×
Ad

ಪಾಕ್ ಪ್ರಧಾನಿ ನಿವಾಸದ ಮೇಲೆ ಪ್ರತಿಭಟನಾಕಾರರಿಂದ ದಾಳಿ

Update: 2023-05-11 10:03 IST

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬೆನ್ನಲ್ಲೇ, ಅವರ ಬೆಂಬಲಿಗರು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದು, ಬುಧವಾರ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಲಾಹೋರ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫಾ ಪಕ್ಷದ 500 ಮಂದಿ ಕಿಡಿಗೇಡಿಗಳ ಗುಂಪು ಮಾದರಿ ಲಾಹೋರ್ ಪಟ್ಟಣವನ್ನು ತಲುಪಿ, ಪ್ರಧಾನಿ ನಿವಾಸದ ಮೇಲೆ ದಾಳಿ ನಡೆಸಿದೆ. ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಧಾನಿ ನಿವಾಸದ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನೂ ಎಸೆಯಲಾಗಿದೆ ಎಂದು ಪಂಜಾಬ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಕಿಡಿಗೇಡಿಗಳ ದಾಳಿ ನಡೆದ ಸಂದರ್ಭದಲ್ಲಿ ಪ್ರಧಾನಿಯ ಭದ್ರತಾ ಸಿಬ್ಬಂದಿ ಮಾತ್ರ ಸ್ಥಳದಲ್ಲಿದ್ದರು ಎಂದು ಅಧಿಕೃತ ಮೂಲಗಳು ಹೇಳಿವೆ. ಪ್ರತಿಭಟನಾಕಾರರು ಅಲ್ಲಿದ್ದ ಪೊಲೀಸ್ ಚೌಕಿಗೂ ಬೆಂಕಿ ಹಚ್ಚಿದ್ದಾರೆ. ದೊಡ್ಡ ಸಂಖ್ಯೆಯ ಭದ್ರತಾ ಸಿಬ್ಬಂದಿ ಅಲ್ಲಿಗೆ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಜಾಗ ಖಾಲಿ ಮಾಡಿದ್ದಾರೆ.

ಪ್ರಧಾನಿ ನಿವಾಸಕ್ಕೆ ಆಗಮಿಸುವ ಮುನ್ನ ಪ್ರತಿಭಟನಾಕಾರರು ಆಡಳಿತಾರೂಢ ಪಿಎಂಎಲ್-ಎನ್ ಕಾರ್ಯಾಲಯದ ಮೇಲೂ ದಾಳಿ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಬ್ಯಾರಿಕೇಡ್‌ಗಳನ್ನು ಕೂಡಾ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ವಿವರ ನೀಡಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಪ್ರತಿಭಟನಾಕಾರರು ಪಂಜಾಬ್‌ನಲ್ಲಿ 14 ಸರ್ಕಾರಿ ಕಚೇರಿಗಳು ಹಾಗೂ 21 ಪೊಲೀಸ್ ವಾಹನಗಳನ್ನು ನಾಶಪಡಿಸಿದ್ದಾರೆ. ಮಂಗಳವಾರ ಪ್ರತಿಭಟನಾಕಾರರು ಕಾಪ್ಸ್ ಕಮಾಂಡರ್ ನಿವಾಸದ ಮೇಲೂ ದಾಳಿ ಮಾಡಿ ಧ್ವಂಸಗೊಳಿಸಿದ್ದರು.

Similar News