ಕೇರಳ ದೋಣಿ ದುರಂತ: ಸಾವಿನ ಸಂಖ್ಯೆ 21ಕ್ಕೇರಿಕೆ

Update: 2023-05-08 01:56 GMT

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆ ತನೂರಿನಲ್ಲಿರುವ ತೂವಲ್‍ತೀರಂ ಪ್ರವಾಸಿ ತಾಣದ ಪುರಪುಳ ನದಿಯಲ್ಲಿ ರವಿವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 21ಕ್ಕೇರಿದೆ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪ್ರಕಟಿಸಿದ್ದಾರೆ.

ತನೂರು ಕರಾವಳಿಯಲ್ಲಿ ಪ್ರವಾಸಿ ದೋಣಿ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿತ್ತು. ಪ್ರಾದೇಶಿಕ ಅಗ್ನಿಶಾಮಕ ದಳ ಅಧಿಕಾರಿ ಶಿಜು ಕೆ.ಕೆ. ಅವರ ಪ್ರಕಾರ, "ಇದುವರೆಗೆ 21 ಮೃತದೇಹಗಳನ್ನು ಹೊರತೆಗೆಯಲಾಗಿದೆ. ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎನ್ನುವುದು ನಿಖರವಾಗಿ ತಿಳಿದಿಲ್ಲ. ಇನ್ನಷ್ಟು ಮಂದಿ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆಯೇ ಎಂದು ತಿಳಿಯಲು ಶೋಧ ಕಾರ್ಯಾಚರಣೆ ಮುಂದುವರಿಸಿದ್ದೇವೆ". ಹಲವು ವಾಹನಗಳು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಏತನ್ಮಧ್ಯೆ ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಅವರು ರಾಜ್ಯ ಆರೋಗ್ಯ ಇಲಾಖೆಯ ತುರ್ತುಸಭೆಯನ್ನು ಮಧ್ಯರಾತ್ರಿ ನಡೆಸಿ, ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜತೆಗೆ ಮೃತರ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯನ್ನು ಕೂಡಾ ತ್ವರಿತಗೊಳಿಸುವಂತೆ ಆದೇಶಿಸಿದರು. ಸೋಮವಾರ ಮುಂಜಾನೆ 6 ಗಂಟೆಗೆ ಮರಣೋತ್ತರ ಪರೀಕ್ಷಾ ಕಾರ್ಯಗಳನ್ನು ಆರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಿಎಂ ಪಿಣರಾಯಿ ವಿಜಯನ್, ಪರಿಹಾರ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುವಂತೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Similar News