ಡಾರ್ವಿನ್ ಸಿದ್ಧಾಂತ ತಿರಸ್ಕರಿಸಿದವರ ಹಿಮ್ಮುಖ ನಡಿಗೆ
1958ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ವಿಜ್ಞಾನ ನೀತಿ ನಿರ್ಣಯ ಆಧುನಿಕ ವಿಜ್ಞಾನಕ್ಕೆ ಅದರ ಬದ್ಧತೆ ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅದರ ವಿಶ್ಲೇಷಣಾತ್ಮಕ ಶಕ್ತಿಯನ್ನು ಖಚಿತಪಡಿಸುತ್ತದೆ. ಸಾಂವಿಧಾನಿಕ ತಿದ್ದುಪಡಿಯ ಮೂಲಕ (ಆರ್ಟಿಕಲ್ 51ಎ) 1976ರಲ್ಲಿ ಭಾರತ ಸರಕಾರ ವಿಜ್ಞಾನ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಒತ್ತಿಹೇಳಿತು. ಭಾರತದಂತಹ ಸಂಪ್ರದಾಯಬಂಧಿ ದೇಶದಲ್ಲಿ ಮೌಢ್ಯತೆಗಳನ್ನು ಮೀರಿ ಬೆಳೆಯುತ್ತಿರುವ ಪೀಳಿಗೆಯ ಉತ್ತಮ ಹಿತಾಸಕ್ತಿಗಳನ್ನು, ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಜ್ಞಾನದ ಪಾತ್ರಕ್ಕೆ ಒತ್ತು ನೀಡುವ ಮೂಲಕ ಮಾತ್ರ ಸುರಕ್ಷಿತಗೊಳಿಸಬಹುದು. ಆ ದೃಷ್ಟಿಕೋನದಿಂದ, ಎನ್‌ಸಿಇಆರ್‌ಟಿ ಕ್ರಮ ನಿಜಕ್ಕೂ ಶೋಚನೀಯ ಮತ್ತು ಹಿಮ್ಮುಖವಾದುದು.
2018ರಲ್ಲಿ, ದೇಶದ ಆಗಿನ ಉನ್ನತ ಶಿಕ್ಷಣ ಖಾತೆ ರಾಜ್ಯ ಸಚಿವರು ಜೀವ ವಿಕಾಸ ಸಿದ್ಧಾಂತವನ್ನು ಶಾಲಾ ಪಠ್ಯಕ್ರಮದಿಂದ ತೆಗೆದುಹಾಕಬೇಕು ಎಂದಿದ್ದರು. ಮಂಗನಿಂದ ಮಾನವನಾದುದನ್ನು ನೋಡಿದವರು ಯಾರೂ ಇಲ್ಲ ಎಂಬುದು ಅವರು ಅದಕ್ಕೆ ಕೊಟ್ಟ ಕಾರಣವಾಗಿತ್ತು. ಕಡೆಗೆ ಅವರು ಡಾರ್ವಿನ್ ಸಿದ್ಧಾಂತಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದರು.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ 2,000ಕ್ಕೂ ಹೆಚ್ಚು ಭಾರತೀಯ ವಿಜ್ಞಾನಿಗಳು ಅದನ್ನು ತಪ್ಪುದಾರಿಗೆಳೆಯುವ ಮತ್ತು ಅವೈಜ್ಞಾನಿಕ ಹೇಳಿಕೆ ಎಂದರು. ಸಚಿವರ ಹೇಳಿಕೆಗೆ ಪೂರ್ತಿ ವಿರುದ್ಧವಾಗಿದ್ದ ವಿಜ್ಞಾನಿಗಳ ಹೇಳಿಕೆ, ಪ್ರತಿಯೊಂದು ಹೊಸ ವೈಜ್ಞಾನಿಕ ಸಂಶೋಧನೆಯೂ ಡಾರ್ವಿನ್ ಸಿದ್ಧಾಂತವನ್ನು ಬೆಂಬಲಿಸುತ್ತದೆ ಎಂದು ಪ್ರತಿಪಾದಿಸಿತ್ತು.
