟು, ೨೦೧೮ರ ಸೆಪ್ಟಂಬರ್ ೨೫ರಂದು ಪಬ್ಲಿಕ್ ಇಂಟರೆಸ್ಟ್ ಫೌಂಡೇಷನ್ ಮತ್ತು ಇತರರು ವರ್ಸಸ್ ಭಾರತ ಸರಕಾರ ಪ್ರಕರಣದ ತೀರ್ಪಿನ ಮೂಲಕ [WRIT PETITION (CIVIL) NO. 536 OF 2011] ಬಹಳ ಕಟುವಾದ ಮಾತುಗಳಲ್ಲಿ ತನ್ನ ಕಳಕಳಿ ವ್ಯಕ್ತಪಡಿಸಿ, ‘‘ಹಣ ಮತ್ತು ತೋಳ್ಬಲಗಳು ಪರಮಾಧಿಕಾರವಾದಾಗ ದೇಶ ಸಂಕಟಕ್ಕೀಡಾಗುತ್ತದೆ. ಕ್ರಿಮಿನಲ್ ಹಿನ್ನೆಲೆಯಿರುವ ಜನರನ್ನು ರಾಜಕೀಯಕ್ಕಿಳಿಯದಂತೆ ಪ್ರತಿಬಂಧಿಸಿ, ಅವರಿಗೆ ರಾಜಕೀಯ ಪ್ರವೇಶದ ಬಗ್ಗೆ ಯೋಚಿಸಲೂ ಸಾಧ್ಯವಾಗದಂತೆ ಕಳುಕಾಗಿರುವ ರಾಜಕೀಯದ ತೊರೆಯನ್ನು ಶುದ್ಧಗೊಳಿಸಲು ದೊಡ್ಡ ಪ್ರಯತ್ನವೇ ಅಗತ್ಯವಿದೆ. ಅವರನ್ನು ಮಾರು ದೂರ ಇರಿಸಬೇಕಾಗಿದೆ’’ ಎಂದು ಹೇಳಿತ್ತಲ್ಲದೆ, ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಗಳ ಬಗ್ಗೆ ಬಹಿರಂಗವಾಗಿ ಪತ್ರಿಕಾ ಜಾಹೀರಾತು ನೀಡುವ ಹಾಗೆ ವ್ಯವಸ್ಥೆಯೊಂದನ್ನು ರೂಪಿಸಲು ಆದೇಶಿಸಿತ್ತು.
ಆ ಬಳಿಕ ಈ ನಿಯಮಗಳ ಪಾಲನೆ ಸಮರ್ಪಕವಾಗಿ ಆಗದೆ, ಕಳೆದ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ವ್ಯವಹರಿಸಿದುದರ ವಿರುದ್ಧ, ಸುಪ್ರೀಂ ಕೋರ್ಟು ತನ್ನೆದುರು ಬಂದ ನ್ಯಾಯಾಂಗ ನಿಂದನೆಯ ಅರ್ಜಿ [CONTEMPT PETITION (CIVIL) NO. 656 OF 2020]ಗೆ ೧೦ ಆಗಸ್ಟ್ 2021ರಂದು ತೀರ್ಪು ನೀಡುವಾಗ ‘‘ದೇಶದ ನೀತಿ ನಿರೂಪಕರಿಗೆ ಈ ನ್ಯಾಯಾಲಯವು, ಸನ್ನಿವೇಶದ ಎತ್ತರಕ್ಕೆ ಏರಿ ರಾಜಕೀಯದಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವವರು ಪ್ರವೇಶಿಸದಂತೆ ಪ್ರತಿಬಂಧಿಸಲು ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಮತ್ತೆ ಮತ್ತೆ ಮನವಿ ಮಾಡಿಕೊಂಡಿದೆ. ಆದರೆ ಈ ಎಲ್ಲ ಮನವಿಗಳು ಅವರ ಕಿವುಡು ಕಿವಿಗಳಿಗೆ ಕೇಳಿಸುತ್ತಿಲ್ಲ. ರಾಜಕೀಯ ಪಕ್ಷಗಳು ತಮ್ಮ ಆಳವಾದ ನಿದ್ದೆಯಿಂದ ಎದ್ದೇಳಲು ನಿರಾಕರಿಸುತ್ತಿವೆ. ಸಾಂವಿಧಾನಿಕವಾಗಿ ಅಧಿಕಾರಗಳು ಬೇರೆ ಬೇರೆ ಅಂಗಗಳಲ್ಲಿ ವಿಂಗಡಣೆಯಾಗಿರುವುದರಿಂದ, ಈ ವಿಚಾರದಲ್ಲಿ ತುರ್ತಾಗಿ ಏನಾದರೂ ಆಗಲೇ ಬೇಕೆಂದು ನಮಗೆ ಅನ್ನಿಸಿದರೂ ಕೂಡ, ಏನೂ ಮಾಡಲು ಆಗುತ್ತಿಲ್ಲ. ನಮ್ಮ ಕೈಗಳನ್ನು ಕಟ್ಟಿಹಾಕಲಾಗಿದೆ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಒಳಗೆ, ಶಾಸಕಾಂಗಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ನಾವು ಅತಿಕ್ರಮಣ ಮಾಡಲಾಗುವುದಿಲ್ಲ. ನಾವು ಹೆಚ್ಚೆಂದರೆ, ಕಾನೂನು ನಿರೂಪಕರ ಆತ್ಮಸಾಕ್ಷಿಗೆ ಮನವಿ ಮಾಡಿಕೊಳ್ಳಬಹುದು ಮತ್ತು ಅವರು ಬೇಗನೆ ಎಚ್ಚೆತ್ತುಕೊಂಡು, ಈ ರಾಜಕೀಯ ಅಪರಾಧೀಕರಣದ ಕ್ಯಾನ್ಸರನ್ನು ಶಸ್ತ್ರಕ್ರಿಯೆ ನಡೆಸಿ, ಕತ್ತರಿಸಿ ಎಸೆಯುತ್ತಾರೆಂದು ಆಶಾಭಾವನೆ ಇಟ್ಟುಕೊಳ್ಳಬಹುದು.’’ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರೂ, ರಾಜಕೀಯ ಪಕ್ಷಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಅವರು, ಹಿಂದೆಂದಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ತಮ್ಮ ಉಮೇದ್ವಾರರನ್ನಾಗಿಸಿರುವುದು ಮಾತ್ರವಲ್ಲ, ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ ಬಳಿಕ ಅವರ ಕ್ರಿಮಿನಲ್ ಹಿನ್ನೆಲೆಗಳ ಬಗ್ಗೆ ಪತ್ರಿಕಾ ಜಾಹೀರಾತುಗಳನ್ನು ಒಟ್ಟಾರೆ ಪ್ರಕಟಿಸಿ ಹರಕೆ ಬಲಿ ತೀರಿಸುತ್ತಿದ್ದಾರೆಯೇ ಹೊರತು, ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿರುವಂತೆ ಕಾಣಿಸುತ್ತಿಲ್ಲ. ಇದಕ್ಕೆ ಪೂರಕವಾಗಿ, ಚಾಟಿ ಹಿಡಿದು ರಾಜಕೀಯಸ್ಥರನ್ನು ಸಂವಿಧಾನದ ಚೌಕಟ್ಟಿನೊಳಗೆ ಬರುವಂತೆ ಮಾಡಬೇಕಾದ ಚುನಾವಣಾ ಆಯೋಗವು, ಕೇವಲ ‘ಸರ್ಕ್ಯುಲರ್’ಗಳನ್ನು ಹೊರಡಿಸಿ ಕೈ ತೊಳೆದುಕೊಳ್ಳುವಲ್ಲಿ ಪರಿಣತಿ ತೋರಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಎಲ್ಲ ಪ್ರಯತ್ನಗಳ ಮೂಲ ಉದ್ದೇಶ ಇದ್ದದ್ದು ರಾಜಕೀಯವನ್ನು ಅಪರಾಧೀಕರಣದಿಂದ ರಕ್ಷಿಸುವುದು. ಆ ಕೆಲಸ ಆಗಿದೆಯೇ ಎಂದು ಕೇಳಿದರೆ ಅದಕ್ಕೆ ಉತ್ತರ ‘‘ಖಂಡಿತಾ ಇಲ್ಲ’’ ಎಂದು.
ಈಗ ಕರ್ನಾಟಕದ ಚುನಾವಣೆಯಲ್ಲೇ ಗಮನಿಸಿ, ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಸಂಗ್ರಹಿಸಿರುವ ಮಾಹಿತಿಗಳ ಪ್ರಕಾರ, 2004ರಿಂದ ಈಚೆಗೆ ಮೊನ್ನೆ ಮುಗಿದಿರುವ ವಿಧಾನಮಂಡಲದ ತನಕ ಕರ್ನಾಟಕದಲ್ಲಿ, 801 ಜನಪ್ರತಿನಿಧಿಗಳ (ಎಂಎಲ್‌ಎ/ಎಂಪಿ) ಹಿನ್ನೆಲೆಗಳನ್ನು ಪರಿಶೀಲಿಸಿದಾಗ, ಅವರಲ್ಲಿ 239 (ಶೇ.30) ಮಂದಿ ತಮ್ಮ ವಿರುದ್ಧ ಕ್ರಿಮಿನಲ್‌ಪ್ರಕರಣಗಳಿರುವುದನ್ನು ಬಹಿರಂಗಪಡಿಸಿದ್ದಾರೆ ಮತ್ತು ಅದರಲ್ಲಿ 150 (191) ಮಂದಿಯ ವಿರುದ್ಧ ಇರುವ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ.
ನ್ಯಾಯಾಲಯವು ಈ ಎಲ್ಲ ವಿವರಗಳೂ ಪತ್ರಿಕೆಗಳಲ್ಲಿ ಚುನಾವಣಾ ಅವಧಿಯಲ್ಲಿ ಮೂರು ಬಾರಿ ಪ್ರಕಟಗೊಳ್ಳಬೇಕು ಎಂದು ವಿಧಿಸಿದೆ. ಆದರೆ ಅಭ್ಯರ್ಥಿಗಳು, ಸಾಮಾನ್ಯ ಓದುಗರು ಓದಲು ಸಾಧ್ಯವಾಗದಂತೆ ಇಂಗ್ಲಿಷಿನಲ್ಲಿ ಈ ವಿವರಗಳನ್ನು (ನಮೂನೆ ಸಿ-1) ಪ್ರಕಟಿಸುತ್ತಿದ್ದಾರೆ, ಪ್ರಕರಣಗಳ ವಿವರ ನೀಡದೆ, ಬರೀ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ನಂಬರ್‌ಗಳನ್ನು ನಮೂದಿಸುವ ಮೂಲಕ ಈ ವಿವರಗಳನ್ನೆಲ್ಲ ಸಂಬಂಧ ಪಟ್ಟ ಮತದಾರರು ಓದದಂತೆ ಇರಿಸುತ್ತಾರೆ. ಇದು ಉದ್ದೇಶಪೂರ್ವಕ ಕಳ್ಳಾಟ. ಇನ್ನು ರಾಜಕೀಯ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳ ಇದೇ ವಿವರಗಳನ್ನು ಹೀಗೆಯೇ ಮೂರು ಬಾರಿ ಪ್ರಕಟಿಸಬೇಕಲ್ಲದೆ, ಪ್ರತಿಯೊಬ್ಬ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಯನ್ನು ತಾವು ಆರಿಸಿರುವುದು ಏಕೆ ಅನಿವಾರ್ಯವಾಯಿತು ಮತ್ತು ಕ್ರಿಮಿನಲ್ ಹಿನ್ನೆಲೆಗಳಿಲ್ಲದ ಉಮೇದ್ವಾರರು ತಮಗೆ ಏಕೆ ಸಿಗಲಿಲ್ಲ ಎಂದು ವಿವರಿಸುವ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ, ತಮ್ಮ ಪಕ್ಷದ ವೆಬ್‌ಸೈಟಿನಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳ ಒಳಗೆ ಅಥವಾ ನಾಮಪತ್ರ ಸಲ್ಲಿಕೆಯ ಮೊದಲ ದಿನದಿಂದ ಎರಡು ವಾರಗಳಿಗೆ ಮುನ್ನ (ಎರಡರಲ್ಲಿ ಯಾವುದು ಬೇಗವೋ ಅದು) ಕಡ್ಡಾಯವಾಗಿ ಪ್ರಕಟಿಸಬೇಕಿದೆ (ನಮೂನೆ ಸಿ-7), ಈ ಬಾರಿ, ಂಂP ಬಿಟ್ಟರೆ ಬೇರೆ ಪಕ್ಷಗಳು ಈ ಪ್ರಕಟಣೆಯ ಕಡ್ಡಾಯ ಮೊದಲ ಕಂತಿನ ಜಾಹೀರಾತನ್ನು ನೀಡಿರುವುದು ಈ ಲೇಖಕನ ಗಮನಕ್ಕೆ ಬಂದಿಲ್ಲ. ಪ್ರಕಟಣೆಯ ಸೂಚಿತ ಕೊನೆಯ ದಿನ ಮುಗಿದಾಗಿದೆ. ಪ್ರಕಟಣೆ ಆಗಿಲ್ಲ ಎಂದಾದರೆ, ಅದು ಸುಪ್ರೀಂ ಕೋರ್ಟಿನ ಅದೇಶದ ನಿಂದನೆಯಾಗುತ್ತದೆ. ಈ ಬಾರಿಯಾದರೂ ಚುನಾವಣಾ ಆಯೋಗ ತನ್ನ ಚಾಟಿ ಬೀಸುವ ಜವಾಬ್ದಾರಿ ನಿರ್ವಹಿಸದಿದ್ದರೆ, ಅದೂ ಈ ಅಪರಾಧದಲ್ಲಿ ಉದ್ದೇಶಪೂರ್ವಕ ಪಾಲುದಾರನಾದಂತಾಗುತ್ತದೆ.
ಈ ಬಗ್ಗೆ ಚುನಾವಣಾ ಆಯೋಗದ ಪ್ರಕಟಣೆ [No. 3/4/2021/SDR Dated: 26th February, 2021]ಯನ್ನು ಅಸಕ್ತರು ಇಲ್ಲಿ ಗಮನಿಸಬಹುದು: https://eci.gov.in/files/file/12949-broad-guidelines-of-election-commission-of-india-onpublicity-of-criminal-antecedents-by-political-parties-candidates-february2021/