ಪ್ರಪಂಚದ ಅತಿ ದುಬಾರಿ ಬೆಲೆಯ ಮಾವಿನ ಹಣ್ಣನ್ನು ಈ ರೈತ ಹೇಗೆ ಉತ್ಪಾದಿಸುತ್ತಾನೆ ಗೊತ್ತಾ? ಇಲ್ಲಿದೆ ಮಾಹಿತಿ
ಟೋಕಿಯೋ: ಸುಸ್ಥಿರ ಕೃಷಿ ಪದ್ಧತಿ ರೈತ ಸಮುದಾಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದ ಒಂದು ಮಾವಿನ ಹಣ್ಣಿನ ಬೆಲೆ ನಿಮ್ಮ ಪ್ರಕಾರ ಎಷ್ಟಿರಬಹುದು? ರೂ. 50, ರೂ. 100, ರೂ. 200.. ಉಹ್ಞೂಂ.. ಬರೋಬ್ಬರಿ ರೂ. 19,000!! ಇಂತಹ ಯಶೋಗಾಥೆಗೆ ಸಾಕ್ಷಿಯಾಗಿರುವುದು ಜಪಾನಿನ ಕೃಷಿಕ ಹಿರೊಯುಕಿ ನಕಾಗುವಾ.
62 ವರ್ಷ ವಯಸ್ಸಿನ ಹಿರೊಯಿಕಿ ನಗಾಕುವಾ ಮೂಲತಃ ತೈಲ ವ್ಯಾಪಾರಿಯಾಗಿದ್ದವರು. ಒಂದು ದಿನ ಅವರಿಗೆ ತಾನು ನಿಸರ್ಗದ ಮೂಲದಿಂದ ನೈಸರ್ಗಿಕವಾಗಿ ಏನನ್ನಾದರೂ ಉತ್ಪಾದಿಸಬೇಕು ಎಂಬ ಬಯಕೆ ಮೂಡುತ್ತದೆ. ಅಗ ಅವರು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದ ತೈಲ ವ್ಯಾಪಾರವನ್ನು ತೊರೆದು ಮಾವು ಬೆಳೆಯಲು ಮುಂದಾಗುತ್ತಾರೆ. ಅವರಿಗೆ ಮತ್ತೊಬ್ಬ ರೈತ ಮಿಯಾಝಕಿ ಮಾರ್ಗದರ್ಶನ ನೀಡುತ್ತಾರೆ. ಅವರ ಮಾರ್ಗದರ್ಶನದಂತೆ ಹಿರೊಯಿಕಿ ನಗಾಕುವಾ ಚಳಿಗಾಲದಲ್ಲಿ ಮಾವು ಬೆಳೆಯುವ ಸಾಹಸಕ್ಕೆ ಮುಂದಾಗುತ್ತಾರೆ. ಮೊದಮೊದಲು ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಮುಂದೆ ನಡೆದದ್ದೆಲ್ಲ ಇತಿಹಾಸ.
ನಗಾಕುವಾ ಅವರ ಮಾವಿನ ತೋಟವಿರುವ ಜಪಾನಿನ ಹೊಕ್ಕಾಯಿಡೊದಲ್ಲಿ ಚಳಿಗಾಲದಲ್ಲಿ ಇಬ್ಬನಿ ಪ್ರಮಾಣ ತೀವ್ರವಾಗಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ಮನೆಯ ಹೊರಗಿನ ವಾತಾವರಣ -8 ಡಿಗ್ರಿ ಸೆಲ್ಷಿಯಸ್‌ಗಿಂತಲೂ ಕಡಿಮೆ ಇರುತ್ತದೆ. ಆದರೆ, ನಗಾಕುವ ನಿರ್ಮಾಣ ಮಾಡಿರುವ ಹಸಿರು ಮನೆಯಲ್ಲಿನ ತಾಪಮಾನ 36 ಡಿಗ್ರಿ ಸೆಲ್ಷಿಯಸ್ ತೋರಿಸುತ್ತಿರುತ್ತದೆ.