ಬಿಜೆಪಿಯ ಸಚಿವರೊಬ್ಬರು ಡಾರ್ವಿನ್ ವಿಕಾಸ ಸಿದ್ಧಾಂತವನ್ನು ದೂಷಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಡಾರ್ವಿನ್ 1859ರಲ್ಲಿ ತನ್ನ ಶ್ರೇಷ್ಠ ಕೃತಿ ‘ಆನ್ ದಿ ಆರಿಜಿನ್ ಆಫ್ ಸ್ಪೀಸೀಸ್’ ಪ್ರಕಟಿಸಿದಾಗಿನಿಂದ ಪ್ರಪಂಚದಾದ್ಯಂತದ ಧಾರ್ಮಿಕ ಮೂಲಭೂತವಾದಿಗಳ ಟೀಕೆ ಎದುರಾಗುತ್ತಲೇ ಇದೆ. ನೈಸರ್ಗಿಕ ಆಯ್ಕೆಯಿಂದ ಸಾಮಾನ್ಯ ಸಂತತಿ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದು ಡಾರ್ವಿನ್.
ಜೀವರಾಶಿಯ ಹುಟ್ಟು ಶತಕೋಟಿ ವರ್ಷಗಳ ಹಿಂದೆ ಪ್ರಾರಂಭವಾಯಿತು. ಅದರ ವಿಕಾಸ ಇಂದಿಗೂ ನಮ್ಮ ಸುತ್ತಲೂ ಮುಂದುವರಿಯುತ್ತಿದೆ ಮತ್ತು ಇದು ಶಾಶ್ವತ ಪ್ರಕ್ರಿಯೆ ಎಂಬ ಡಾರ್ವಿನ್ ಕಲ್ಪನೆ ಮಾನವಕುಲದ ಶ್ರೇಷ್ಠ ಒಳನೋಟಗಳಲ್ಲಿ ಒಂದು. ಈ ಸಿದ್ಧಾಂತ ವಿಶ್ವದಲ್ಲಿ ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ವ್ಯಾಖ್ಯಾನಿಸಿತು. ಮಾತ್ರವಲ್ಲ, ದೈವಿಕ ಹಸ್ತಕ್ಷೇಪ ಎಂಬ ವಾದವನ್ನು ನಿರಾಕರಿಸಿತು.
ಇತಿಹಾಸ ಪುನರಾವರ್ತನೆಯಾಗುತ್ತದೆ. ಮೊದಲು ದುರಂತವಾಗಿ, ನಂತರ ಪ್ರಹಸನವಾಗಿ ಎಂದು ಹೇಳಿದ್ದು ಕಾರ್ಲ್ ಮಾರ್ಕ್ಸ್. ಆದರೆ ಇಲ್ಲಿ ಮೊದಲು ಪ್ರಹಸನ ನಡೆದು ನಂತರ ದುರಂತ ಕಾಣಿಸಿದೆ. ಮಂಗನಿಂದ ಮಾನವ ಸಿದ್ಧಾಂತದ ಬಗ್ಗೆ ಸಚಿವರು ತಮ್ಮ ಅಪನಂಬಿಕೆ ವ್ಯಕ್ತಪಡಿಸಿ ಹಾಸ್ಯಾಸ್ಪದ ಹೇಳಿಕೆ ನೀಡಿದ ಐದು ವರ್ಷಗಳ ಬಳಿಕ, ದುರಂತ ಬಂದು ಬಡಿದಿದೆ.
ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) 10ನೇ ತರಗತಿ ಪಠ್ಯಕ್ರಮದಿಂದ ಜೀವ ವಿಕಾಸ ಸಿದ್ಧಾಂತ ತೆಗೆದುಹಾಕಲು ನಿರ್ಧರಿಸಿದೆ. ಆರಂಭದಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮದ ಈ ಭಾಗವನ್ನು ತೆಗೆದುಹಾಕುವ ನಿರ್ಧಾರವನ್ನು ಕೋವಿಡ್ ಸಮಯದಲ್ಲಿ ಆನ್‌ಲೈನ್ ಬೋಧನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೈಬಿಟ್ಟಿತ್ತು. ಆದರೆ ಈಗ ಪಠ್ಯದ ಆ ಭಾಗವನ್ನು ಶಾಶ್ವತವಾಗಿ ತೆಗೆದುಹಾಕಲಾಗಿದೆ. ಇದನ್ನು ತಾರ್ಕಿಕ ಹೆಜ್ಜೆ ಎಂದೂ ಅದು ಹೇಳಿಕೊಂಡಿದೆ.
