ಇದು ಭಾರತದ ದಿಕ್ಕು ಬದಲಿಸುವ ಚುನಾವಣೆ

Update: 2023-05-07 19:30 GMT

ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬೀದಿಗೆ ಬಿದ್ದಾಗ ಕಣ್ಣೆತ್ತಿ ನೋಡ ದವರು, ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನು ಕೊಡದವರು, ಕೋವಿಡ್ ಕಾಲದಲ್ಲಿ ಸಾಯುತ್ತಿರುವವರನ್ನು ಬದುಕಿಸಲು ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ತಡೆಯಾಜ್ಞೆ ತರಲು ಸುಪ್ರೀಂ ಕೋರ್ಟಿಗೆ ಹೋದವರು ಈಗ ಡಬಲ್ ಇಂಜಿನ್ ಸರಕಾರದ ಬಗ್ಗೆ ನಾಟಕ ಮಾಡುತ್ತ ರೋಡ್ ಶೋ ನಡೆಸುತ್ತಿದ್ದಾರೆ.



ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೆರಡು ದಿನಗಳು ಬಾಕಿ ಉಳಿದಿವೆ. ಇದು ಕೇವಲ ಒಂದು ರಾಜ್ಯದ ಶಾಸನ ಸಭೆಯ ಚುನಾವಣೆ ಮಾತ್ರವಲ್ಲ, ಒಕ್ಕೂಟ ದೇಶದ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಚುನಾವಣೆ. ಮುಂಬರುವ 2024 ನೇ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿರುವ ಮಹತ್ವದ ರಾಜಕೀಯ ವಿದ್ಯಮಾನ. 130 ಕೊಟಿ ಜನರ ಬದುಕಿನ ಮುಂದಿನ ದಿನಗಳು ಈ ಚುನಾವಣೆಯ ಫಲಿತಾಂಶವನ್ನು ಬಹುತೇಕ ಅವಲಂಬಿಸಿವೆ.

ಕರ್ನಾಟಕದ ಈ ಚುನಾವಣೆ ಯಾಕೆ ನಿರ್ಣಾಯಕವೆಂದರೆ ಬಹುತ್ವ ಭಾರತ ಮತಧರ್ಮ ನಿರಪೇಕ್ಷ ರಾಷ್ಟ್ರವಾಗಿ ಉಳಿಯಬೇಕೇ? ಬಾಬಾ ಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಸುರಕ್ಷಿತವಾಗಿ ಉಳಿಯ ಬೇಕೇ, ಜಾತ್ಯತೀತ ಭಾರತ ಮನುವಾದಿ ಹಿಂದೂ ರಾಷ್ಟ್ರವಾಗಿ ಬದಲಾಗಬೇಕೇ ಎಂಬೆಲ್ಲ ಅಂಶಗಳು ಬರಲಿರುವ ದಿನಗಳಲ್ಲಿ ಮುನ್ನೆಲೆಗೆ ಬರುವುದರಿಂದ ಇದು ಮಹತ್ವದ ಚುನಾವಣೆ. ಅಂತಲೇ ನೆರೆ ಹಾವಳಿಯಾದಾಗ, ಜನ ತೊಂದರೆಗೆ ಸಿಲುಕಿದಾಗ ಕರ್ನಾಟಕಕ್ಕೆ ಕಾಲಿಡದ ಪ್ರಧಾನಿ ಮೋದಿಯವರು ಕಳೆದ 10 ದಿನಗಳಿಂದ ರಾಜ್ಯದ ಗಲ್ಲಿ, ಗಲ್ಲಿ ಸುತ್ತುತ್ತಿದ್ದಾರೆ. ಸಣ್ಣಪುಟ್ಟ ಊರುಗಳಿಗೆ ಹೋಗಿ ರೋಡ್ ಶೋ ಮಾಡುತ್ತಿದ್ದಾರೆ.

