×
Ad

ಮಲಪ್ಪುರಂ ದೋಣಿ ದುರಂತದಲ್ಲಿ ಒಂದೇ ಕುಟುಂಬದ 11 ಮಂದಿ ಬಲಿ

Update: 2023-05-08 18:57 IST

ತನೂರ್‌ : ಮಲಪ್ಪುರಂನ ತನೂರು ಎಂಬಲ್ಲಿ ನಡೆದ ದೋಣಿ ದುರಂತದಲ್ಲಿ ಸ್ಥಳೀಯ ನಿವಾಸಿ ಸೈದಲವಿ ಎಂಬವರು ತಮ್ಮ 11 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಮತ್ತು ನಾಲ್ಕು ಮಂದಿ ಮಕ್ಕಳು ಸೇರಿದ್ದಾರೆ.

ಸೈದಲವಿ, ಅವರ ಸಹೋದರರಾದ ಕುನ್ನುಮ್ಮಲ್‌ ಜಬೀರ್‌, ಕುನ್ನುಮ್ಮಲ್‌ ಸಿರಾಜ್‌ ಅವರ ಪತ್ನಿ, ಮಕ್ಕಳು ರವಿವಾರ ಕುಟುಂಬದ ಮನೆಯಲ್ಲಿ ಸೇರಿದ್ದರು. ಈ ಸಂದರ್ಭ ಮಕ್ಕಳು  ಬೋಟ್‌ ಸವಾರಿಗೆ ಹೋಗಲು ಹಠ ಹಿಡಿದ ಕಾರಣ ಕುಟುಂಬ ಬೋಟ್‌ ರೈಡಿಂಗ್‌ಗೆ ಹೋಗಲು ನಿರ್ಧರಿಸಿದ್ದಾರೆನ್ನಲಾಗಿದೆ.

ಸೈದಲವಿ ಮಕ್ಕಳನ್ನು ಮತ್ತು ಕುಟುಂಬದ ಇತರ ಸದಸ್ಯರನ್ನು ಕಟ್ಟಂಗಲ್‌ಗೆ ತಲುಪಿಸಿ ವಾಪಸಾಗಿದ್ದರು. ನಂತರ ಪತ್ನಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಅತ್ತ ಕಡೆಯಿಂದ ಅಳು ಮಾತ್ರ ಕೇಳಿಬಂದಿತ್ತು. ತಡ ಮಾಡದೆ ಅಲ್ಲಿಗೆ ಧಾವಿಸಿದಾಗ ಕುಟುಂಬದ ಹಲವು ಸದಸ್ಯರು ದುರಂತ ಅಂತ್ಯ ಕಂಡಿರುವುದು ತಿಳಿದು ಬಂದಿತ್ತು.

ಮೃತರಲ್ಲಿ ಸಿರಾಜ್‌ ಪತ್ನಿ ಮತ್ತು 10 ತಿಂಗಳ ಮಗು, ಜಲ್ಸಿಯಾ, ಜರೀರ್‌, ನೈರಾ, ರುಶ್ದಾ, ಸಹಾರ, ಸೀನತ್‌, ಶಮ್ನಾ, ಹಸ್ನಾ  ಮತ್ತು ಸಫ್ನಾ ಸೇರಿದ್ದಾರೆ ಎಂದು mathrubhumi ವರದಿ ಮಾಡಿದೆ.

ಈ ದೋಣಿ ದುರಂತದಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ.

Similar News