ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ: ಶೇ.78.46 ಮತದಾನ

Update: 2023-05-10 16:31 GMT

ಉಡುಪಿ, ಮೇ 10:  ರಾಜ್ಯ ವಿಧಾನಸಭೆಗೆ ಇಂದು ನಡೆದ ಚುನಾವಣೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿ ಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು ಶೇ.78.46ರಷ್ಟು ಮತದಾನವಾಗಿ ರುವ ಬಗ್ಗೆ ಪ್ರಾಥಮಿಕ ವರದಿಗಳು ತಿಳಿಸಿವೆ.

ಕಳೆದ ಚುನಾವಣೆಗೆ (2018) ಹೋಲಿಸಿದರೆ ಇದು ಶೇ.0.41ರಷ್ಟು ಕಡಿಮೆಯಾಗಿದೆ. ಕಳೆದ ಬಾರಿ ಶೇ.78.87ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದರು.

ಜಿಲ್ಲೆಯ ಎಲ್ಲಿಂದಲೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಬೆಳಗ್ಗೆ ಮತದಾನ ಬಿರುಸಿನ ಪ್ರಾರಂಭ ಕಂಡಿದ್ದು, ಅಪರಾಹ್ನದವರೆಗೆ ಇದು ಮುಂದುವರಿದಿತ್ತು. ಆಗ ಈ ಬಾರಿ ಶೇ.82ರಿಂದ 85ರಷ್ಟು ಮತದಾನದ ನಿರೀಕ್ಷೆ ಮೂಡಿತ್ತು. ಆದರೆ ಸಂಜೆಯ ವೇಳೆ ಒಮ್ಮೆಗೇ ಮತದಾನ ನಿಧಾನಗತಿಗೆ ಜಾರಿ ಶೇ.80ನ್ನು ದಾಟಲು ಸಾಧ್ಯವಾಗಲಿಲ್ಲ ಎಂಬುದು ಪ್ರಾಥಮಿಕ ಮಾಹಿತಿಗಳಿಂದ ಸ್ಪಷ್ಟವಾಗುತ್ತದೆ. ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿವೆ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ.

ಈಗ ಸಿಕ್ಕಿರುವ ಮಾಹಿತಿಗಳಂತೆ ಬೈಂದೂರು ಕ್ಷೇತ್ರದಲ್ಲಿ  ಶೇ.77.84 (ಕಳೆದ ಬಾರಿ ಶೇ.79.08), ಕುಂದಾಪುರ ದಲ್ಲಿ ಶೇ.78.94 (ಕಳೆದ ಬಾರಿ ಶೇ.79), ಉಡುಪಿಯಲ್ಲಿ ಶೇ.75.87 (ಕಳೆದ ಬಾರಿ ಶೇ.77.74), ಕಾಪುವಿನಲ್ಲಿ  ಶೇ.78.79 (ಕಳೆದ ಬಾರಿ ಶೇ.78.51) ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಶೇ.81.30 (ಕಳೆದ ಬಾರಿ ಶೇ.80.13)ರಷ್ಟು ಮತದಾನವಾಗಿದೆ.

ಉಡುಪಿ ಜಿಲ್ಲೆಯಲ್ಲಿ 2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇ.76.15ರಷ್ಟು ಮತದಾನವಾಗಿದ್ದರೆ, 2008ರ ವಿಧಾನಸಭಾ ಚುನಾವಣೆ ಯಲ್ಲಿ ಶೇ.74ರಷ್ಟು ಮತದಾನವಾಗಿತ್ತು. 2004ರ ಚುನಾವಣೆಯಲ್ಲಿ ಮತದಾನ ಶೇ.57ನ್ನು ದಾಟಿರಲಿಲ್ಲ.

ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಬೆಳಿಗ್ಗೆಯಿಂದ ಬಿರುಸಿನ,ಶಾಂತಿಯುತ ಮತದಾನ ನಡೆಯಿತು.