ಸ್ವಾತಂತ್ರಾ ನಂತರ ಭಾರತದ ಪ್ರಜಾಪ್ರಭುತ್ವ ಹಿಂದೆಂದೂ ಇಷ್ಟು ಡೋಲಾಯಮಾನವಾಗಿರಲಿಲ್ಲ. ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಗೆ ಪರ್ಯಾಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ವಾಗಿರುವುದು ಜನತಂತ್ರದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇದು ಬಿಜೆಪಿಗೆ ಬಯಸದೇ ಬಂದ ಭಾಗ್ಯ. ಇದನ್ನು ಅದು ಅತ್ಯಂತ ನಾಜೂಕಾಗಿ ಬಳಸಿಕೊ ಳ್ಳುತ್ತಿದೆ. ಬಿಜೆಪಿಗೆ ಜನತೆ ಎಂದೂ ಸಂಪೂರ್ಣ ಬಹುಮತ ನೀಡಿಲ್ಲವಾದರೂ ಆಪರೇಷನ್ ಕಮಲದಂಥ ಕರಾಮತ್ತುಗಳ ಮೂಲಕ ‘ಬಿಜೆಪಿ ಬಿಟ್ಟರೆ ಗತಿ ಇಲ್ಲ’ ಎಂಬ ಪರಿಸ್ಥಿತಿಯನ್ನು ಅದು ನಿರ್ಮಿಸಲು ಹೆಣಗಾಡುತ್ತಿದೆ. ಇಂಥ ಸಂದರ್ಭದಲ್ಲಿ ಪ್ರತಿಪಕ್ಷಗಳು ಇದನ್ನೊಂದು ಸವಾಲಾಗಿ ಸ್ವೀಕರಿಸಿ ಬಿಜೆಪಿ ಸರಕಾರದ ವೈಫಲ್ಯಗಳನ್ನು ಬಯಲಿಗೆಳೆದು ಕರ್ನಾಟಕ ಮಾತ್ರವಲ್ಲ ಭಾರತ ದಲ್ಲೂ ಬಿಜೆಪಿಗೆ ಪರ್ಯಾಯ ನೀಡುವ ಸಾಮರ್ಥ್ಯ ಇದೆ ಎಂಬುದನ್ನು ತೋರಿಸಿಕೊಡಬೇಕಾಗಿದೆ.

ಪ್ರಧಾನಿ ಮಾತ್ರವಲ್ಲ ಅವರ ಸಂಪುಟದ ಎರಡನೇ ಸೂಪರ್‌ಮ್ಯಾನ್ ಗೃಹ ಮಂತ್ರಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ, ರಾಜನಾಥ್ ಸಿಂಗ್, ಸ್ಮತಿ ಇರಾನಿ ಸೇರಿದಂತೆ ಕೇಂದ್ರ ಸಂಪುಟದ ಸಚಿವರೆಲ್ಲ ಮೇ ತಿಂಗಳ ಬಿಸಿಲಲ್ಲಿ ಕರ್ನಾಟಕದಲ್ಲಿ ಬೆವರಿಳಿಸುತ್ತಿದ್ದಾರೆ.