10ನೇ ತರಗತಿಯ ಪಠ್ಯಪುಸ್ತಕಗಳಲ್ಲಿನ ವಿಷಯಗಳನ್ನು ತಾರ್ಕಿಕಗೊಳಿಸುವುದರ ಭಾಗವಾಗಿ ಮೂಲ ಅಧ್ಯಾಯದ ‘ಆನುವಂಶಿಕತೆ ಮತ್ತು ವಿಕಸನ’ ಎಂಬ ಶೀರ್ಷಿಕೆಯನ್ನು ‘ಆನುವಂಶಿಕತೆ’ ಎಂದು ಬದಲಾಯಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿಕೊಂಡಿದೆ. ಚಾರ್ಲ್ಸ್ ರಾಬರ್ಟ್ ಡಾರ್ವಿನ್, ಭೂಮಿಯ ಮೇಲಿನ ಜೀವನದ ಮೂಲ, ಅಣು ಜೈವಿಕತೆ, ವಿಕಸನ, ವಿಕಸನ ಮತ್ತು ವರ್ಗೀಕರಣ, ವಿಕಸನೀಯ ಸಂಬಂಧಗಳ ಪತ್ತೆಹಚ್ಚುವಿಕೆ, ಹಂತಗಳ ಮೂಲಕ ವಿಕಸನ ಮತ್ತು ಮಾನವ ವಿಕಾಸ -ಇವು ಈ ಅಧ್ಯಾಯದಲ್ಲಿ ಕೈಬಿಡಲಾದ ವಿಷಯಗಳು.
ದೇಶದಲ್ಲಿ ವಿಜ್ಞಾನ ಶಿಕ್ಷಣಕ್ಕೆ ನೀಡಲಾದ ಈ ಪೆಟ್ಟಿನ ಬಗ್ಗೆ ತಮ್ಮ ದಿಗ್ಭ್ರಮೆ ವ್ಯಕ್ತಪಡಿಸಿ 1,800 ವಿಜ್ಞಾನಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಐದು ವರ್ಷಗಳ ಹಿಂದೆ ಅವರು ಯಾವುದು ಆಗಬಾರದೆಂದು ವಿರೋಧಿಸಿದ್ದರೋ ಅದೇ ಆಗಿಬಿಟ್ಟಿದೆ. ಈ ವಿದ್ಯಮಾನದ ಬಗ್ಗೆ ಹೇಳುವಾಗ ಒಂದು ವಿಚಾರವನ್ನು ಉಲ್ಲೇಖಿಸಬೇಕು. ಜೀವಶಾಸ್ತ್ರ ತರಗತಿಗಳಲ್ಲಿ ವಿಕಾಸದ ಬೋಧನೆಯನ್ನು ಆಪ್ಷನಲ್ ಮಾಡುವ ಮಂಡಳಿ ನಿರ್ಧಾರದ ಬಗ್ಗೆ ಕೇಳಿದಾಗ ಪ್ರಖ್ಯಾತ ವಿಕಸನ ಜೀವಶಾಸ್ತ್ರಜ್ಞ ಮತ್ತು ವಿಜ್ಞಾನ ಸಂವಹನಕಾರ ದಿ. ಸ್ಟೀಫನ್ ಜೇ ಗೌಲ್ಡ್ ಹೇಳಿದ್ದು- ನಾವು ಇಂಗ್ಲಿಷ್ ಕಲಿಸುವುದನ್ನು ಮುಂದುವರಿಸಲಿದ್ದೇವೆ, ಆದರೆ ನೀವು ಇನ್ನು ಮುಂದೆ ವ್ಯಾಕರಣವನ್ನು ಕಲಿಸಬೇಕಾಗಿಲ್ಲ.
ಪಠ್ಯಕ್ರಮದಿಂದ ವಿಕಾಸದ ಅಧ್ಯಾಯವನ್ನು ಹೊರಗಿಡುವುದರ ವಿರುದ್ಧದ ಮನವಿಯಲ್ಲಿ ವಿಜ್ಞಾನಿಗಳು, ವೈಜ್ಞಾನಿಕ ಮನೋಭಾವ ರೂಪಿಸಲು ವಿಕಾಸದ ಪ್ರಕ್ರಿಯೆಯ ತಿಳುವಳಿಕೆ ನಿರ್ಣಾಯಕವಾದುದು ಮತ್ತು ಅದರಿಂದ ವಿದ್ಯಾರ್ಥಿಗಳನ್ನು ವಂಚಿತಗೊಳಿಸುವುದು ಮಾಧ್ಯಮಿಕ ಶಿಕ್ಷಣದ ಅಣಕದಂತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಕಸನ ಜೀವಶಾಸ್ತ್ರವು ಜೀವಶಾಸ್ತ್ರದ ಯಾವುದೇ ಉಪ ಕ್ಷೇತ್ರಕ್ಕೆ ಮಾತ್ರ ಮುಖ್ಯವಲ್ಲ, ಬದಲಾಗಿ ಅದು ನಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಅಗತ್ಯ.
