×
Ad

ಇ-ವಾಹನಗಳ ಬಳಕೆ ಹೆಚ್ಚಿಸಲಿರುವ ಚಾರ್ಜಿಂಗ್ ವ್ಯವಸ್ಥೆ

Update: 2023-05-09 12:19 IST

ದೇಶದಲ್ಲಿ ಈಚಿನ ದಿನಗಳಲ್ಲಿ ಇಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆಯು ವಿಸ್ತರಣೆಯಾಗುತ್ತಿದ್ದು. ಪರಿಸರಕ್ಕೆ ಪೂರಕವಾದ ಈ ಇವಿ ವಾಹನಗಳ ಮಾರುಕಟ್ಟೆ ದೇಶದಲ್ಲಿ ಬೆಳೆಯುತ್ತಿರುವುದು ಒಳ್ಳೆಯ ಸೂಚನೆಯಾಗಿದೆ. ಹೊಗೆ ಉಗುಳದ, ಶಬ್ದ ಮಾಲಿನ್ಯವಿಲ್ಲದ, ಕಡಿಮೆ ಸಂಚಾರ ವೆಚ್ಚದ ಈ ವಾಹನಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಇಂತಹ ವಾಹನಗಳ ಖರೀದಿಗೆ ಜನರು ಮಾರು ಹೋಗುತ್ತಿರುವುದು ದೇಶದೆಲ್ಲೆಡೆ ಕಂಡು ಬರುತ್ತಿದೆ. 

ಇಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆ ಬೆಳೆದಂತೆ, ಅವುಗಳಿಗೆ ಅಳವಡಿಸಿರುವ ಚಾರ್ಜಿಂಗ್ ಬ್ಯಾಟರಿಗಳ, ರೀಚಾರ್ಜ್‌ಗಾಗಿ ಕಾರಿಡಾರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರಕಾರವು ತ್ವರಿತಗತಿಯಲ್ಲಿ ಕ್ರಮ ತೆಗೆದುಕೊಂಡರೆ, ಈ ಯೋಜನೆಯು ಇವಿ ವಾಹನಗಳ ಮಾರುಕಟ್ಟೆ ದೇಶದಲ್ಲಿ ಬೆಳೆಯಲು ಪೂರಕವಾಗುತ್ತದೆ.

ಸದ್ಯ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ರಾಜ್ಯದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಮೈಸೂರು - ಕೊಡಗು ಹೆದ್ದಾರಿಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ತ್ವರಿತಗತಿಯಲ್ಲಿ ಚಾರ್ಜಿಂಗ್ ಸೌಲಭ್ಯ ಒದಗಿಸುವ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಿದ್ದು, ಈ ಹೆದ್ದಾರಿಗಳ ಎರಡೂ ಕಡೆಗಳಲ್ಲಿ ನೂರು ಕಿ.ಮೀ. ಅಂತರದಲ್ಲಿ ತನ್ನ ಅಧೀನದಲ್ಲಿ ಬರುವ 9 ಪೆಟ್ರೋಲ್ ಬಂಕ್‌ಗಳಲ್ಲಿ 25 ಕಿಲೋ ವ್ಯಾಟ್‌ನ ತ್ವರಿತ ಚಾರ್ಜಿಂಗ್ ವ್ಯವಸ್ಥೆಯನ್ನು ಕಂಪೆನಿಯು ಕಲ್ಪಿಸಿದೆ. ಇದು ಈ ಕಂಪೆನಿಯ ಎರಡನೇ ಹಂತದ ಯೋಜನೆಯಾಗಿದೆ. 

ಮೊದಲ ಹಂತದ ಯೋಜನೆಯಲ್ಲಿ ತಮಿಳುನಾಡಿನ ಚೆನ್ನೈ-ತಿರುಚಿ-ಮಧುರೈ ಹೆದ್ದಾರಿಯಲ್ಲಿ ಇವಿ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಿದೆ. ಈ ವ್ಯವಸ್ಥೆಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಅದು ಯಶಸ್ವಿಯಾದ ಕಾರಣ ಎರಡನೇ ಹಂತದ ಯೋಜನೆಯನ್ನು ಕಂಪೆನಿಯು ಸದ್ಯ ರಾಜ್ಯದ ಹೆದ್ದಾರಿಗಳಲ್ಲಿ ವಿಸ್ತರಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೆಂಗಳೂರು-ಮೈಸೂರು- ಬಂಡೀಪುರ-ಊಟಿ, ಬೆಂಗಳೂರು-ತಿರುಪತಿ, ಹಾಗೂ ಬೆಂಗಳೂರು-ಕೊಡೈಕೆನಾಲ್ ಹೆದ್ದಾರಿಯ ಮಾರ್ಗಗಳಲ್ಲಿಯೂ ಈ ಇವಿ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆ ಹಾಕಿಕೊಂಡಿದೆ. 

ಮುಂದಿನ ಆರು ತಿಂಗಳುಗಳಲ್ಲಿ ದೇಶಾದ್ಯಂತ ಒಟ್ಟು 200 ಇವಿ ಚಾರ್ಜಿಂಗ್ ಕಾರಿಡಾರ್‌ಗಳನ್ನು ನಿರ್ಮಿಸಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪರಿಪೂರ್ಣ ಸಿದ್ಧತೆಯಲ್ಲಿದ್ದು, ಇದು ದೇಶದ ಹೆದ್ದಾರಿಗಳಲ್ಲಿ ಇಲೆಕ್ಟ್ರಿಕಲ್ ವಾಹನಗಳ ಸಂಚಾರಕ್ಕೆ ಪೂರಕವಾದ ಮತ್ತು ಕ್ರಾಂತಿಕಾರಿ ಬದಲಾವಣೆ ತರಬಹುದು.

ಈ ವ್ಯವಸ್ಥೆಯು ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಶಬ್ದ ಮಾಲಿನ್ಯ ತಡೆಯಬಹುದು. ಪರಿಸರಕ್ಕೆ ಪೂರಕವಾದ ಈ ಇಲೆಕ್ಟ್ರಿಕಲ್ ವಾಹನಗಳ ಸಂಚಾರ ವೆಚ್ಚ ಕಡಿಮೆಯಾಗಿದ್ದು, ಇದರಿಂದ ಜನರಿಗೆ ಇಂಧನದ ಆರ್ಥಿಕ ಹೊರೆಯನ್ನು ತಗ್ಗಿಸಲು ಸಾಧ್ಯವಾಗ ಬಹುದು. ಈ ಮೂಲಕ ದೇಶದಲ್ಲಿ ಇಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಹಕಾರಿಯಾಗಬಹುದು.

Similar News