ಯಂತ್ರಗಳ ಕುರಿತು ಗಾಂಧೀಜಿ ಏನಂದಿದ್ದರು?
ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ
ಪ್ರಭುತ್ವದ ನಿಯಂತ್ರಣದಲ್ಲಿರುವ ಯಂತ್ರ ವ್ಯವಸ್ಥೆ ಯಾವತ್ತೂ ಲಾಭಬಡಕತನವನ್ನು ರೂಢಿಸಿಕೊಳ್ಳಬಾರದು. ಅದರ ಮುಖ್ಯ ಉದ್ದೇಶ ಮಾರುಕಟ್ಟೆಯಲ್ಲಿ ಲಾಭ ಮಾಡಿಕೊಳ್ಳುವುದಲ್ಲ, ಬದಲಿಗೆ ವ್ಯಾಪಾರ ವಹಿವಾಟುಗಳಿಗೆ ಮಾನವೀಯ ಮೌಲ್ಯಗಳನ್ನು ಜೋಡಿಸುವುದಾಗಿರಬೇಕು. ಇದರಿಂದೆಲ್ಲ ಶ್ರಮಿಕರ ಸ್ಥಿತಿ ಉತ್ತಮಗೊಳ್ಳಬೇಕು. ಅವರ ಶ್ರಮ ಬರಿಯ ಚಾಕರಿಯಂತಾಗದೆ ದುಡಿಮೆಗೆ ಒಂದು ಘನತೆಯ ಸ್ಥಾನ ದಕ್ಕಬೇಕು. ಹೀಗೆ ಆಗಿದ್ದೇ ಆದರೆ ಮಾನವ ಸಂಪನ್ಮೂಲದ ಪೂರ್ಣ ಉಪಯೋಗವನ್ನು ಪ್ರಭುತ್ವ ಪಡೆದಂತಾಗುವುದು.
► ಪ್ರಶ್ನೆ: ನೀವು ಯಂತ್ರ ವಿರೋಧಿಯೇ?
ಹೌದು, ನಾನು ಯಂತ್ರ ವಿರೋಧಿಯೇ. ತಾತ್ವಿಕವಾಗಿ ಹೇಳುವುದಾದರೆ ನಾನು ಆತ್ಮೋದ್ಧಾರಕ್ಕೆ ಸಹಕಾರಿಯಾಗದ ಶರೀರವೆಂಬ ಯಂತ್ರದ ವಿರೋಧಿ ಕೂಡ.
ಯಂತ್ರವು ಕಾರ್ಯ ನಿರ್ವಹಿಸುವ ವಿಧಾನಕ್ಕೆ ಶರೀರ ಒಂದು ಒಳ್ಳೆಯ ಉದಾಹರಣೆ. ಆದರೆ ಅದು ಆದರ್ಶದ ಮಾತಾಯಿತು. ವಾಸ್ತವವಾಗಿ ಶರೀರವನ್ನು ಬಿಟ್ಟು ಜೀವಿಸು ವುದು ಹೇಗೆ ಸಾಧ್ಯವಿಲ್ಲವೋ, ಹಾಗೆ ಆಧುನಿಕ ಜಗತ್ತಿನಲ್ಲಿ ಯಂತ್ರಗಳ ನೆರವಿಲ್ಲದೆ ಬದುಕಲಾಗದು ಎನ್ನುವಂತಾಗಿಬಿಟ್ಟಿದೆ.