ಬೆಳಿಗ್ಗೆಯಿಂದ ಕೆಲಮತಗಟ್ಟೆಯಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಮತದಾನ ಪಕ್ರಿಯೆ ವಿಳಂಬವಾಗಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ವರದಿಯಾಗಿದೆ. ಮತಯಂತ್ರ ಕೆಟ್ಟ ಕಾರಣಗಳು ಹಾಗೂ ಮತದಾನ ಪ್ರಕ್ರಿಯೆ ವಿಳಂಬ ಹಿನ್ನೆಲೆಯಲ್ಲಿ ಒಂದಷ್ಟು ಹೊತ್ತು ಗೊಂದಲಗಳು ಕೆಲವೆಡೆ ಉಂಟಾಗಿದ್ದವು.

ಬೈಂದೂರು ವಿಧಾನಸಭಾ ವ್ಯಾಪ್ತಿಯ ತಲ್ಲೂರು, ಅಂಪಾರು, ಕಾವ್ರಾಡಿ, ಹೆಮ್ಮಾಡಿ, ಗಂಗೊಳ್ಳಿ, ನಾಡ, ಮರವಂತೆ, ನಾವುಂದ, ಉಪ್ಪುಂದ, ಬೈಂದೂರು, ಶಿರೂರು, ಕಾಲ್ತೋಡು ಭಾಗದಲ್ಲಿ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಬಹುತೇಕ ಕಡೆಗಳಲ್ಲಿ ಸರತಿ ಸಾಲುಗಳು ಕಂಡುಬಂದವು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಹಾಲಾಡಿ, ಕೋಟ, ವಕ್ವಾಡಿ ಇನ್ನಿತರ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.

ನಟ ನಿರ್ದೇಶಕ ರಿಷಬ್ ಶೆಟ್ಟಿ ಬೈಂದೂರು ವಿಧಾನಭಾ ವ್ಯಾಪ್ತಿಯ ಕೆರಾಡಿ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು. ಸಿನೆಮಾ ಕಥೆ ಬರೆಯುವಲ್ಲಿ ಬ್ಯುಸಿಯಾಗಿದ್ದ ಅವರು ಬಿಡುವು ಮಾಡಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು.

ಹಿರಿಯ ನಾಗರಿಕರು, ಹೊಸಮತದಾರರ ಉತ್ಸಾಹ..! ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯ ನಾಗರಿಕರು ಹಾಗೂ ಹೊಸ ಮತದಾರರ ಉತ್ಸಾಹದ ಮತದಾನ ಕಂಡುಬಂತು. ಅಲ್ಲಲ್ಲಿ ಹಿರಿಯ ನಾಗರಿಕರು ರಿಕ್ಷಾ ಮೂಲಕ ಆಗಮಿಸಿ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ಮತಗಟ್ಟೆಗೆ ಬರುತಿದ್ದ ಮಹಿಳೆ ಮೃತ್ಯು

ಮತದಾನ ಮಾಡಲು ಮನೆಯಿಂದ ಸಹೋದರಿಯೊಂದಿಗೆ ಮತಗಟ್ಟೆಗೆ ಬರುತಿದ್ದ ಮಹಿಳೆಯೊಬ್ಬರು ಹಿಂಬದಿ ಯಿಂದ ಬಂದ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಎಂಬಲ್ಲಿ ನಡೆದಿದೆ.

ಕೆರಾಡಿ ಸಮೀಪದ ಕುಳ್ಳಂಬಳ್ಳಿ ನಿವಾಸಿ ಸುಶೀಲಾ ಪೂಜಾರಿ (62) ಮೃತಪಟ್ಟವರು. ಅಪಘಾತದಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆರಾಡಿ ಶಾಲೆಯ ಮತಗಟ್ಟೆಗೆ ತೆರಳುವಾಗ ಈ ಅಪಘಾತ ನಡೆದಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News