×
Ad

ಕಾಂಗೋದಲ್ಲಿ ಭೀಕರ ಪ್ರವಾಹ; 170ಕ್ಕೂ ಅಧಿಕ ಮಂದಿ ಬಲಿ

Update: 2023-05-06 22:16 IST

ಬುಕಾವು,ಮೇ 6: ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದ ದಕ್ಷಿಣ ಕಿವು ಪ್ರಾಂತದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ  170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ನೆರೆಯ ರಾಷ್ಟ್ರವಾದ ರ್ವಾಂಡಾದಲ್ಲಿಯೂ ಸತತವಾಗಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಮಂದಿ ಸಾವನ್ನಪ್ಪಿದ್ದಾರೆ.

ಭೀಕರವಾದ ಪ್ರವಾಹದಿಂದಾಗಿ ನೂರಾರು ಮನೆಗಳು ಕೊಚ್ಚಿಹೋಗಿರುವ ಕಾಲೆಹೆ, ಕೀವು ನದಿ ಪಶ್ಚಿಮ ಪ್ರದೇಶ ಹಾಗೂ ರ್ವಾಂಡಜಾ ಗಡಿ ಪ್ರದೇಶದಲ್ಲಿ 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆಂದು ಕ್ಷಿಣ ಕಿವು ಪ್ರಾಂತದ ಗವರ್ನರ್ ಥಿಯೊ ನಗ್ವಾಭಿಜೆ ತಿಳಿಸಿದ್ದಾರೆ.

ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾಗೂ ಪ್ರವಾಹದಿಂದಾಗಿ 176 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವುದಾಗಿ ತಿಳಿಸಿದರು.  

ಮಳೆ ಸಂಬಂಧಿ ದುರಂತಗಳಲ್ಲಿ ಸಾವನ್ನಪ್ಪಿದವರ ಸ್ಮರಣಾರ್ಥವಾಗಿ ಸೋಮವಾರ ರಾಷ್ಟ್ರೀಯ ಶೋಕಾಚಾರಣೆಗೆ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ ಸರಕಾರ ಕರೆ ನೀಡಿದೆ. ಅಂದು ಎಲ್ಲಾ ಸರಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ ಸೂಚಿಸಿದೆ.

Similar News