ಆಧುನಿಕ ಜಗತ್ತಿನಲ್ಲಿ ಯಂತ್ರಗಳಿಗೆ ಅವುಗಳದೇ ಆದ ಸ್ಥಾನವಿದೆ. ಆ ಸ್ಥಾನವನ್ನು ಬದಲಾಯಿಸುವುದು ಕಷ್ಟ. ಆದರೆ ಈ ಜಗತ್ತಿನಲ್ಲಿ ಶ್ರಮಜೀವಿಗಳ ಸ್ಥಾನವನ್ನು ಕಸಿಯುವುದಕ್ಕೆ ಯಂತ್ರಗಳಿಗೆ ಆಸ್ಪದವಿರಬಾರದು. ಶ್ರಮಿಕರ ಸ್ಥಾನವನ್ನು ಯಂತ್ರಗಳು ಕಸಿಯುತ್ತಾ ಹೋದಂತೆ ದುಡಿಯುವ ಕೈಗಳಿಗೆ ಅವಕಾಶಗಳು ಇಲ್ಲವಾಗುತ್ತವೆ. ದುಡಿದು ಉಣ್ಣುವವರು ಹಸಿವಿನಿಂದ ನರಳುವಂತಾಗುತ್ತದೆ. ಅವರ ಕೌಶಲ್ಯ ತಗ್ಗುತ್ತದೆ. ಇದು ಅಪಾಯಕಾರಿ ಸ್ಥಿತಿ. ಹಾಗಾಗಿ ಎಲ್ಲರ ಹಿತವನ್ನು ಕಾಪಾಡಬಲ್ಲ ಯಂತ್ರ ವ್ಯವಸ್ಥೆಯು ಕಾನೂನುಬದ್ಧವೆನಿಸುತ್ತದೆ. ಇಲ್ಲವಾದರೆ ಅಂಥ ವ್ಯವಸ್ಥೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ.
ಭಾರತವನ್ನು ಆರ್ಥಿಕ ದಿವಾಳಿತನದಿಂದ ಪಾರುಮಾಡಬಲ್ಲ, ದುಡಿಯುವ ಕೈಗಳಿಗೆ ಕೆಲಸ ಹಂಚಬಲ್ಲ ಯಂತ್ರ ವ್ಯವಸ್ಥೆಯನ್ನು ನಾನು ಸ್ವಾಗತಿಸುತ್ತೇನೆ. ಚರಕದಿಂದ ನೂಲುವುದು ಅಂತಹ ಒಂದು ವಿಧಾನ, ಸಮಾಜದ ದಾರಿದ್ರ್ಯವನ್ನು ತೊಲಗಿಸಲು ಮತ್ತು ನಿರುದ್ಯೋಗವನ್ನು ಕಡಿಮೆ ಮಾಡಲು ಚರಕವೇ ಅತ್ಯುತ್ತಮ ಸಾಧನ, ಚರಕವು ಯಂತ್ರದ ಮೂರ್ತ ರೂಪ ಮತ್ತು ಯಂತ್ರದ ಸಾರ್ಥಕ ರೂಪ ಕೂಡ!
► ಪ್ರಶ್ನೆ: ಹಾಗಾದರೆ ಚರಕವನ್ನುಳಿದು ಇತರೆಲ್ಲ ಯಂತ್ರಗಳನ್ನೂ ನೀವು ವಿರೋಧಿಸುವಿರೇನು?
