×
Ad

‘ಧ್ರುವ’ ಹೆಲಿಕಾಪ್ಟರ್‌ಗಳನ್ನು ಹಾರಾಟದಿಂದ ಹೊರಗಿಟ್ಟ ಸೇನೆ

Update: 2023-05-06 20:50 IST

ಹೊಸದಿಲ್ಲಿ, ಮೇ 6: ಸುಧಾರಿತ ಹಗುರ ಹೆಲಿಕಾಪ್ಟರ್ (ಎಎಲ್ಎಚ್) ‘ಧ್ರುವ’ ಜಮ್ಮು ಮತ್ತು ಕಾಶ್ಮೀರದಲ್ಲಿ ಮೇ 4ರಂದು ಪತನಗೊಂಡ ಹಿನ್ನೆಲೆಯಲ್ಲಿ, ಸೇನೆಯು ಎಲ್ಲಾ ‘ಧ್ರುವ’ ಹೆಲಿಕಾಪ್ಟರ್ ಗಳನ್ನು ಹಾರಾಟದಿಂದ ಹೊರಗಿಟ್ಟಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಎಂಬಲ್ಲಿ ಮೇ 4ರಂದು ಮೂವರು ಪ್ರಯಾಣಿಸುತ್ತಿದ್ದ ‘ಧ್ರುವ’ ಹೆಲಿಕಾಪ್ಟರೊಂದು ಭೂಸ್ಪರ್ಶದ ವೇಳೆ ಪತನಗೊಂಡಿತ್ತು. ಅಪಘಾತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ ಓರ್ವ ತಂತ್ರಜ್ಞ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ, ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಗಳನ್ನು ತಾತ್ಕಾಲಿಕವಾಗಿ ಹಾರಾಟದಿಂದ ಹೊರಗಿಡಲಾಗಿದೆ ಎಂದು ಮೂಲಗಳು ಹೇಳಿವೆ.

ನೌಕಾಪಡೆ ಮತ್ತು ತಟ ರಕ್ಷಣಾ ಪಡೆಗಳೂ ತಮ್ಮ ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಗಳನ್ನು ಮಾರ್ಚ್ ನಲ್ಲಿ ಹಾರಾಟದಿಂದ ಹೊರಗಿಟ್ಟಿವೆ. ಅವುಗಳ ಹೆಲಿಕಾಪ್ಟರ್ಗಳೂ ಇಂಥದೇ ಮಾದರಿಯ ಅಪಘಾತಗಳಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಅವುಗಳು ಈ ಕ್ರಮವನ್ನು ತೆಗೆದುಕೊಂಡಿವೆ.

ನೌಕಾಪಡೆ ಮತ್ತು ತಟ ರಕ್ಷಣಾ ಪಡೆಗಳ ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಗಳು ಈಗ ತಾಂತ್ರಿಕ ತಪಾಸಣೆಗಳಿಗೆ ಒಳಗಾಗುತ್ತಿವೆ. ಭಾರತೀಯ ವಾಯು ಪಡೆಯಲ್ಲಿ ಸುಮಾರು 70 ಎಎಲ್ಎಚ್ ಧ್ರುವ ಹೆಲಿಕಾಪ್ಟರ್ಗಳಿವೆ.

Similar News