ಕಾರ್ಕಳ: ಸಾಲದ ವಿಚಾರವಾಗಿ ಪತಿ ಜೊತೆ ಗಲಾಟೆ; ಪತ್ನಿ ಆತ್ಮಹತ್ಯೆ
Update: 2023-05-07 21:08 IST
ಕಾರ್ಕಳ, ಮೇ 7: ಸ್ವಸಹಾಯ ಸಂಘದ ಸಾಲ ಕಟ್ಟುವ ವಿಚಾರಕ್ಕಾಗಿ ಪತಿಯೊಂದಿಗೆ ಜಗಳವಾಡಿದ ಪತ್ನಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮೇ 7ರಂದು ಕಾರ್ಕಳ ಪತ್ತೊಂಜಿಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಪತ್ತೊಂಜಿಕಟ್ಟೆ ನಿವಾಸಿ ಅಣ್ಣಪ್ಪ ಎಂಬವರ ಪತ್ನಿ ಪುಷ್ಪ (23) ಎಂದು ಗುರುತಿಸಲಾಗಿದೆ.
ಗೇರುಬೀಜ ಸಿಪ್ಪೆ ತೆಗೆಯುವ ಕೆಲಸ ಮಾಡಿಕೊಂಡಿದ್ದ ಪುಷ್ಪಾ ಮೇ 6ರಂದು ಸ್ವಸಹಾಯ ಸಂಘದ ಸಾಲ ಕಟ್ಟುವ ಬಗ್ಗೆ ಪತಿಯೊಂದಿಗೆ ಚರ್ಚೆ ಮಾಡಿದ್ದು, ನಾಳೆ ಬೆಳಗ್ಗೆ ಹಣದ ವ್ಯವಸ್ಥೆ ಮಾಡುವುದಾಗಿ ಪತಿ ಹೇಳಿದ್ದರು. ಆದರೆ ಪುಷ್ಪಾ ಈಗಲೇ ಹಣ ಬೇಕೆಂದು ಹೇಳಿ ಅವರೊಳಗೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿತ್ತು. ಇದೇ ವಿಚಾರದಲ್ಲಿ ಮನನೊಂದ ಪುಷ್ಪಾ, ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತಿ, ನಾಲ್ಕೂವರೆ ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.