×
Ad

ಮಣಿಪುರ: ಆದಾಯ ತೆರಿಗೆ ಅಧಿಕಾರಿಯ ಹತ್ಯೆಯನ್ನು ಖಂಡಿಸಿದ ಅಧಿಕಾರಿಗಳ ಸಂಘ

Update: 2023-05-06 20:57 IST

ಗುವಾಹಟಿ, ಮೇ 6: ಹಿಂಸಾಗ್ರಸ್ತ ಮಣಿಪುರದಲ್ಲಿ ಗುಂಪೊಂದು ನಡೆಸಿದ ಆದಾಯ ತೆರಿಗೆ ಅಧಿಕಾರಿಯೊಬ್ಬರ ಹತ್ಯೆಯನ್ನು ಭಾರತೀಯ ಕಂದಾಯ ಸೇವಾ (IRS) ಅಸೋಸಿಯೇಶನ್ ಖಂಡಿಸಿದೆ.

ಮೇ 3ರಂದು ಎರಡು ಸಮುದಾಯಗಳ ನಡುವೆ ಜನಾಂಗೀಯ ಹಿಂಸೆ ಸ್ಫೋಟಗೊಂಡ ಬಳಿಕ, ಇಂಫಾಲ್ನಲ್ಲಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಲೆಟ್ಮಿಂತಂಗ್ ಹಾವೊಕಿಪ್ರನ್ನು ಹಿಂಸಾನಿರತ ಗುಂಪೊಂದು ಕೊಂದಿದೆ ಎಂದು ಐಆರ್ಎಸ್ ಅಸೋಸಿಯೇಶನ್ ಮೇ 5 ರಾತ್ರಿ ಟ್ವೀಟ್ ಮಾಡಿದೆ. ‌

‘‘ಇಂಫಾಲದಲ್ಲಿ ತೆರಿಗೆ ಸಹಾಯಕರಾಗಿರುವ ಲೆಟ್ಮಿಂತಂಗ್ ಹಾವೊಕಿಪ್ರ ಸಾವಿಗೆ ಕಾರಣವಾಗಿರುವ ಹಿಂಸಾಚಾರವನ್ನು ಐಆರ್ಎಸ್ ಅಸೋಸಿಯೇಶನ್ ಬಲವಾಗಿ ಖಂಡಿಸುತ್ತದೆ. ಕರ್ತವ್ಯದಲ್ಲಿರುವ ಅಮಾಯಕ ಸರಕಾರಿ ಸೇವಕನೊಬ್ಬನನ್ನು ಕೊಲ್ಲುವುದನ್ನು ಯಾವುದೇ ಕಾರಣ ಅಥವಾ ಸಿದ್ಧಾಂತ ಸಮರ್ಥಿಸಲಾರದು. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಸದಸ್ಯರ ಪರವಾಗಿ ನಾವು ನಿಲ್ಲುತ್ತೇವೆ’’ ಎಂದು ತನ್ನ ಟ್ವೀಟ್ನಲ್ಲಿ ಅಸೋಸಿಯೇಶನ್ ಹೇಳಿದೆ.

ಯುವ ಐಆರ್ಎಸ್ ಅಧಿಕಾರಿಯನ್ನು ಉದ್ರಿಕ್ತ ಗುಂಪು ಅವರ ಅಧಿಕೃತ ಮನೆಯಿಂದ ಹೊರಗೆಳೆದು ಹೊಡೆದು ಕೊಂದಿತು ಎಂದು ಸ್ಥಳೀಯರು ಹೇಳಿದ್ದಾರೆ.

Similar News