×
Ad

ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಮಾರ್ಪಡಿಸಲು ಹೈಕೋರ್ಟ್‌ ಸೂಚಿಸುವಂತಿಲ್ಲ: ಸಿಜೆಐ ಚಂದ್ರಚೂಡ್‌

Update: 2023-05-09 14:43 IST

ಹೊಸದಿಲ್ಲಿ: ಯಾವುದೇ ನ್ಯಾಯಾಲಯ ಅಥವಾ ರಾಜ್ಯ ಸರ್ಕಾರಕ್ಕೆ  ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡಿಸುವ, ಅದರಿಂದ ಹೊರತುಪಡಿಸುವ ಅಥವಾ ಅದನ್ನು ಮಾರ್ಪಡಿಸುವ ಅಧಿಕಾರವಿಲ್ಲ ಎಂಬ 23 ವರ್ಷ ಹಳೆಯ ಸಂವಿಧಾನಿಕ ಪೀಠದ ಆದೇಶವನ್ನು ಮಣಿಪುರ ಹೈಕೋರ್ಟಿಗೆ ಏಕೆ ತೋರಿಸಲಾಗಿಲ್ಲ ಎಂದು ರಾಜ್ಯದಲ್ಲಿ ಇತ್ತೀಚೆಗೆ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಪ್ರತಿಕ್ರಿಯಿಸಿದ್ದಾರೆ ಎಂದು thehindu.com ವರದಿ ಮಾಡಿದೆ.

ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಬದಲಾವಣೆಗಳನ್ನು ತರುವ ಕುರಿತಂತೆ ನಿರ್ದೇಶಿಸುವ ಅಧಿಕಾರವನ್ನು ಹೈಕೋರ್ಟ್‌ ಹೊಂದಿಲ್ಲ ಎಂದು ಮೌಖಿಕವಾಗಿ ಹೇಳಿದ ಜಸ್ಟಿಸ್‌ ಚಂದ್ರಚೂಡ್‌, “ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸುವ ಕುರಿತಾದ ಅಧಿಕಾರ ರಾಷ್ಟಪತಿಯದ್ದಾಗಿದೆ,” ಎಂದು ಹೇಳಿದರು.

ಮೀಟಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅರ್ಜಿದಾರರು ಮಾಡಿದ ಕೋರಿಕೆ ಕುರಿತಾದ ಪ್ರಕರಣವನ್ನು ಶೀಘ್ರ, ಈ ಆದೇಶದ ಪ್ರತಿ ಸ್ವೀಕರಿಸಿದ ನಾಲ್ಕು ವಾರಗಳ ಅವಧಿಯೊಳಗೆ ಪರಿಗಣಿಸಬೇಕು ಎಂದು ಮಣಿಪುರ ಹೈಕೋರ್ಟ್‌ನ ಏಕಸದಸ್ಯ ಪೀಠ ತನ್ನ ಮಾರ್ಚ್‌ 27ರ ಆದೇಶದಲ್ಲಿ ಸೂಚಿಸಿದ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಹಿಂಸಾಚಾರಗಳು ಸಂಭವಿಸಿ ಹಲವರನ್ನು ಬಲಿ ಪಡೆದು ಸಾಕಷ್ಟು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.

ಸಂವಿಧಾನದ ವಿಧಿ 342 ಇದರ ನಿಬಂಧನೆ (1) ಅಡಿಯಲ್ಲಿ ನೀಡಲಾದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಮಾರ್ಪಡಿಸುವ, ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಅಧಿಕಾರ ರಾಜ್ಯ ಸರ್ಕಾರಗಳು, ನ್ಯಾಯಾಲಯಗಳು, ಟ್ರಿಬ್ಯುನಲ್‌ಗಳು ಅಥವಾ ಇತರ ಯಾವುದೇ ಪ್ರಾಧಿಕಾರಕ್ಕೆ ಇಲ್ಲ ಎಂದು ನವೆಂಬರ್‌ 2000 ರಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಮಿಲಿಂದ್‌ ನಡುವಿನ ಪ್ರಕರಣದಲ್ಲಿ ಸಂವಿಧಾನಿಕ ಪೀಠ ನೀಡಿದ ತೀರ್ಪಿನಲ್ಲಿ ಸೂಚಿಸಿತ್ತಲ್ಲದೆ  ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಯಾವುದೇ ಮಾರ್ಪಾಡು ಮಾಡುವ ಅಧಿಕಾರವನ್ನು ಕಾನೂನಿನ ಮೂಲಕ ಸಂಸತ್ತು ಮಾತ್ರ ಹೊಂದಿದೆ ಎಂದು ಹೇಳಿತ್ತು.

ಜುಲೈ 2017ರಲ್ಲಿ ಸಿಎಂಡಿ, ಎಫ್‌ಸಿಐ ಹಾಗೂ ಜಗದೀಶ್‌ ಬಲರಾಂ ಬಹಿರಾ ಪ್ರಕರಣದಲ್ಲಿ ಆಗ ನ್ಯಾಯಮೂರ್ತಿಗಳಾಗಿದ್ದ ಚಂದ್ರಚೂಡ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ನೀಡಿದ ತೀರ್ಪಿನ ಸಂದರ್ಭವೂ ಉಲ್ಲೇಖಿಸಿತ್ತಲ್ಲದೆ ಪರಿಶಿಷ್ಟ ಪಂಗಡಗಳ ಕುರಿತಂತೆ ವಿಧಿ 342 ಅನ್ವಯದ ರಾಷ್ಟ್ರಪತಿಗಳ ಆದೇಶ ಯಾವತ್ತೂ ಅಂತಿಮ ಎಂದು ಹೇಳಿತ್ತು.

Similar News