ನೈಸರ್ಗಿಕ ಆಯ್ಕೆಯ ತತ್ವ ಮಾನವ ವಿಕಾಸವನ್ನು ಅರ್ಥಮಾಡಿಕೊಳ್ಳಲು, ಕೆಲವು ಪ್ರಭೇದಗಳು ಏಕೆ ಅಳಿವಿನಂಚಿಗೆ ಹೋಗುತ್ತವೆ, ಸಾಂಕ್ರಾಮಿಕ ರೋಗಗಳು ಹೇಗೆ ವರ್ಧಿಸುತ್ತವೆ ಮತ್ತು ಔಷಧ ಸಂಶೋಧನೆ, ಸಾಂಕ್ರಾಮಿಕ ರೋಗಶಾಸ್ತ್ರ, ಪರಿಸರ ವಿಜ್ಞಾನ ಮತ್ತು ಪರಿಸರದಂತಹ ಕೆಲವು ನಿರ್ಣಾಯಕ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ ಎಂಬುದರೆಡೆಗೆ ವಿಜ್ಞಾನಿಗಳು ಗಮನ ಸೆಳೆದಿದ್ದಾರೆ.
ಇಂದು ದೇಶದಲ್ಲಿ ವಿಜ್ಞಾನ ಶಿಕ್ಷಣ ಕುಗ್ಗುತ್ತಿರುವುದು ನಿಜಕ್ಕೂ ಕಳವಳಕಾರಿ. ನಮ್ಮ ಒಟ್ಟಾರೆ ಬೌದ್ಧಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ದೃಷ್ಟಿಯಿಂದ ಅದು ಉತ್ತಮವಲ್ಲ. ಸರಕಾರದ, ಧರ್ಮದ ಹೆಸರಿನ ಪ್ರಭುತ್ವ ಮಾದರಿ ಪ್ರಬಲವಾಗಿರುವ ದೇಶಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ ಏಕೆ ಕುಸಿಯುತ್ತಿದೆ ಎಂಬುದನ್ನು ತಿಳಿಯುವುದು ಕಷ್ಟವೇನಲ್ಲ. ಆದರೆ ಸಾಂವಿಧಾನಿಕ ನೆಲೆಯನ್ನು ಹೊಂದಿರುವ ಭಾರತ ಹೀಗೆ ಧರ್ಮದ ಹೆಸರಿನ ಪ್ರಭುತ್ವ ಮಾದರಿಯ ಬಲೆಗೆ ಬೀಳಬಾರದು.
ಶಾಲಾ ಪಠ್ಯಕ್ರಮದಿಂದ ಜೀವ ವಿಕಾಸ ಕುರಿತ ಅಧ್ಯಾಯ ತೆಗೆದುಹಾಕುವುದನ್ನು ಇದಕ್ಕಿಂತ ಬೇರೆಯೆಂದು ನೋಡಲಿಕ್ಕಾಗದು.
ನಮ್ಮ ಚೈತನ್ಯ ಮತ್ತು ಸಂಸ್ಕೃತಿಯನ್ನು ಕಾಣಿಸುವ ಶಕ್ತಿಯಾಗಿ ವಿಜ್ಞಾನದ ಪ್ರಸ್ತುತತೆಯನ್ನು ಪ್ರಶ್ನಿಸುವ ಪ್ರಸಕ್ತ ಸರಕಾರದ ಕೆಲವು ನಾಯಕರ ಪ್ರಯತ್ನದ ಭಾಗವಾಗಿ ಇದನ್ನು ನೋಡಬೇಕು. 1990ರ ದಶಕದ ಕಡೆಯಲ್ಲಿ ಮಾನವ ಸಂಪನ್ಮೂಲ ಸಚಿವರು ವಿಶ್ವವಿದ್ಯಾನಿಲಯಗಳಲ್ಲಿ ವಿಜ್ಞಾನದ ಶಾಖೆಯಾಗಿ ಜ್ಯೋತಿಷ್ಯ ಕಲಿಕೆ ತರಲು ಪ್ರಯತ್ನಿಸಿದರು.
