ಕೇರಳ: ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ನೆರವು
ಮಲಪ್ಪುರಂ (ಕೇರಳ): ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಮಲಪ್ಪುರಂ ಜಿಲ್ಲೆಯ ತಿರುರಂಗಡಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದು, ರವಿವಾರ ತಾನೂರ್ ಕರಾವಳಿಯಲ್ಲಿ ದೋಣಿ ಮಗುಚಿದ ಘಟನೆಯಲ್ಲಿ ಬದುಕುಳಿದವರನ್ನು ಭೇಟಿಯಾದರು.
ಕೇರಳ ಸರಕಾರ ಕೂಡ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಸಂತ್ರಸ್ತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಮುಖ್ಯಮಂತ್ರಿ ವಿಜಯನ್ , ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದರು.
ರವಿವಾರ (ಮೇ 7) ಪರಪ್ಪನಂಗಡಿಯಲ್ಲಿ ಕಿಕ್ಕಿರಿದು ತುಂಬಿದ್ದ ಡಬಲ್ ಡೆಕ್ಕರ್ ಪ್ರವಾಸಿ ದೋಣಿ ಮುಳುಗಿದ ಪರಿಣಾಮ ಪೊಲೀಸ್ ಅಧಿಕಾರಿ ಸೇರಿದಂತೆ 22 ಜನರು ಸಾವನ್ನಪ್ಪಿದ್ದಾರೆ.
ಕೇರಳದ ಕಂದಾಯ ಸಚಿವ ಕೆ. ರಾಜನ್ ಅವರು ದೋಣಿ ಮುಳುಗಿದ ಘಟನೆಯಲ್ಲಿ ಇದುವರೆಗೆ 22 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ರಕ್ಷಣಾ ತಂಡಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
"ವಿವಿಧ ಆಸ್ಪತ್ರೆಗಳಲ್ಲಿ37 ಜನರನ್ನು ಗುರುತಿಸಲಾಗಿದೆ. 22 ಜನರು ಸಾವನ್ನಪ್ಪಿದ್ದಾರೆ. . ಐದು ಜನರು ಈಜಿ ದಡ ಸೇರಿದ್ದಾರೆ. ಒಟ್ಟು 37 ಜನರನ್ನು ಗುರುತಿಸಲಾಗಿದೆ" ಎಂದು ರಾಜ್ಯ ಸಚಿವರು ಹೇಳಿದರು.