ಮುಸ್ಲಿಮರಿಗೆ ಶೇ.4 ಮೀಸಲಾತಿ ವಿಚಾರ: ಪ್ರಕರಣ ಕುರಿತ ರಾಜಕೀಯ ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ

Update: 2023-05-09 08:02 GMT

ಹೊಸದಿಲ್ಲಿ: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಶೇ. 4 ಒಬಿಸಿ ಮೀಸಲಾತಿಯನ್ನು ವಾಪಸ್‌ ಪಡೆಯುವ ಕುರಿತಂತೆ ಸುಪ್ರೀಂ ಕೋರ್ಟ್‌ ಮುಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ರಾಜಕೀಯ ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್‌ ಇಂದು ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಲಯದ ಆದೇಶವಿರುವಾಗ ಪಾವಿತ್ರ್ಯತೆ ಕಾಪಾಡುವುದು ಅಗತ್ಯ ಎಂದು ಹೇಳಿದ ಸುಪ್ರೀಂ ಕೋರ್ಟ್‌, ಮುಂದಿನ ವಿಚಾರಣೆಯನ್ನು ಜುಲೈ  ತಿಂಗಳಿಗೆ ನಿಗದಿಪಡಿಸಿದೆ. ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ.

“ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳ ಕುರಿತಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು ಹಾಗೂ ನ್ಯಾಯಾಲಯದ ಮುಂದಿರುವ ಪ್ರಕರಣಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ,” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ್ದ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ದೂರಿದ್ದರು. ತಮ್ಮ ಪಕ್ಷ ಮುಸ್ಲಿಮರ ಮೀಸಲಾತಿಯನ್ನು ವಾಪಸ್‌ ಪಡೆದಿದೆ ಎಂದು ಶಾ “ಹೆಮ್ಮೆಯಿಂದ ಹೇಳಿಕೊಂಡಿದ್ದರು” ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಹೇಳಿದರು.

“ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣದ ಕುರಿತಂತೆ ಯಾರಾದರೂ ಇಂತಹ ಹೇಳಿಕೆಗಳನ್ನು ಏಕೆ ನೀಡಬೇಕು?” ಎಂದು ಜಸ್ಟಿಸ್‌ ಬಿ ವಿ ನಾಗರತ್ನ ಪ್ರಶ್ನಿಸಿದರು.

ಅಮಿತ್‌ ಶಾ ಅವರ ಹೇಳಿಕೆಯ ಅರ್ಥ ಅಥವಾ ಸಂದರ್ಭವನ್ನು ಕೋರ್ಟಿಗೆ ತಿಳಿಸಲಾಗಿಲ್ಲ ಎಂದು ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

“ಧರ್ಮ-ಆಧಾರಿತ ಮೀಸಲಾತಿಗೆ ತಾತ್ವಿಕವಾಗಿ ವಿರುದ್ಧವಾಗಿದ್ದೇವೆ ಎಂದು ಯಾರಾದರೂ ಹೇಳಿದರೆ ಅದು ಸಂಪೂರ್ಣವಾಗಿ ಸಮರ್ಥನೀಯ.” ಎಂದು ಮೆಹ್ತಾ ವಾದಿಸಿದಾಗ, ಶಿಸ್ತು ಕಾಪಾಡುವುದು ಅಗತ್ಯ  ಎಂದು ನ್ಯಾಯಾಲಯ ಹೇಳಿತು.

“ಶೇ 4 ಮೀಸಲಾತಿ ಅಸಂವಿಧಾನಿಕ ಎಂದು ಸಾಲಿಸಿಟರ್‌ ಆಗಿ  ಹಾಗೂ ಈ ಪ್ರಕರಣದಲ್ಲಿ ವಕೀಲರಾಗಿ  ನೀವು ಹೇಳಬಹುದು. ಆದರೆ ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಹೇಳುವುದು ಬೇರೆ ವಿಚಾರ,”ಎಂದು ಜಸ್ಟಿಸ್‌ ನಾಗರತ್ನ ಅವರು ಹೇಳಿದರು.

ಹಿಂದಿನ ವಿಚಾರಣೆಯಲ್ಲಿ ಹೊರಡಿಸಲಾದ ಮಧ್ಯಂತರ ಆದೇಶ ಮುಂದಿನ ವಿಚಾರಣೆ ಜುಲೈ ತಿಂಗಳಲ್ಲಿ ನಡೆಯುವ ತನಕ ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಲಿಂಗ ವಿವಾಹ ಕುರಿತ ಸಂವಿಧಾನಿಕ ಪೀಠದ ವಿಚಾರಣೆ ಇಂದು ನಡೆಯಲಿರುವುದರಿಂದ ಸಾಲಿಸಿಟರ್‌ ಜನರಲ್‌ ಇದಕ್ಕೂ ಮುಂಚೆ ಈ ಪ್ರಕರಣದ ವಿಚಾರಣೆ ಮುಂದೂಡಲು ಮನವಿ ಮಾಡಿದರು.

ಈ ಪ್ರಕರಣದ ಹಿಂದಿನ ವಿಚಾರಣೆ ವೇಳೆಗೆ ಕರ್ನಾಟಕ ಸರ್ಕಾರ ಉತ್ತರಿಸಲು ಹೆಚ್ಚಿನ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ಶೇ 4 ಮೀಸಲಾತಿ ಮೇ 9ರ ತನಕ ಮುಂದುವರಿಯಬೇಕು ಎಂದು ಹೇಳಿತ್ತು.

Similar News