ಪ್ರಾಚೀನ ಭಾರತದ ವಿಜ್ಞಾನಿಗಳು ಈಗ ಸಾಧಿಸುತ್ತಿರುವ ಅನೇಕ ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳನ್ನು ಆಗಲೇ ಸಾಧಿಸಿದ್ದರು ಮತ್ತು ಪ್ರಕೃತಿಯನ್ನು ವಿವರಿಸುವ ಸಾಮಾನ್ಯ ಸಾಪೇಕ್ಷತೆ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತಗಳನ್ನೂ ಆಗಿನವರು ಮೀರಿಸಿದ್ದರು ಎಂದೆಲ್ಲ ವಾದಿಸಲಾಯಿತು. ಗೋಮೂತ್ರ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಆದರೆ ಅದಾವುದೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.
ಮನುಷ್ಯ ಹೊರ ಪ್ರಪಂಚದ ಸೀಮಿತ ಜ್ಞಾನವನ್ನಷ್ಟೇ ಹೊಂದಿದ್ದ ಹೊತ್ತಿನಲ್ಲಿ ಪ್ರಪಂಚದ ಅನೇಕ ಸಂಸ್ಕೃತಿಗಳು ಹುಟ್ಟಿಕೊಂಡವು. ತಮ್ಮ ಕಾಲ್ಪನಿಕ ಸಾಮರ್ಥ್ಯ ಬಳಸಿಕೊಂಡು, ಅವರು ನೈಸರ್ಗಿಕ ವಿದ್ಯಮಾನಗಳ ಮೇಲೆ ಕೆಲ ತೀರ್ಮಾನಗಳಿಗೆ ಬಂದರು. ಅವುಗಳಲ್ಲಿ ಹೆಚ್ಚಿನವು ತಪ್ಪೇ ಆಗಿದ್ದವು. ಆದರೆ ಆ ತಪ್ಪುತಿಳಿವುಗಳೇ ನಂತರ ಧಾರ್ಮಿಕತೆಯ ಭಾಗವಾದವು. ಆಧುನಿಕ ವಿಜ್ಞಾನ ಅವೆಲ್ಲವನ್ನೂ ಹಿಂದಕ್ಕೆ ತಳ್ಳಿತು. 1958ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ವಿಜ್ಞಾನ ನೀತಿ ನಿರ್ಣಯ ಆಧುನಿಕ ವಿಜ್ಞಾನಕ್ಕೆ ಅದರ ಬದ್ಧತೆ ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅದರ ವಿಶ್ಲೇಷಣಾತ್ಮಕ ಶಕ್ತಿಯನ್ನು ಖಚಿತಪಡಿಸುತ್ತದೆ.
ಸಾಂವಿಧಾನಿಕ ತಿದ್ದುಪಡಿಯ ಮೂಲಕ (ಆರ್ಟಿಕಲ್ 51ಎ) 1976ರಲ್ಲಿ ಭಾರತ ಸರಕಾರ ವಿಜ್ಞಾನ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಒತ್ತಿಹೇಳಿತು. ಭಾರತದಂತಹ ಸಂಪ್ರದಾಯಬಂಧಿ ದೇಶದಲ್ಲಿ ಮೌಢ್ಯತೆಗಳನ್ನು ಮೀರಿ ಬೆಳೆಯುತ್ತಿರುವ ಪೀಳಿಗೆಯ ಉತ್ತಮ ಹಿತಾಸಕ್ತಿಗಳನ್ನು, ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಜ್ಞಾನದ ಪಾತ್ರಕ್ಕೆ ಒತ್ತು ನೀಡುವ ಮೂಲಕ ಮಾತ್ರ ಸುರಕ್ಷಿತಗೊಳಿಸಬಹುದು. ಆ ದೃಷ್ಟಿಕೋನದಿಂದ, ಎನ್‌ಸಿಇಆರ್‌ಟಿ ಕ್ರಮ ನಿಜಕ್ಕೂ ಶೋಚನೀಯ ಮತ್ತು ಹಿಮ್ಮುಖವಾದುದು.
(ಕೃಪೆ:thewire.in)