ಚಿರತೆ ಜತೆ ಹೋರಾಡಿ ಮೂರು ವರ್ಷದ ಬಾಲಕಿಯ ಜೀವ ಉಳಿಸಿದ ಪೋಷಕರು!
ಬಿಜನೋರ್: ಹೊಲದಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಎರಗಿದ ಚಿರತೆ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಪೋಷಕರು ಬಾಲಕಿಯ ಜೀವ ಉಳಿಸುವಲ್ಲಿ ಯಶಸ್ವಿಯಾದ ಘಟನೆ ವರದಿಯಾಗಿದೆ.
ಬಿಜನೋರ್‌ನ ಅಸ್ಫಾಬಾದ್ ಚಮನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದನ್ ಸಿಂಗ್ (30) ಹಾಗೂ ಪತ್ನಿ ಸುನಿತಾ ದೇವಿ (27) ಅಪೂರ್ವ ಸಾಹಸ ಮೆರೆದು ತಮ್ಮ ಮೂರು ವರ್ಷದ ಪುತ್ರಿ ಗಾಯತ್ರಿಯ ಜೀವ ಉಳಿಸಿದರು.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ತಮ್ಮ ಪುತ್ರಿಯ ಮೇಲೆ ಚಿರತೆ ಎರಗಿದ್ದನ್ನು ಕಂಡು, ತಂದೆ ತಕ್ಷಣವೇ ಚಿರತೆಯ ಮೇಲೆ ದಾಳಿ ನಡೆಸಿದರೆ, ತಾಯಿ ಗಟ್ಟಿ ಧ್ವನಿಯಲ್ಲಿ ಕೂಗಿದರು. ಇದರಿಂದ ವಿಚಲಿತವಾದ ಚಿರತೆ ಮಗುವನ್ನು ಬಿಟ್ಟು ಪರಾರಿಯಾಯಿತು. ಗಾಯಾಳು ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
"ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿ ನಡೆದ ಸೂಕ್ಷ್ಮ ಪ್ರದೇಶಗಳಲ್ಲಿ ಬೋನುಗಳನ್ನು ಅಳವಡಿಸಿದ್ದೇವೆ. ಇದನ್ನು ಹಿಡಿಯಲು 11 ತಂಡಗಳನ್ನು ರಚಿಸಲಾಗಿದೆ. ಹೊಲಗಳಿಗೆ ಏಕಾಂಗಿಯಾಗಿ ಹೋಗದಂತೆ ಅದರಲ್ಲೂ ಮುಖ್ಯವಾಗಿ ಪುಟ್ಟ ಮಕ್ಕಳೊಂದಿಗೆ ಹೊಲಕ್ಕೆ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದೇವೆ" ಎಂದು ಬಿಜನೋರ್ ಡಿಎಫ್‌ಓ ಎ.ಕೆ.ಸಿಂಗ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಫ್ಜಲ್‌ಗಢ ಪ್ರದೇಶದಲ್ಲಿ ಚಿರತೆ ದಾಳಿ ಹೆಚ್ಚಿದ್ದು, ಕಳೆದ ತಿಂಗಳು ಇಬ್ಬರು ಮಕ್ಕಳ ಸಹಿತ ನಾಲ್ಕು ಮಂದಿ ದಾಳಿಗೆ ಬಲಿಯಾಗಿದ್ದರು. ಕೊಯ್ಲಿನ ಸಮಯವಾದ್ದರಿಂದ ಜನ ಹೆಚ್ಚಿನ ಸಮಯ ಹೊಲಗಳಲ್ಲಿ ಇರುವುದು ಪ್ರಾಣಿ- ಮನುಷ್ಯನ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ ಎಂದು ರೈತ ಚಮನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.