ಖಂಡಿತವಾಗಿಯೂ ಇಲ್ಲ. ಆದರೆ ದುಡಿಯುವವರಿಗೆ ಕೆಲಸದ ಹಂಚಿಕೆ ಮಾಡದ ಯಂತ್ರ ವ್ಯವಸ್ಥೆಗೆ ನನ್ನ ವಿರೋಧವಿದೆ. ಇಂತಹ ವ್ಯವಸ್ಥೆಯ ಪ್ರಾಬಲ್ಯವನ್ನು ನಾನು ಒಪ್ಪಲಾರೆ. ಶ್ರಮವನ್ನು ಕಡಿಮೆ ಮಾಡಬಲ್ಲ ಸರಳ ಯಂತ್ರ ಸಾಧನಗಳನ್ನು ನಾನು ಸ್ವಾಗತಿಸುತ್ತೇನೆ. ನನ್ನ ವಿರೋಧವಿರುವುದು ಯಂತ್ರಗಳ ಮೇಲೆ ಮನುಷ್ಯರಿಗಿರುವ ವ್ಯಾಮೋಹದ ಬಗ್ಗೆ, ದೈಹಿಕ ಶ್ರಮದಿಂದ ಪಾರುಮಾಡುವ ವ್ಯವಸ್ಥೆ ಎಂದು ಯಾವುದನ್ನು ಪ್ರತಿಪಾದಿಸಲಾಗಿದೆಯೋ ಅಂತಹ ವ್ಯವಸ್ಥೆಯ ಬಗ್ಗೆ. ಯಾವ ವ್ಯವಸ್ಥೆ ದುಡಿಯುವವರನ್ನು ಕ್ರಮೇಣ ನಿರುದ್ಯೋಗಿಗಳನ್ನಾಗಿ ಮಾಡುವುದೋ, ಸಮಯವನ್ನು ಉಳಿಸುವ ನೆಪದಲ್ಲಿ ಶ್ರಮಜೀವಿಗಳ ಬಲಿ ತೆಗೆದುಕೊಳ್ಳುವುದೋ ಅಂತಹ ವ್ಯವಸ್ಥೆಯ ಬಗ್ಗೆ.
ಶ್ರಮದ ಪ್ರತಿಫಲವನ್ನು ಸಮನಾಗಿ ಹಂಚದಿರುವ, ಸಂಪತ್ತಿನ ಏಕಸ್ವಾಮ್ಯಕ್ಕೆ ಇಂಬು ಕೊಡುವ ವ್ಯವಸ್ಥೆ ಸಮಾಜಕ್ಕೆ ಕಂಟಕ ಎಂದು ನಂಬುವವನು ನಾನು. ಆದರೆ ಸಂಪತ್ತಿನ ಸ್ವಾಮ್ಯಕ್ಕೆ ಒತ್ತಾಸೆಯಾಗುವ ಮತ್ತು ಶ್ರಮದ ಮೌಲ್ಯವನ್ನು ತಗ್ಗಿಸುವ ಕೆಲಸವನ್ನು ಆಧುನಿಕ ಯುಗದಲ್ಲಿ ಯಂತ್ರಗಳು ಮಾಡುತ್ತಿವೆ. ಈ ಯಂತ್ರಗಳ ಉಬ್ಬರದ ಹಿಂದಿರುವುದು ಶ್ರಮವನ್ನು ಕಡಿಮೆ ಮಾಡಬೇಕು ಎಂಬ ಕಾಳಜಿ ಅಲ್ಲ, ಹೆಚ್ಚು ಹಣ ಗಳಿಸುವ ಹಪಾಹಪಿ, ನನ್ನ ಹೋರಾಟವಿರುವುದು ಇಂಥ ಪ್ರವೃತ್ತಿಯ ವಿರುದ್ಧ ಮಾತ್ರವೇ.
► ಪ್ರಶ್ನೆ: ಅಂದಮೇಲೆ ನೀವು ಬರೀ ಯಂತ್ರಗಳ ವಿರುದ್ಧ ಮಾತ್ರವಲ್ಲ, ಅವುಗಳಿಂದ ಉಂಟಾಗುವ ಸಾಮಾಜಿಕ ಕೆಡುಕುಗಳ ವಿರುದ್ಧವೂ ಹೋರಾಡುತ್ತಿದ್ದೀರಿ ಎಂದಾಯ್ತು.
ನಿಸ್ಸಂದೇಹವಾಗಿ, ದುಡಿಮೆಗೆ ಪೂರಕವಾಗಿ ಯಂತ್ರಗಳು ಒದಗಿ ಬರುವಂತಾಗಬೇಕೇ ಹೊರತು ದುಡಿಮೆಯನ್ನು ಕಸಿಯುವಂತಿರಬಾರದು. ವಿಜ್ಞಾನದ ಸಂಶೋಧನೆ ಗಳು, ಸಾಧನಗಳು ಮನುಷ್ಯರಲ್ಲಿ ಲಾಲಸೆಯನ್ನು ಹುಟ್ಟಿಸುವಂತಿರಬಾರದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಮನುಷ್ಯ ಸಮಾಜದಲ್ಲಿ ಯಂತ್ರಗಳ ಬಳಕೆ ಒಂದು ಮಿತಿ ಯಲ್ಲಿರಬೇಕು.