ಹಾಗೆ ನೋಡಿದರೆ ಆರೆಸ್ಸೆಸ್ ಅತ್ಯಂತ ದೀರ್ಘಕಾಲೀನ ಕಾರ್ಯತಂತ್ರ ರೂಪಿಸಿ ಕಾರ್ಯಾಚರಣೆಗೆ ಇಳಿದಿದೆ. ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣ ಅದರ ಗುರಿ. ಅದಕ್ಕೆ ಎದುರಾಳಿಗಳೇ ಇರಬಾರದೆಂದು ಜಾಣತನದಿಂದ ಕಾರ್ಯತಂತ್ರ ರೂಪಿಸಿದ ಸಂಘ ಪರಿವಾರ ಕಾಂಗ್ರೆಸ್ ವಿರೋಧಿ ರಾಜಕಾರಣದಹೆಸರಿನಲ್ಲಿ ಜೆ.ಪಿ.ಚಳವಳಿಯಲ್ಲಿ ಸೇರಿಕೊಂಡು ರಾಮಮನೋಹರ ಲೋಹಿಯಾ ಅವರ ಸಂಯುಕ್ತ ಸಮಾಜವಾದಿ ಪಕ್ಷವನ್ನೇ ಮುಗಿಸಿತು. ಆದರೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ಈಗಲೂ ಅದು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿರುವ ಒಳಾರ್ಥ ಪ್ರತಿಪಕ್ಷ ಮುಕ್ತ ಭಾರತವಲ್ಲದೇ ಬೇರೇನೂ ಅಲ್ಲ. ಈಗಂತೂ ಡಬಲ್ ಇಂಜಿನ್ ಸರಕಾರದ ಹೊಸ ತಂತ್ರವನ್ನು ರೂಪಿಸಿದೆ. ಅಂದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿರ ಬೇಕು. ಅಂದರೆ ಪ್ರಾದೇಶಿಕ ಅಸ್ಮಿತೆಯ ಪಕ್ಷಗಳು, ಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಪಕ್ಷಗಳು ಇರಲೇಬಾರದು, ಇದ್ದರೂ ಬಿಜೆಪಿಯ ಬಾಲವಾಗಿರಬೇಕು ಎಂಬುದುಬಿಜೆಪಿ ಉದ್ದೇಶ. ಈ ನಿಟ್ಟಿನಲ್ಲಿ ಅದು ಅಡ್ಡದಾರಿ ಹಿಡಿದು ಕೆಲವೆಡೆ ಯಶಸ್ವಿ ಯಾಗಿದೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಬಲಿಷ್ಠ ಪಕ್ಷವಾಗಿದ್ದ ಶಿವಸೇನೆ ಯನ್ನೇ ಒಡೆದು ಏಕನಾಥ ಶಿಂದೆಯನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಿತು. ಶರದ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಮುಳುಗಿಸಲು ಯತ್ನಿಸಿತು. ಆದರೆ ಪವಾರ್ ಅದಕ್ಕೆ ಅವಕಾಶ ನೀಡಲಿಲ್ಲ.

ಉತ್ತರ ಭಾರತದ ರಾಜ್ಯಗಳನ್ನು ಸಲೀಸಾಗಿ ಬುಟ್ಟಿಗೆ ಹಾಕಿಕೊಂಡಂತೆ ದಕ್ಷಿಣ ಭಾರತದ ರಾಜ್ಯಗಳನ್ನು ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಒಂದೇ ಭಾರತ, ಒಂದೆ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ ಎಂದು ಏನೆಲ್ಲ ಸರ್ಕಸ್‌ಮಾಡಿದರೂ ದಕ್ಷಿಣದ ರಾಜ್ಯಗಳಿಗೂ ಉತ್ತರದ ರಾಜ್ಯಗಳಿಗೂ ಸಾಂಸ್ಕೃತಿಕವಾಗಿ, ಭಾಷಿಕವಾಗಿ,ಆಹಾರ ಪದ್ಧತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅಂತಲೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕರ್ನಾಟಕ ಎಂದೂ ಉತ್ತರದ ವರ ಯಜಮಾನಿಕೆಯನ್ನು ಒಪ್ಪಿಕೊಳ್ಳಲೇ ಇಲ್ಲ.

ತಮ್ಮದು ವ್ಯಕ್ತಿಯ ಚಾರಿತ್ರ ನಿರ್ಮಾಣ ಮಾಡುವ ಸಂಘಟನೆ ಎಂದು ಹೇಳಿಕೊಳ್ಳುವ ಸಂಘಪರಿವಾರದ ಬಿಜೆಪಿ ನಾಯಕರಿಗೆ ಚಿತ್ತಾಪುರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಸ್ಪರ್ಧಿಸಲು ಮಣಿಕಂಠ ರಾಠೋಡ್ ಎಂಬ ರೌಡಿ ಶೀಟರ್‌ನನ್ನು ಬಿಟ್ಟರೆ ಇನ್ಯಾರೂ ಸಿಗಲಿಲ್ಲ. ಉತ್ತರ ಭಾರತದಲ್ಲಿ ಇಂಥ ರೌಡಿಗಳನ್ನು, ಕೊಲೆಗಡುಕರನ್ನು ನಿಲ್ಲಿಸಿ ಆರಿಸಿ ತಂದವರು ಈ ಚಾರಿತ್ರ ವಂತರು.

