ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ

ಎರಡು ಕಡೆ ಮತಯಂತ್ರದಲ್ಲಿ ದೋಷ

Update: 2023-05-10 15:43 GMT

ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ಮತದಾನವು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡಿದ್ದು ಎರಡು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದರೆ ಒಂದೆರಡು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ.

ಸಂಜೆ 5 ಗಂಟೆ ವರೆಗೆ ಕ್ಷೇತ್ರದಲ್ಲಿ ಶೇ.71.59 ಮತದಾನ ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ತಾಲೂಕಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ನೆರ್ಲೆಸರ ಹನಿಫಾಬಾದ್ ನ ಮತಗಟ್ಟೆ ಸಂಖ್ಯೆ 169 ರಲ್ಲಿ 60 ಮತಗಳು ಚಲಾವಣೆಯಾದ ಬಳಿಕ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು 45ನಿ. ಕ್ಕೂ ಹೆಚ್ಚು ಕಾಲ ಜನರು ಸಾಲಿನಲ್ಲಿ ನಿಂತುಕೊಳ್ಳಬೇಕಾಯಿತು.  ಕೆಲವರು ಮತಯಂತ್ರ ಹಾಳಾಗಿದೆ ಎಂದು ತಿಳಿದು ಮನೆಗೆ ತೆರಳಲು ಸಜ್ಜಾಗಿದ್ದರು. ಆದರೆ ಸ್ಥಳೀಯ  ಸಮಾಜ ಸೇವಕ ನಿಸಾರ್ ರುಕ್ನುದ್ದೀನ್ ಹಾಗೂ ಪಂಚಾಯತ್ ಸದಸ್ಯ ಸೈಯ್ಯದ್ ಅಲಿ ಮತದಾರರ ಮನವೊಲಿಸಿ  ಮತಾದರರನ್ನು ಮನೆಗೆ ಹೋಗದಂತೆ  ತಡೆಯುವಲ್ಲಿ ಯಶಸ್ವಿಯಾದರು.  ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು  ಬಂದ ಹಿನ್ನಯಲ್ಲಿ ಮತದಾನಕ್ಕೆ ತೊಂದರೆಯಾಗಿದ್ದು ನಂತರ ತಾಂತ್ರಿಕ ಸಿಬ್ಬಂದಿ ಬಂದು ಸರಿಪಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಎರಡು ಮತಗಟ್ಟೆ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಾರಾಮಾರಿ ನಡೆಸಿದ್ದು ಪೊಲೀಸರು ಬಂದು ಎರಡು ಗುಂಪುಗಳನ್ನು ಚದುರಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಕ್ಷೇತ್ರದ 248 ಮತಗಟ್ಟೆಯಲ್ಲಿ ಮತದಾನ ಶಾಂತರೀತಿಯಾಗಿ ನಡೆಯಿತು.

ಮಂದಗತಿಯಲ್ಲಿ ಸಾಗಿದ ಮತದಾನ; ಬೆಳಿಗ್ಗೆ 7 ಗಂಟೆಯಿಂದ 10ಗಂಟೆ ವರೆಗೆ ಮತದಾನ ಮಂದಗತಿಯಲ್ಲಿ ಸಾಗಿದ್ದು ಮತದಾನ ಪ್ರಕ್ರಿಯೆಯೂ ಕೂಡ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಸರತಿಯಲ್ಲಿ ನಿಂತು ಕೊಂಡ ಮತದಾರ ಸಹನೆ ಕಳೆದುಕೊಳ್ಳುತ್ತಿದ್ಧಾನೆ. ಹೊರಗಡೆ ಉರಿಯುತ್ತಿರುವ ಬಿಸಿಲು ಒಂದೆಡೆಯಾದರೆ ಸರತಿಯಲ್ಲಿ ನಿಂತುಕೊಂಡು ಬೆವರು ಸುರಿಸುತ್ತಿರುವುದು ಮತದಾರನ ಅಸಹನೆಗೆ ಕಾರಣ ಎನ್ನಲಾಗಿದೆ.

ಭಟ್ಕಳ- ಭಟ್ಕಳ-ಹೊನ್ನವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ತಮ್ಮ ಕುಟುಂಬ ಸಮೇತ ಗುರುವಾರ ಬೆಳಿಗ್ಗೆ 8 ಗಂಟೆಗೆ  ಭಟ್ಕಳ ತಾಲೂಕಿನ ಯಲ್ವಡಿ -ಕವೂರ ಮತಗಟ್ಟೆಯಲ್ಲಿ ತಮ್ಮ  ಮತದಾನದ ಹಕ್ಕನ್ನು ಚಲಾಯಿಸಿದರು.

ನಂತರ ಅವರು ಮಾತನಾಡಿದ ಅವರು, ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಭಟ್ಕಳದ ಜನತೆ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ವಕೀಲ ಮಂಜುನಾಥ ಗೊಂಡ ಉಪಸ್ಥಿತರಿದ್ದರು.

Similar News