ನಟ ರಕ್ಷಿತ್ ಶೆಟ್ಟಿ, ಸಚಿವರಾದ ಸುನೀಲ್, ಕೋಟ, ಪೇಜಾವರ ಶ್ರೀ ಸಹಿತ ಗಣ್ಯರಿಂದ ಮತದಾನ

Update: 2023-05-10 05:58 GMT

ಉಡುಪಿ, ಮೇ 10: ಉಡುಪಿ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಚಿತ್ರನಟ ರಕ್ಷಿತ್, ಸಚಿವರಾದ ವಿ.ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿದರು.

ರಕ್ಷಿತ್ ಶೆಟ್ಟಿ ತನ್ನ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ ಜೊತೆ ಕಾಪು ವಿಧಾನಸಭಾ ಕ್ಷೇತ್ರದ ಕುಕ್ಕಿಕಟ್ಟೆ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಕಾಪುವಿನ ಕಳತ್ತೂರಿನ ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಸಚಿವ ಸುನೀಲ್ ಕುಮಾರ್ ನಿಟ್ಟೆ ಗ್ರಾಮದ ಕಲಂಬಾಡಿ ಪದವು ಶಾಲೆ ಮತಗಟ್ಟೆಗೆ ತನ್ನ ಪತ್ನಿ, ಮಗಳೊಂದಿಗೆ ತೆರಳಿ ಮತ ಚಲಾಯಿಸಿದರು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮೀನಾರಾಯಣ ಸೇರಿಗಾರ್ ಅನಾರೋಗ್ಯದ ಮಧ್ಯೆಯೂ ಇತರರ ಸಹಾಯದೊಂದಿಗೆ ಬೈಂದೂರಿನ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

 ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಟತಟ್ಟು ಗ್ರಾಮ ಪಂಚಾಯತ್ನ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿ ನಾರ್ತ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೊಬೋ ಸರತಿ ಸಾಲಿನಲ್ಲಿ ನಿಂತು ಉಡುಪಿ ಟಿಎ ಪೈ ಮಾಡರ್ನ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ಉತ್ತಮ ಸರಕಾರ ಈ ಮತದಾನದ ಮೂಲಕ ಬರಲೆಂದು ಹಾರೈಸೋಣ ಎಂದರು.

Similar News