ಉತ್ತರದ ಬಿಜೆಪಿ ರಾಜಕಾರಣಿಗಳು ಮಾತ್ರವಲ್ಲ ಕರ್ನಾಟಕದ ಬಿಜೆಪಿ ಮುಖಂಡರು ಆಗಾಗ ಗುಜರಾತ್ ಮಾದರಿ, ಉತ್ತರ ಪ್ರದೇಶದ ಮಾದರಿ, ಯೋಗಿ ಮಾದರಿ ಎಂದೆಲ್ಲ ತಲೆಯಲ್ಲಿ ಮೆದುಳಿಲ್ಲದವರಂತೆ ಮಾತನಾಡುತ್ತಾರೆ. ಬಿಜಾಪುರದ ಹುಂಬ ಬಸವನ ಗೌಡ ಪಾಟೀಲ್ ಯತ್ನಾಳ್ ಆದಿತ್ಯನಾಥರ ಎನ್‌ಕೌಂಟರ್‌ಗಳನ್ನು ಹಾಡಿ ಹೊಗಳುತ್ತಾರೆೆ. ಉತ್ತರಪ್ರದೇಶದ ಯೋಗಿ ರಾಜ್ಯದಲ್ಲಿ ರೌಡಿ ಶೀಟರ್‌ಗಳು ವಿಧಾನಸಭೆಗೆ ನಿಂತು ಆರಿಸಿ ಬರಬಹುದು. ಆದರೆ ಕರ್ನಾಟಕ ಸುಸಂಸ್ಕೃತರ ನಾಡು. ಇಲ್ಲಿ ಕ್ರಿಮಿನಲ್‌ಗಳಿಗೆ ಅವಕಾಶವಿಲ್ಲ. ಈ ನೆಲದ ಸಂಸ್ಕೃತಿಗೆ ಬಿಜೆಪಿ ಮತ್ತು ಆರೆಸ್ಸೆಸ್ ಹೊಂದಿಕೊಳ್ಳುವುದಿಲ್ಲ. ದೇಹವೇ ದೇಗುಲ, ಶಿರವೇ ಹೊನ್ನ ಕಳಶ ಎನ್ನುವುದು ಬಸವಣ್ಣನವರ ಕರ್ನಾಟಕದ ಸಂಸ್ಕೃತಿ. ಇದು ನಾಗಪುರದ ಗುರುಗಳಿಗೂ ಗೊತ್ತು. ಅಂತಲೇ ತಮಗೆ ಅಡ್ಡಿಯಾಗಿರುವ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮಣಿಕಂಠ ರಾಠೋಡ್ ಎಂಬಾತ ನಟೋರಿಯಸ್ ಕ್ರಿಮಿನಲ್ ಎಂಬುದು ಮೋದಿಯವರಿಗೆ, ಅಮಿತ್ ಶಾರಿಗೆ, ನಾಗಪುರದ ಭಾಗವತರಿಗೆ ಗೊತ್ತಿಲ್ಲವೆಂದಲ್ಲ. ಅವರಿಗೆ ಎಲ್ಲ ಗೊತ್ತಿದೆ. ಈತನನ್ನು ಕಣಕ್ಕೆ ಇಳಿಸಿದ್ದು ಯಾರ ವಿರುದ್ಧ? ಕಟ್ಟಾ ಅಂಬೇಡ್ಕರ್‌ವಾದಿ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆಯವರ ವಿರುದ್ಧ. ಚುನಾವಣೆ ಸ್ಪರ್ಧಿಸಲು ಅಭ್ಯಂತರವಿಲ್ಲ. ಆದರೆ ಕೆಲ ತಿಂಗಳ ಹಿಂದೆ ಇದೇ ಮಣಿಕಂಠ ರಾಠೋಡ್ ಪ್ರಿಯಾಂಕ್ ಖರ್ಗೆಯವರನ್ನು ಶೂಟ್ ಮಾಡಿ ಸಾಯಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ. ಈತ ಹಾಗೆ ಹೇಳಿದ ನಂತರವೂ ಬಿಜೆಪಿ ಆತನಿಗೆ ಟಿಕೆಟ್ ನೀಡಿದೆ. ಚುನಾವಣೆಗೆ ಸ್ಪರ್ಧಿಸಿದ ನಂತರವೂ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಅವರ ಹೆಂಡತಿ ಮಕ್ಕಳನ್ನು ಸಾಪ್ ಮಾಡುವುದಾಗಿ (ಸಾಯಿಸುವೆ) ಹೇಳಿದ ವೀಡಿಯೊ ಬಹಿರಂಗವಾಗಿದೆ. ಅಣ್ಣಾಮಲೈ ಎಂಬ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಹಾಲಿ ತಮಿಳುನಾಡಿನ ಬಿಜೆಪಿ ನಾಯಕ ಮಣಿಕಂಠನನ್ನ ಸಮರ್ಥಿಸುವ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರೌಡಿ ಶೀಟರ್‌ಗಳನ್ನು ಚುನಾವಣೆಗೆ ನಿಲ್ಲಿಸುವುದು ಉದ್ದೇಶ ಪೂರ್ವಕವಾಗಿ. ಭಾರತದ ಪ್ರಜಾಪ್ರಭುತ್ವ ಮತ್ತು ಸಂಸದೀಯ ಜನತಂತ್ರ ವನ್ನು ಮತ್ತು ಸಂವಿಧಾನವನ್ನು ಅಪಹಾಸ್ಯಕ್ಕೀಡು ಮಾಡಲು,ಅದರ ಘನತೆ, ಗೌರವಗಳನ್ನು ನುಚ್ಚು ನೂರು ಮಾಡಲು ಇಂಥವರನ್ನು ನಿಲ್ಲಿಸಿಗೆಲ್ಲಿಸುತ್ತಾರೆ. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಇಂಥವರೇ ಬರುತ್ತಾರೆ ಎಂದು ಹೇಳಿ ಧರ್ಮಾಧಾರಿತವಾದ ಮಠ, ಪೀಠಗಳು ಹಾಗೂ ಧಾರ್ಮಿಕ ದಂಧೆಕೋರರಿಂದ ನಿಯಂತ್ರಿಸಲ್ಪಡುವ ರಾಜ ವ್ಯವಸ್ಥೆ ತರುವ ಉದ್ದೇಶ ನಾಗಪುರದ ಗುರುಗಳದ್ದು. ಅದರ ಮೊದಲ ಪ್ರಯೋಗ ಯೋಗಿ ಆದಿತ್ಯನಾಥ್. ಈ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲು ಹೊರಟಿರುವ ಇವರಿಗೆ ಈ ಮಣ್ಣಿನ ಗುಣ ಅರ್ಥವಾಗಿಲ್ಲ.