ನಗಾಕುವಾ ಅವರ ಯಶಸ್ಸಿನ ಹಿಂದೆ ಇರುವ ಎರಡು ರಹಸ್ಯಗಳು: ಅವರು ತವರು ಪಟ್ಟಣವಾದ ಹೊಕ್ಕಾಯಿಡೊದಲ್ಲಿ ದೊರೆಯುವ ನೈಸರ್ಗಿಕ ಸಂಪನ್ಮೂಲವಾದ ಮಂಜು ಗಡ್ಡೆ ಹಾಗೂ ಬಿಸಿ ನೀರಿನ ಬುಗ್ಗೆಗಳು. ಚಳಿಗಾಲದಲ್ಲಿ ದೊರೆಯುವ ಮಂಜು ಗಡ್ಡೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ನಗಾಕುವಾ, ಬೇಸಿಗೆಯಲ್ಲಿ ಅದನ್ನು ತಮ್ಮ ಹಸಿರು ಮನೆಯನ್ನು ತಂಪಾಗಿಡಲು ಬಳಸಿಕೊಳ್ಳುತ್ತಾರೆ. ಇದರಿಂದ ಮಾವಿನ ಹಣ್ಷುಗಳು ನಿಧಾನಕ್ಕೆ ಮಾಗುತ್ತವೆ. ಹಾಗೆಯೇ ಚಳಿಗಾಲದಲ್ಲಿ ತಮ್ಮ ಹಸಿರು ಮನೆಯನ್ನು ಬೆಚ್ಚಗಿಡಲು ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳನ್ನು ಬಳಸಿಕೊಂಡು ಒಂದು ಋತುವಿಗೆ ಸುಮಾರು 5,000 ಮಾವಿನ ಹಣ್ಷುಗಳನ್ನು ಕೊಯ್ಲು ಮಾಡುತ್ತಾರೆ.
ಈ ಪ್ರಕ್ರಿಯೆಯಿಂದ ಒಂದೆರಡು ಕೀಟಗಳು ಮಾತ್ರ ಹಸಿರು ಮನೆಯಲ್ಲಿ ಕಾಣಿಸಿಕೊಳ್ಳುವುದರಿಂದ ಕೀಟ ನಾಶಕಗಳನ್ನು ಬಳಸಬೇಕಾದ ಪ್ರಮೇಯವೇ ಅವರಿಗೆ ಉದ್ಭವಿಸಿಲ್ಲ. ಅಲ್ಲದೆ ಹೊಕ್ಕಾಯಿಡೊದಲ್ಲಿನ ಕನಿಷ್ಠ ತೇವಾಂಶದಿಂದ ಸಿಪ್ಪೆ ತೆಗೆಯಲು ರಾಸಾಯನಿಕಗಳನ್ನು ಬಳಸುವ ಅಗತ್ಯವೇ ಉಂಟಾಗುವುದಿಲ್ಲ. ಇದರೊಂದಿಗೆ ಕೃಷಿ ಚಟುವಟಿಕೆಗಳು ತೀವ್ರವಾಗಿರುವ ಮಳೆಗಾಲದಲ್ಲಿ ಕೂಲಿ ಕಾರ್ಮಿಕರ ಕೊರತೆಯನ್ನು ಅನುಭವಿಸುವ ಜಪಾನ್‌ನಲ್ಲಿ, ಚಳಿಗಾಲದಲ್ಲಿ ಸುಲಭವಾಗಿ ಕೂಲಿ ಕಾರ್ಮಿಕರು ದೊರೆಯುವುದರಿಂದ ಮಾವು ಬೆಳೆಯನ್ನು ಕೊಯ್ಲು ಮಾಡುವುದು ಅನುಕೂಲಕರವಾಗಿರುತ್ತದೆ.
