ಉಕ್ರೇನ್‌ನಲ್ಲಿ ಗೆದ್ದರೆ ಮಾತ್ರ ರಶ್ಯಕ್ಕೆ ಉಳಿಗಾಲ: ಪುಟಿನ್
ಮಾಸ್ಕೋ, ಮೇ 9: ಜಗತ್ತು ಪರಿವರ್ತನೆಯ ಕೇಂದ್ರಬಿಂದುವಿನಲ್ಲಿ ಇದೆ. ರಶ್ಯದ ವಿರುದ್ಧ ಹೇರಲಾಗಿರುವ ಈ ಯುದ್ಧದಲ್ಲಿ ನಾವು ಗೆದ್ದರೆ ಮಾತ್ರ ನಮ್ಮ ಭವಿಷ್ಯ ಸುರಕ್ಷಿತವಾಗಿರಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯ ವಿರುದ್ಧ ರಶ್ಯದ ಗೆಲುವಿನ ವಾರ್ಷಿಕೋತ್ಸವದ ಅಂಗವಾಗಿ ಮಾಸ್ಕೋದ ಕೆಂಪುಚೌಕದಲ್ಲಿ ನಡೆದ ವಿಜಯ ದಿನ ಪಥಸಂಚಲನದ ಗೌರವ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಬಿಗಿ ಭದ್ರತೆಯ ಮಧ್ಯೆ, ಸಾಂಪ್ರದಾಯಿಕ ಸೋವಿಯತ್ ಶೈಲಿಯಲ್ಲಿ ಈ ವಿಜಯ ದಿನಾಚರಣೆ ನಡೆದಿದ್ದು ರಶ್ಯ ಸೇನೆಯ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿರುವ ಯೋಧರು ಪಾಲ್ಗೊಂಡಿದ್ದರು. ಯುದ್ಧದಲ್ಲಿ ರಶ್ಯದ ಗೆಲುವಿಗೆ ಪ್ರತಿಜ್ಞೆ ಮಾಡಿದ ಪುಟಿನ್, ರಶ್ಯದ ಭವಿಷ್ಯವು ಉಕ್ರೇನ್ನಲ್ಲಿ ಹೋರಾಡುತ್ತಿರುವ ರಶ್ಯದ ಯೋಧರ ಕೈಯಲ್ಲಿದೆ ಎಂದರು.
ನಮ್ಮ ಮಾತೃಭೂಮಿಯ ವಿರುದ್ಧ ಯುದ್ಧವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ರಶ್ಯ ವಿಜಯಶಾಲಿಯಾಗಬೇಕಿದ್ದು ಅದಕ್ಕಾಗಿ ನಮ್ಮ ಯೋಧರನ್ನು ಹುರಿದುಂಬಿಸಬೇಕಾಗಿದೆ . ಉಕ್ರೇನ್ನಲ್ಲಿ ಅಸ್ತಿತ್ವವಾದದ ಸಂಘರ್ಷ ನಡೆಯುತ್ತಿದ್ದು ಉಕ್ರೇನ್ ಸರಕಾರವನ್ನು ಬೆಂಬಲಿಸುವ ಮೂಲಕ ಪಾಶ್ಚಿಮಾತ್ಯರು ಈ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ ಎಂದು ಪುಟಿನ್ ಹೇಳಿದರು.
ಪಾಶ್ಚಾತ್ಯ ಜಾಗತಿಕ ಗಣ್ಯರು ವಿಶ್ವದೆಲ್ಲೆಡೆ ಬಿಕ್ಕಟ್ಟು, ಅಂತರ್ಯುದ್ಧದ ಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರ ಉದ್ದೇಶದಲ್ಲಿ ಹೊಸತೇನಿಲ್ಲ, ನಮ್ಮ ದೇಶ ನಾಶಗೊಳ್ಳುವುದನ್ನು ಅವರು ಬಯಸುತ್ತಿದ್ದಾರೆ. ಆದರೆ ರಶ್ಯ ಈ ಷಡ್ಯಂತ್ರವನ್ನು ಮೆಟ್ಟಿ ನಿಲ್ಲಲಿದೆ. ಅಂತರಾಷ್ಟ್ರೀಯ ಭಯೋತ್ಪಾದನೆಯನ್ನು ನಾವು ಹಿಮ್ಮೆಟ್ಟಿಸಲಿದ್ದೇವೆ, ನಮ್ಮ ಭದ್ರತೆಯನ್ನು ಖಾತರಿ ಪಡಿಸಲಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.