► ಪ್ರಶ್ನೆ: ತಾರ್ಕಿಕವಾಗಿ ನೋಡಿದರೆ ನೀವು ಬೃಹತ್ ಯಂತ್ರ ವ್ಯವಸ್ಥೆಯನ್ನಷ್ಟೇ ವಿರೋಧಿಸುತ್ತಿದ್ದೀರಿ ಅನ್ನಿಸುತ್ತದೆ.
ಬೃಹತ್ ಮತ್ತು ಸಂಕೀರ್ಣ ಯಂತ್ರವ್ಯವಸ್ಥೆಯನ್ನು ನಾನು ವಿರೋಧಿಸುತ್ತಿರುವೆ. ಅದೇ ಹೊತ್ತಿಗೆ ದುಡಿಯುವ ಮನುಷ್ಯರ ಬಗ್ಗೆ ಕಾಳಜಿ ಮಾಡುತ್ತಿರುವೆ. ಈ ಕಾಳಜಿ ಮತ್ತು ಪ್ರೀತಿಯ ಅಂಶಗಳಿಂದ ಪ್ರೇರೇಪಿತವಾದರೆ ವಿಜ್ಞಾನ ಹೇಗೆ ವರದಾನ ಆಗಬಲ್ಲದು ಎಂಬುದಕ್ಕೆ ಹೊಲಿಗೆ ಯಂತ್ರದ ಉದಾಹರಣೆಯನ್ನು ನೋಡಬಹುದು. ಹೊಲಿಗೆಯ ಯಂತ್ರವನ್ನು ತಯಾರಿಸಿದ್ದು ಸಿಂಗರ್ ಎಂಬ ಮನುಷ್ಯ. ತನ್ನ ಹೆಂಡತಿ ದಿನವೂ ಕಷ್ಟಪಟ್ಟು ಬಟ್ಟೆ ಹೊಲಿಯುವುದನ್ನು ತಪ್ಪಿಸಲು ಆತ ಒಂದು ಯಂತ್ರವನ್ನು ತಯಾರಿಸಿದ. ಅವನು ತಯಾರಿಸಿದ ಯಂತ್ರವನ್ನು ಇಂದು ಅವನ ಹೆಸರಿನಿಂದಲೇ ಕರೆಯಲಾಗುತ್ತಿದೆ. ಇದು ಸಿಂಗರ್ಗೆ ಎಲ್ಲರೂ ತೋರಿಸಬೇಕಾದ ಗೌರವ, ಯಾಕೆಂದರೆ ಅವನು ತನ್ನ ಹೆಂಡತಿಯ ಶ್ರಮವನ್ನಷ್ಟೇ ಅಲ್ಲ, ಜಗತ್ತಿನ ಎಲ್ಲ ದರ್ಜಿಗಳ ಶ್ರಮವನ್ನು ಕಡಿಮೆ ಮಾಡಿದ.
► ಪ್ರಶ್ನೆ: ಆದರೆ ಇಂತಹ ಹೊಲಿಗೆ ಯಂತ್ರಗಳನ್ನು ತಯಾರಿಸಲು ದೊಡ್ಡ ಕಾರ್ಖಾನೆಗಳು ಬೇಕೇ ಬೇಕಲ್ಲ! ಹಾಗಾಗಿ ಬೃಹತ್ ಯಂತ್ರ ವ್ಯವಸ್ಥೆಯೊಂದು ಚಲಾವಣೆಯಲ್ಲಿರುವುದು ಅನಿವಾರ್ಯವೇ ಎಂದಾಯಿತು.
ಒಪ್ಪಿದೆ. ಆದರೆ ಅಂತಹ ವ್ಯವಸ್ಥೆ ಬಂಡವಾಳದಾರರ ಹಿಡಿತದಲ್ಲಿರದೆ ಪ್ರಭುತ್ವದ ನಿಯಂತ್ರಣದಲ್ಲಿರಬೇಕು ಎನ್ನುವವ ನಾನು, ಅಷ್ಟರಮಟ್ಟಿಗೆ ನಾನು ಸಮಾಜವಾದಿ.
ಪ್ರಭುತ್ವದ ನಿಯಂತ್ರಣದಲ್ಲಿರುವ ಯಂತ್ರ ವ್ಯವಸ್ಥೆ ಯಾವತ್ತೂ ಲಾಭಬಡಕತನವನ್ನು ರೂಢಿಸಿಕೊಳ್ಳಬಾರದು. ಅದರ ಮುಖ್ಯ ಉದ್ದೇಶ ಮಾರುಕಟ್ಟೆಯಲ್ಲಿ ಲಾಭ ಮಾಡಿಕೊಳ್ಳುವುದಲ್ಲ, ಬದಲಿಗೆ ವ್ಯಾಪಾರ ವಹಿವಾಟುಗಳಿಗೆ ಮಾನವೀಯ ಮೌಲ್ಯಗಳನ್ನು ಜೋಡಿಸುವುದಾಗಿರಬೇಕು. ಇದರಿಂದೆಲ್ಲ ಶ್ರಮಿಕರ ಸ್ಥಿತಿ ಉತ್ತಮಗೊಳ್ಳಬೇಕು. ಅವರ ಶ್ರಮ ಬರಿಯ ಚಾಕರಿಯಂತಾಗದೆ ದುಡಿಮೆಗೆ ಒಂದು ಘನತೆಯ ಸ್ಥಾನ ದಕ್ಕಬೇಕು. ಹೀಗೆ ಆಗಿದ್ದೇ ಆದರೆ ಮಾನವ ಸಂಪನ್ಮೂಲದ ಪೂರ್ಣ ಉಪಯೋಗವನ್ನು ಪ್ರಭುತ್ವ ಪಡೆದಂತಾಗುವುದು.
ಲಾಲಸೆ ಹೆಚ್ಚಿಸದ ಯಂತ್ರ ವ್ಯವಸ್ಥೆ, ಮನುಷ್ಯ ಕಾಳಜಿಗೆ ತುಡಿಯುವ ಯಂತ್ರ ವ್ಯವಸ್ಥೆ, ಶ್ರಮಮೌಲ್ಯವನ್ನು ಗೌರವಿಸುವ ಯಂತ್ರ ವ್ಯವಸ್ಥೆ ಇವು ಈ ಕಾಲದ ನಿರೀಕ್ಷೆಗಳು. ಇದನ್ನು ಬೇಕಾದರೆ ಆದರ್ಶವಾದ ಎನ್ನಿ... ಆದರೆ ಸಿಂಗರ್ನ ಪ್ರೀತಿ ಹೇಗೆ ಎಲ್ಲ ಶ್ರಮಜೀವಿಗಳಿಗೆ ಉಪಕಾರ ಮಾಡಿತೋ, ಹಾಗೆ ಮನುಷ್ಯ ಪ್ರೀತಿಯೇ ಎಲ್ಲ ಉತ್ತಮವಾದ ಕೆಲಸವನ್ನೂ ಈ ಸಮಾಜದಲ್ಲಿ ಮಾಡಿಸಬಹುದು ಎಂಬ ಭರವಸೆಯನ್ನು ಇಟ್ಟುಕೊಳ್ಳೋಣ.
► ಪ್ರಶ್ನೆ: ನೀವು ಈ ಯಂತ್ರಗಳ ಯುಗವನ್ನು ಅಷ್ಟಾಗಿ ