×
Ad

ಮಹಿಳೆಗೆ ಕಾರು ಢಿಕ್ಕಿ ಹೊಡೆದ ಪ್ರಕರಣ: ಗಾಯಾಳುವನ್ನು ನಿಂದಿಸಿದ ಆರೋಪದ ಮೇಲೆ ಪತ್ರಕರ್ತೆ ಸಹಿತ ಮೂವರ ಬಂಧನ

Update: 2023-05-06 14:22 IST

ಲುಧಿಯಾನ: ಕಾರನ್ನು ವೇಗವಾಗಿ ಚಲಾಯಿಸಿ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದಿದ್ದೇ ಅಲ್ಲದೆ ಆಕೆಯನ್ನು ನಿಂದಿಸಿದ ಆರೋಪದ ಮೇಲೆ ದಿಲ್ಲಿ ಮೂಲದ ಟಿವಿ ಪತ್ರಕರ್ತೆ ಸಹಿತ ಮೂವರನ್ನು ಲುಧಿಯಾನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಪತ್ರಕರ್ತೆ ಭಾವನಾ ಕಿಶೋರ್‌, ಆಕೆಯ ಸಹೋದ್ಯೋಗಿ ಮೃತ್ಯುಂಜಯ್‌ ಕುಮಾರ್‌ ಮತ್ತು ವಾಹನ ಚಲಾಯಿಸುತ್ತಿದ್ದ ಪರ್ಮಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಲುಧಿಯಾನದಲ್ಲಿ ಆಡಳಿತ ಆಪ್‌ ಸರ್ಕಾರದ ಆಮ್‌ ಆದ್ಮಿ ಕ್ಲಿನಿಕ್‌ ಉದ್ಘಾಟನೆಗೆಂದು ಗಗನ್‌ ಎಂಬ ಹೆಸರಿನ ಮಹಿಳೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮನ್ ಮತ್ತು ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಭಾಗವಹಿಸಿದ್ದರು.

ವೇಗವಾಗಿ ಸಾಗುತ್ತಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದ ಕಾರಣ ತನ್ನ ಬಲಗೈಗೆ ಗಾಯವಾಯಿತಲ್ಲದೆ ಮೊಬೈಲ್‌ ಬಿದ್ದು ಮುರಿದು ಹೋಯಿತು. ಅಷ್ಟಾದರೂ ಕಾರಿನಲ್ಲಿದ್ದವರು ತನ್ನೊಂದಿಗೆ ಜಗಳವಾಡಿ ಜಾತಿನಿಂದನೆಗೈದರೆಂದು ಗಗನ್‌ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಂಧಿತ ಮೂವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಯ ವೀಡಿಯೋ ವೈರಲ್‌ ಆಗಿದೆ. ಅದೇ ದಾರಿಯಲ್ಲಿ ಸಿಎಂ ವಾಹನವೂ ಆಗಮಿಸಲಿದ್ದುದರಿಂದ ರಸ್ತೆಯನ್ನು ತಕ್ಷಣ ತೆರವುಗೊಳಿಸಲಾಗಿತ್ತು. ಪರಸ್ಪರ ಹೊಂದಾಣಿಕೆಗೆ ಸೂಚಿಸಲಾಯಿತಾದರೂ ಅದು ಸಾಧ್ಯವಾಗದೇ ಇದ್ದುದರಿಂದ ದೂರು ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Similar News