×
Ad

ಕೇಂದ್ರೀಯ ತನಿಖಾ ಏಜನ್ಸಿಗಳ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸಲು ಮೂರು ತಿಂಗಳ ಗಡುವು ವಿಧಿಸಿದ ಸುಪ್ರೀಂ ಕೋರ್ಟ್

Update: 2023-05-08 14:07 IST

ಹೊಸದಿಲ್ಲಿ: ಕೇಂದ್ರೀಯ ತನಿಖಾ ಏಜನ್ಸಿಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆದೇಶಿಸಿ ತಾನು ನೀಡಿದ ಡಿಸೆಂಬರ್‌ 2020 ತೀರ್ಪನ್ನು ಅನುಷ್ಠಾನಕ್ಕೆ ತರಲು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಜುಲೈ 18ರ ತನಕ ಮೂರು ತಿಂಗಳ ಗಡುವನ್ನು ವಿಧಿಸಿದೆ. ಪಾರದರ್ಶಕತೆ ಮತ್ತು ಆರೋಪಿಗಳು ಹಾಗೂ ವಿಚಾರಣಾಧೀನ ಕೈದಿಗಳ ಮಾನವ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಈ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಕೋರ್ಟ್‌ ಆದೇಶವನ್ನು ಪಾಲಿಸಲು ಹಲವು ತನಿಖಾ ಏಜನ್ಸಿಗಳು ಕ್ರಮಕೈಗೊಂಡಿಲ್ಲ ಎಂಬುದು ಕಳವಳಕಾರಿಯಾಗಿದೆ ಎಂದು ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರ ನೇತೃತ್ವದ ಪೀಠ ಹೇಳಿದೆ.

“ಏಳು ತನಿಖಾ ಏಜನ್ಸಿಗಳ ಪೈಕಿ ನಾಲ್ಕು ಏಜನ್ಸಿಗಳಲ್ಲಿ ಸುಪ್ರೀಂ ಕೋರ್ಟಾ ಆದೇಶ ಜಾರಿಗೆ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ,” ಎಂದು ಸುಪ್ರೀಂ ಕೋರ್ಟ್‌ ಇತ್ತೀಚಿನ ಅಫಿಡವಿಟ್‌ ಒಂದರಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರ ಈ ಆದೇಶ ಪಾಲಿಸದೇ ಇರಲು ನಿರ್ಧರಿಸಿದರೆ ಕೇಂದ್ರ ಸರ್ಕಾರದ ಕಾರ್ಯದರ್ಶಿ (ಗೃಹ) ಅವರು ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಹಾಜರಿದ್ದು ಕಾರಣ ನೀಡಬೇಕು  ಹಾಗೂ ಆದೇಶ ಪಾಲಿಸದೇ ಇರುವುದಕ್ಕೆ ನ್ಯಾಯಾಂಗ ನಿಂದನೆಗಾಗಿ ಯಾಕೆ ಕ್ರಮಕೈಗೊಳ್ಳಬಾರದು ಎಂಬುದಕ್ಕೆ ಉತ್ತರಿಸಬೇಕು ಎಂದು ಹೇಳಿದೆ.

ಡಿಸೆಂಬರ್‌ 2020 ತೀರ್ಪಿನಲ್ಲಿ ಜಸ್ಟಿಸ್‌ ರೋಹಿಂಟನ್‌ ನಾರಿಮನ್‌ (ಈಗ ನಿವೃತ್ತ) ಅವರ ನೇತೃತ್ವದ ಪೀಠವು ತನ್ನ ಆದೇಶದಲ್ಲಿ  ಸಿಬಿಐ, ಎನ್‌ಐಎ, ಜಾರಿ ನಿರ್ದೇಶನಾಲಯ, ನಾರ್ಕಾಟಿಕ್ಸ್‌ ಕಂಟ್ರೋಲ್‌ ಬ್ಯುರೋ, ಡಿಆರ್‌ಐ, ಗಂಭೀರ ಅಪರಾಧ ತನಿಖಾ ಕಚೇರಿಗಳು ಹಾಗೂ ವಿಚಾರಣೆ ನಡೆಸುವ ಹಾಗೂ ಬಂಧಿಸುವ ಅಧಿಕಾರ ಹೊಂದಿರುವ ಯಾವುದೇ ಏಜನ್ಸಿಯ ಕಚೇರಿಯಲ್ಲಿ ಸೀಸಿಟಿವಿ ಕ್ಯಾಮೆರಾ ಮತ್ತು ರೆಕಾರ್ಡಿಂಗ್‌ ಪರಿಕರಗಳನ್ನು ಅಳವಡಿಸಬೇಕು ಎಂದು ಆದೇಶಿಸಿತ್ತು.

ಎರಡು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ಮತ್ತಿ ನಿಕೋಬಾರ್‌ ದ್ವೀಪಗಳು ಮತ್ತು ಲಡಾಖ್‌ ಮತ್ತು ರಾಜ್ಯಗಳಾದ ಮಿಜೋರಾಂ ಮತ್ತು ಗೋವಾ ಈ ಆದೇಶವನ್ನು ಪೂರ್ಣವಾಗಿ ಪಾಲಿಸಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆದರೆ ಆದೇಶ ಪಾಲಿಸದ ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳೂ ಆ ರಾಜ್ಯಗಳು ಜುಲೈ 18ರೊಳಗೆ ಅಫಿಡವಿಟ್‌ ಸಲ್ಲಿಸದೇ ಇದ್ದರೆ ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಬೇಕೆಂದು ನ್ಯಾಯಾಲಯ ಹೇಳಿದೆ.

Similar News