ಪಾಕ್ ಕೈತಪ್ಪಲಿರುವ ಏಷ್ಯಾ ಕಪ್ ಕ್ರಿಕೆಟ್ ಆತಿಥ್ಯ: ವರದಿ

Update: 2023-05-09 03:57 GMT

ಹೊಸದಿಲ್ಲಿ: ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನದಿಂದ ಹೊರಗೆ ನಡೆಸುವ ಬಗ್ಗೆ ಸೋಮವಾರ ನಡೆದ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಸಭೆ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿಟ್ಟಿದ್ದ ಟೂರ್ನಿಯ ಹೈಬ್ರೀಡ್ ಮಾದರಿಯನ್ನು ಸದಸ್ಯದೇಶಗಳು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ ತಿಂಗಳು ತೀರಾ ತೇವಾಂಶದ ವಾತಾವರಣ ಇರುವ ಕಾರಣದಿಂದ ಆಟಗಾರರಿಗೆ ಗಾಯಗಳಾಗುವ ಸಾಧ್ಯತೆ ಇದೆ. ಆದ್ದರಿಂದ ಶ್ರೀಲಂಕಾ ಈ ಆರು ದೇಶಗಳ ಕ್ರಿಕೆಟ್ ಹಬ್ಬದ ಆತಿಥ್ಯ ವಹಿಸುವ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಈ ಹಿನ್ನಡೆಯ ಬಳಿಕ ಸೆಪ್ಟೆಂಬರ್ 2-17ರ ವರೆಗೆ ನಡೆಯುವ ಟೂರ್ನಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳುತ್ತದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ರಾಜತಾಂತ್ರಿಕ ಸಂಘರ್ಷದ ಕಾರಣದಿಂದ ಪಾಕಿಸ್ತಾನಕ್ಕೆ ಭಾರತೀಯ ಕ್ರಿಕೆಟ್ ತಂಡ ಕಳುಹಿಸಲು ಬಿಸಿಸಿಐ ನಿರಾಕರಿಸಿದ ಹಿನ್ನೆಲೆಯಲ್ಲಿ ಪರ್ಯಾಯ ಪ್ರಸ್ತಾವನೆಯನ್ನು ಎಸಿಸಿಗೆ ಸಲ್ಲಿಸುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗಿತ್ತು. ಆದರೆ ಎಸಿಸಿ ಸದಸ್ಯದೇಶಗಳ ಮನಸ್ಸು ಬದಲಾದಲ್ಲಿ ಮಂಗಳವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೆ.

ಪಾಕಿಸ್ತಾನ ತನ್ನ ಪಂದ್ಯಗಳನ್ನು ತವರು ನೆಲದಲ್ಲಿ ಆಡಲಿದೆ ಹಾಗೂ ಭಾರತ ತಮ್ಮ ಪಂದ್ಯಗಳನ್ನು ಯುಎಇನಲ್ಲಿ ಆಡಲಿ ಎಂಬ ಪ್ರಸ್ತಾವವನ್ನು ಪಿಸಿಬಿ ಮುಂದಿಟ್ಟಿತ್ತು. ಆದರೆ ಈ ಹೈಬ್ರೀಡ್ ಮಾದರಿ ಸ್ವೀಕಾರಾರ್ಹವಲ್ಲ ಹಾಗೂ ಇದಕ್ಕೆ ಬೇಕಾದ ಹಣಕಾಸು ಅಗತ್ಯತೆಗಳ ಮಂಜೂರಾತಿ ಅಸಾಧ್ಯ ಎಂದು ಅಭಿಪ್ರಾಯಪಟ್ಟ ಎಸಿಸಿ ಸಭೆ ಪಾಕಿಸ್ತಾನದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದರೆ, ಮೂರನೇ ತಂಡ ದುಬೈ ಹಾಗೂ ಪಾಕಿಸ್ತಾನದ ನಡುವೆ ಪ್ರವಾಸ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ ಎಂದು ಮೂಲಗಳು ಹೇಳಿವೆ.

Similar News