ʼಹಣದಿಂದ ಇದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲʼ: ಹೃದಯಸ್ಪರ್ಶಿ ಕತೆ ಹಂಚಿಕೊಂಡ ಝೆರೋಧಾ ಸಿಇಒ ನಿತಿನ್ ಕಾಮತ್
ಬೆಳಗಾವಿ: ತಮ್ಮ ಮಾವ ಶಿವಾಜಿ ಪಾಟೀಲ್‌ರೊಂದಿಗಿನ ಭಾವಚಿತ್ರವನ್ನು ಹಂಚಿಕೊಂಡಿರುವ ಝೆರೋಧಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಕಾಮತ್, ಅವರು ಹೇಗೆ ನನಗೆ ಉತ್ತಮವಾಗಿ ಬದುಕುವುದನ್ನು ಕಲಿಸಿದರು ಎಂಬ ಕುರಿತು ಹೇಳಿಕೊಂಡಿದ್ದಾರೆ. ಈ ಸಂಬಂಧ ಉದ್ದನೆಯ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿರುವ ನಿತಿನ್ ಕಾಮತ್, ನಿವೃತ್ತ ಭಾರತೀಯ ಯೋಧರಾದ ತಮ್ಮ ಮಾವ ಶಿವಾಜಿ ಪಾಟೀಲ್ ಸೇನೆಯ ಹವಾಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತರಾದ ನಂತರ ಬೆಳಗಾವಿಯಲ್ಲಿ ತಮ್ಮದೇ ದಿನಸಿ ಅಂಗಡಿ ನಡೆಸುತ್ತಿರುವ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ.
"ಹವಾಲ್ದಾರ್ ಹುದ್ದೆಯಲ್ಲಿದ್ದ ನನ್ನ ಮಾವ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹಿಮಾಘಾತಕ್ಕೆ ತುತ್ತಾಗಿ ತಮ್ಮ ಒಂದು ಬೆರಳು ಕಳೆದುಕೊಂಡಿದ್ದರಿಂದ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಇದಾದ ನಂತರ ಅವರು ಬೆಳಗಾವಿಯಲ್ಲಿ ದಿನಸಿ ಅಂಗಡಿ ಪ್ರಾರಂಭಿಸಿದರು" ಎಂದು ಬರೆದಿದ್ದಾರೆ.
ಅವರ ಜೀವನ ಶೈಲಿ ಕುರಿತೂ ಬರೆದಿರುವ ನಿತಿನ್ ಕಾಮತ್, "ಅವರಿಗೀಗ 70 ವರ್ಷ ವಯಸ್ಸಾಗಿದ್ದರೂ ತಮ್ಮ ಹತ್ತಾರು ವರ್ಷ ಹಳೆಯದಾದ ವಿಶೇಷಚೇತನರಿಗಾಗಿನ ಸ್ಕೂಟರ್‌ನಲ್ಲಿ ನಿಯಮಿತವಾಗಿ ಸ್ಥಳೀಯ ಮಾರುಕಟ್ಟೆಗೆ ತೆರಳಿ ಅಂಗಡಿಗಾಗಿ ದಿನಸಿ ಪದಾರ್ಥಗಳನ್ನು ಖರೀದಿಸುತ್ತಾರೆ. ಅವರ ನೆರವಾಗಿರುವುದು ನನ್ನ ಅತ್ತೆ ಮಾತ್ರವಾಗಿದ್ದು, ಮನೆ ಹಾಗೂ ಅಂಗಡಿ ನಡೆಯಲು ಸಹಕರಿಸುತ್ತಾರೆ" ಎಂದು ಹೇಳಿದ್ದಾರೆ.
ಯಾವುದೇ ವ್ಯಕ್ತಿ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಬೇಕು ಎಂದು ಅಭಿಪ್ರಾಯ ಪಟ್ಟಿರುವ ನಿತಿನ್ ಕಾಮತ್, ಅದನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎಂಬುದಕ್ಕೆ ನನ್ನ ಮಾವನೇ ಉತ್ತಮ ಉದಾಹರಣೆ ಎಂದು ಕಿವಿಮಾತು ಹೇಳಿದ್ದಾರೆ.