ವಲಸಿಗ ಕಾರ್ಮಿಕರಿಗೆ ಹಲ್ಲೆ ಕುರಿತು ನಕಲಿ ವೀಡಿಯೋ ಪ್ರಕರಣ: ಯೂಟ್ಯೂಬರ್ ಕಶ್ಯಪ್ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಸ್ಥಿರ ಸರಕಾರವಿರುವ ತಮಿಳುನಾಡಿನಂತಹ ರಾಜ್ಯದಲ್ಲಿ ನೀವು ಅಶಾಂತಿ ಹರಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ
ಹೊಸದಿಲ್ಲಿ: ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂಬ ಕುರಿತು ನಕಲಿ ಸುದ್ದಿಗಳನ್ನು ಮತ್ತು ವೀಡಿಯೋಗಳನ್ನು ತನ್ನ ಯೂಟ್ಯೂಬ್ ಚಾನಲ್ ಮೂಲಕ ಹರಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಮನೀಶ್ ಕಶ್ಯಪ್ ತನ್ನ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇದೇ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸುರಕ್ಷತೆ ಕಾಯಿದೆಯಡಿ ತನ್ನ ಬಂಧನವನ್ನೂ ರದ್ದುಗೊಳಿಸಬೇಕೆಂದು ಆತ ಸಲ್ಲಿಸಿದ್ದ ಅರ್ಜಿಯನ್ನೂ ಪರಿಗಣಿಸಲು ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲ ಅವರ ಪೀಠ ನಿರಾಕರಿಸಿದೆ.
ಆದರೆ ಇದೇ ಅರ್ಜಿಗಳನ್ನುಹೈಕೋರ್ಟಿಗೆ ಸಲ್ಲಿಸುವ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಕಶ್ಯಪ್ ಗೆ ನೀಡಿದೆ.
“ಒಂದು ಶಾಂತ ರಾಜ್ಯವಿದೆ, ತಮಿಳುನಾಡು, ಅಲ್ಲಿನ ಶಾಂತಿ ಕದಡಲು ನೀವು ಏನು ಬೇಕಾದರೂ ಸುದ್ದಿ ಹರಡಿಸುತ್ತೀರಿ, ಇದನ್ನು ಆಲಿಸಲು ನಾವು ಸಿದ್ಧರಿಲ್ಲ,” ಎಂದು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಮೌಖಿಕವಾಗಿ ಪ್ರತಿಕ್ರಿಯಿಸಿದರು.
ವಿಚಾರಣೆ ಆರಂಭಿಸುತ್ತಲೇ ಪ್ರತಿಕ್ರಿಯಿಸಿದ ಸಿಜೆಐ “ಏನು ಮಾಡಲು ಸಾಧ್ಯ? ನೀವು ಈ ನಕಲಿ ವೀಡಿಯೋ ತಯಾರಿಸಿದ್ದೀರಿ,” ಎಂದರು.
ಕಶ್ಯಪ್ ಪರ ಹಾಜರಿದ್ದ ಹಿರಿಯ ವಕೀಲ ಮನೀಂದರ್ ಸಿಂಗ್ ಪ್ರತಿಕ್ರಿಯಿಸಿ ಕೆಲ ಮುಖ್ಯವಾಹಿನಿ ದಿನಪತ್ರಿಕೆಗಳು ಪ್ರಕಟಿಸಿದ ಸುದ್ದಿಯ ಆಧಾರದಲ್ಲಿ ವೀಡಿಯೋ ತಯಾರಿಸಲಾಗಿತ್ತು, ಕಶ್ಯಪ್ ಅವರನ್ನು ಬಂಧಿಸಿದ್ದರೆ ಅಂತಹುದೇ ಸುದ್ದಿ ಪ್ರಕಟಿಸಿದ ಇತರ ಪತ್ರಿಕೆಗಳ ಪತ್ರಕರ್ತರನ್ನೂ ಅದೇ ಕಾಯಿದೆಯಡಿ ಬಂಧಿಸಬೇಕು ಎಂದು ಹೇಳಿದರು.
ತಮಿಳುನಾಡಿನಲ್ಲಿ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ಮೊದಲ ಎಫ್‌ಐಆರ್ ದಾಖಲಾದ ಬಿಹಾರಕ್ಕೆ ವರ್ಗಾಯಿಸಬೇಕೆಂದು ಕೋರಿದರು. ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮಿತಿಸಿಲ್ಲ.
ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, ಅರ್ಜಿದಾರರು ಮದ್ರಾಸ್ ಹೈಕೋರ್ಟಿಗೆ ತಮ್ಮ ಅಪೀಲಿನೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಅರ್ಜಿದಾರ ಪತ್ರಕರ್ತನಲ್ಲ, ಬದಲು ಬಿಹಾರದ ಚುನಾವಣೆಯೊಂದರಲ್ಲಿ ಸ್ಪರ್ಧಿಸಿದ್ದ ರಾಜಕಾರಣಿ ಎಂದರು.