ಮುಸ್ಲಿಮರಿಂದ ಬೆಂಗಳೂರಿನಲ್ಲಿ ಮಗುವಿನ ಅಪಹರಣ ಯತ್ನವೆಂಬ ವೀಡಿಯೋ ವೈರಲ್: ವಾಸ್ತವವೇನು?

Update: 2023-05-06 16:22 GMT

ಬೆಂಗಳೂರು: ಬೆಂಗಳೂರಿನ ಶಿವಾಜಿ ನಗರ ಬಸ್‌ ನಿಲ್ದಾಣ ಪ್ರದೇಶದಲ್ಲಿ ಟೋಪಿ ಧರಿಸಿದ ಕೆಲ ಪುರುಷರು  ಮತ್ತು‌ ಬುರ್ಖಾ ಧರಿಸಿರುವ ಓರ್ವ ಮಹಿಳೆಯನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವ 35 ಸೆಕೆಂಡ್‌ಗಳ ವೀಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವೀಡಿಯೋ ರೆಕಾರ್ಡ್‌ ಮಾಡುತ್ತಿರುವ ವ್ಯಕ್ತಿ ಆ ಜನರ ಬಳಿ, ಮಗುವೊಂದನ್ನು ಅಪಹರಿಸುವ ಧೈರ್ಯ ನಿಮಗೆ ಹೇಗೆ ಬಂತು ಎಂದು ಪ್ರಶ್ನಿಸುವುದು ಕೇಳಿಸುತ್ತದೆ.

ಬಿಜೆಪಿ ಪರ ಎಂದು ತಿಳಿಯಲಾದ ಸುದರ್ಶನ್‌ ನ್ಯೂಸ್‌ ಈ ವೀಡಿಯೋ ಪೋಸ್ಟ್‌ ಮಾಡಿ “ಶಿವಾಜಿನಗರದಲ್ಲಿ ಮಕ್ಕಳ ಅಪಹರಣಕಾರರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಅವರ ಬಟ್ಟೆಗಳಿಂದ ಗುರುತಿಸಬಹುದು. ಎಲ್ಲರೂ ಎಚ್ಚರಿಕೆಯಿಂದಿರಬೇಕು,” ಎಂದು ಟ್ವೀಟ್‌ ಮಾಡಿ ಪರೋಕ್ಷವಾಗಿ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿತ್ತು.

ಇದೇ ವೀಡಿಯೋವನ್ನು ತೆಲಂಗಾಣದ ಬಿಜೆಪಿ ಯುವ ಮೋರ್ಚಾ ವಕ್ತಾರೆ ಗಾಯತ್ರಿ ಭಂಡಾರಿ ಸಹಿತ ಹಲವರು ಶೇರ್‌ ಮಾಡಿದ್ದರು.

ಈ ವೀಡಿಯೋದ ಸತ್ಯಾಸತ್ಯತೆ ತಿಳಿಯಲು ಆಲ್ಟ್‌ ನ್ಯೂಸ್‌ ಯತ್ನಿಸಿದಾಗ ಘಟನೆ ಶಿವಾಜಿನಗರ ಬಸ್‌ ಸ್ಟ್ಯಾಂಡ್‌ ಸಮೀಪವೇ ನಡೆದಿದೆ ಎಂದು ಸ್ಪಷ್ಟವಾಗಿತ್ತಾದರೂ ವಾಸ್ತವವಾಗಿ ಏನು ನಡೆಯಿತೆಂದು ತಿಳಿಯಲು ಬೆಂಗಳೂರು ಪೂರ್ವ ಡಿಸಿಪಿ ಡಾ ಭೀಮಾಶಂಕರ್‌ ಎಸ್‌ ಗುಲೆದ್‌ ಅವರನ್ನು ಕೇಳಿದಾಗ ಅವರು ಇದೊಂದು ಮಕ್ಕಳ ಅಪಹರಣ ಯತ್ನ ಎಂಬುದನ್ನು  ನಿರಾಕರಿಸುತ್ತಾರೆ. 

ಅದೇ ಸಮಯ ವೀಡಿಯೋದಲ್ಲಿ ಕೈಯ್ಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡಿರುವ ಗಡ್ಡಧಾರಿ ವ್ಯಕ್ತಿ ಈ ಪ್ರಕರಣದ ಆರೋಪಿ ಎಂದು ಅವರು ಹೇಳಿದರೂ ವಾಸ್ತವವಾಗಿ ಈ ವ್ಯಕ್ತಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವನು, ಚೆಕಪ್‌ ನಂತರ ಹೆತ್ತವರೊಂದಿಗೆ ಅಲ್ಲಿಗೆ ಬಂದಿದ್ದ. ಆತನೇನೂ ಮಗುವನ್ನು ಅಪಹರಿಸಲು ಯತ್ನಿಸಿಲ್ಲ, ಆದರೆ ಮಗು ತನ್ನ ಹೆತ್ತವರೊಂದಿಗಿರುವಾಗ ಮಗುವನ್ನು ಮುಟ್ಟಿದ್ದ. ಆತ ಅಪಹರಣಕ್ಕೆ ಯತ್ನಿಸಿದ್ದನೆಂದು ಹೇಳುವುದು ಸರಿಯಲ್ಲವಾದರೂ ಆತ ಮಗುವನ್ನೇಕೆ ಮುಟ್ಟಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ ಡಿಸಿಪಿ, ಆ ವ್ಯಕ್ತಿ ಮಾನಸಿಕ ಚಿಕಿತ್ಸೆ ಪಡೆಯುತ್ತಿರುವವನು ಎಂದು ತಿಳಿದ ನಂತರ ಮಗುವಿನ ಕಡೆಯವರೂ ದೂರು ದಾಖಲಿಸಿಲ್ಲ ಎಂದರು.

ಕೃಪೆ: Altnews.in

Similar News