ತಮ್ಮ ಅಭಿಪ್ರಾಯವನ್ನು ಒಪ್ಪದವರನ್ನು, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವವರನ್ನು ಕೊಲ್ಲುವುದು ಮನುವಾದಿ ಫ್ಯಾಶಿಸಂನ ಚಾಳಿ.ಬಸವ ತತ್ವ ಪ್ರತಿಪಾದಕ ಶರಣ ಡಾ. ಎಂ.ಎಂ.ಕಲಬುರ್ಗಿ ಅವರನ್ನು ಕೊಂದವರು ಯಾವ ಸಿದ್ಧಾಂತದ ಪ್ರತಿಪಾದಕರು ಎಂಬುದನ್ನು ವಿವರಿಸಬೇಕಾಗಿಲ್ಲ. ಕರ್ನಾಟಕ ಕಂಡ ದಿಟ್ಟ ಮಹಿಳೆ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸಿದ್ಧಾಂತ ಯಾವುದೆಂಬುದು ಎಲ್ಲರಿಗೂ ಗೊತ್ತಿದೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶರಣರಿಗೆ ಚಿತ್ರಹಿಂಸೆ ನೀಡಿ ಬಸವಣ್ಣನವರನ್ನು ಮುಗಿಸಿದ ಸಿದ್ಧಾಂತವೇ ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಬಲಿ ತೆಗೆದುಕೊಂಡಿತು. ಇವೆಲ್ಲ ನೆನಪುಗಳೊಂದಿಗೆ ನಾವು ಮತದಾನ ಮಾಡಬೇಕಾಗಿದೆ.

ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬೀದಿಗೆ ಬಿದ್ದಾಗ ಕಣ್ಣೆತ್ತಿ ನೋಡ ದವರು, ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನು ಕೊಡದವರು, ಕೋವಿಡ್ ಕಾಲದಲ್ಲಿ ಸಾಯುತ್ತಿರುವವರನ್ನು ಬದುಕಿಸಲು ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ತಡೆಯಾಜ್ಞೆ ತರಲು ಸುಪ್ರೀಂ ಕೋರ್ಟಿಗೆ ಹೋದವರು ಈಗ ಡಬಲ್ ಇಂಜಿನ್ ಸರಕಾರದ ಬಗ್ಗೆ ನಾಟಕ ಮಾಡುತ್ತ ರೋಡ್ ಶೋ ನಡೆಸುತ್ತಿದ್ದಾರೆ.

ಕರ್ನಾಟಕದ ಜನತೆ ಗಾಯಗಳನ್ನು ಮರೆತಿಲ್ಲ. ಸರಿಯಾದ ತೀರ್ಪು ನೀಡುತ್ತಾರೆ.ಇದರ ಜೊತೆಗೆ ಮುಂದಿನ 2024 ರ ಲೋಕಸಭಾ ಚುನಾ ವಣೆಯ ಬಗ್ಗೆ ಪ್ರತಿಪಕ್ಷಗಳು ಯೋಚಿಸಬೇಕಾಗಿದೆ. ಕಾಂಗ್ರೆಸ್ ಪಕ್ಷ ಇಂಥ ವಿಷಯದಲ್ಲಿ ದೊಡ್ಡ ಮನಸ್ಸು ಮಾಡಬೇಕು. ಕೋಮುವಾದವನ್ನು ವಿರೋಧಿಸುವ, ಬಹುತ್ವ ಭಾರತಕ್ಕೆ ಬದ್ಧವಾದ ಜನಪರ ಸಂಘಟನೆಗಳು, ರೈತ , ಕಾರ್ಮಿಕ, ಮಹಿಳಾ ಸಂಘಟನೆಗಳು ಹಾಗೂ ದಲಿತ ಮತ್ತು ಎಡಪಂಥೀಯ ಸಂಘಟನೆಗಳನ್ನು ಒಟ್ಟಿಗೆ ಜೊತೆಗೂಡಿಸಿಕೊಂಡು ಪರ್ಯಾಯ ರೂಪಿಸಿದರೆ ಮಾತ್ರ, ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ಸಾಧ್ಯ. ಎಂಭತ್ತು, ತೊಂಭತ್ತರ ದಶಕದಲ್ಲಿ ಹರ್‌ಕಿಷನ್ ಸುರ್ಜಿತ್‌ರಂಥ ಹಿರಿಯ ಕಮ್ಯುನಿಸ್ಟ್ ನಾಯಕರಿದ್ದರು.ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಚಾಣಾಕ್ಷತೆ ಅವರಿಗಿತ್ತು. ಅವರನ್ನು ಮಾಧ್ಯಮಗಳು ಮತ್ತು ಜನ ಚಾಣಕ್ಯ ಎಂದು ಕರೆಯುತ್ತಿದ್ದರು. ಈಗ ಅವರಿಲ್ಲ. ಜನರ ಮನಸ್ಸನ್ನು ಒಡೆದು ಕಲಹದ ಕಿಡಿ ಹೊತ್ತಿಸುವವರೇ ಈಗ ಚಾಣಕ್ಯ ಎಂದು ಕರೆಯಿಸಿಕೊಳ್ಳುತ್ತಿದ್ದಾರೆ. ಈಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹರ್‌ಕಿಷನ್ ಸುರ್ಜಿತ್‌ರಂತೆ ಎಲ್ಲ ಬಿಜೆಪಿಯೇತರ ಪಕ್ಷ ಮತ್ತು ಸಂಘಟನೆಗಳನ್ನು ಒಗ್ಗೂಡಿಸಿಕೊಂಡು 2024 ಲೋಕಸಭಾ ಚುನಾವಣೆಯನ್ನು ಎದುರಿಸಿದರೆ ಬಹುತ್ವ ಭಾರತ ಮತ್ತು ಬಾಬಾಸಾಹೇಬರ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯಬಹುದು.

Similar News