ಇಂತಹ ಸುಸ್ಥಿರ ಕೃಷಿಯಿಂದ ಮಾವಿನ ಹಣ್ಣಿನ ರುಚಿಯೂ ಹೆಚ್ಚಾಗುತ್ತದೆ. ನಗಾಕುವಾ ಪ್ರಕಾರ, ಸಾಮಾನ್ಯ ಮಾವಿನ ಹಣ್ಣಿಗಿಂತ ಅವರು ಬೆಳೆದ ಮಾವುಗಳಲ್ಲಿ ಶೇ. 15ರಷ್ಟು ಹೆಚ್ಚು ಸಿಹಿ ಅಂಶವಿರುತ್ತದೆ. ತಿರುಳು ಬೆಣ್ಣೆಯಷ್ಟು ಮೃದುವಾಗಿದ್ದು, ಒಗರಿನ ಅನುಭವದಿಂದ ಹೊರತಾಗಿರುತ್ತದೆ ಎನ್ನುತ್ತಾರೆ.
ಈ ಮಾವಿನ ವಿಶಿಷ್ಟತೆಯೆಂದರೆ, ಈ ಹಣ್ಣಿಗೆ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರಿಬ್ಬರೂ ಒಂದೇ ಬಗೆಯಲ್ಲಿ ಆಕರ್ಷಿತರಾಗಿರುವುದು. 2014ರಲ್ಲಿ ಈ ಮಾವಿನ ಹಣ್ಣನ್ನು ಟೋಕಿಯೋದ ಶಿಂಜುಕು ಪ್ರದೇಶದಲ್ಲಿರುವ ಐಸ್ಟನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಪ್ರದರ್ಶನಕ್ಕಿಟ್ಟಾಗ ಕೇವಲ ಒಂದೇ ಮಾವಿನ ಹಣ್ಣು 400 ಡಾಲರ್‌ಗೆ ಮಾರಾಟವಾಗಿ ಇತಿಹಾಸ ಬರೆದಿತ್ತು.
ಇಷ್ಟಾದರೂ ನಗಾಕುವಾ ಸಂತೃಪ್ತರಾಗಿಲ್ಲ. ಅವರು ಸುಸ್ಥಿರ ಕೃಷಿ ಪದ್ಧತಿಯನ್ನೇ ಬಳಸಿಕೊಂಡು ಪೀಚ್ ಹಣ್ಣನ್ನು ಬೆಳೆಯಲು ಮುಂದಾಗಿದ್ದಾರೆ. ಆ ಮೂಲಕ ಟೊಕಾಚಿಯನ್ನು ಹಣ್ಣುಗಳ ಉತ್ಪಾದನಾ ಕೇಂದ್ರವಾಗಿಸಲು ಕಣ್ಣು ನೆಟ್ಟಿದ್ದಾರೆ.
"ನಾನು ಮಾವಿನ ಹಣ್ಣನ್ನು ಇಷ್ಟಪಡುತ್ತೇನೆ. ಆದರೆ, ಪೀಚ್ ಹಣ್ಣನ್ನು ಅದಕ್ಕಿಂತ ಹೆಚ್ಚು ಇಷ್ಟಪಡುತ್ತೇನೆ" ಎಂದು ಕಣ್ಣಗಲಿಸಿಕೊಂಡು ಹೇಳುತ್ತಾರೆ ನಗಾಕುವಾ.
ರಾಸಾಯನಿಕ ಕೃಷಿಯಿಂದ ಹೈರಾಣಾಗಿರುವ ರೈತರು ಈ ನಿದರ್ಶನದಿಂದ ಸುಸ್ಥಿರ ಕೃಷಿಯತ್ತ ವಾಲಿದರೆ ರೈತರ ಆದಾಯವೂ ದುಪ್ಪಟ್ಟಾಗಲಿದೆ ಮತ್ತು ಆಹಾರ ಪದಾರ್ಥಗಳ ಗುಣಮಟ್ಟವೂ ಸುಧಾರಿಸಲಿದೆ.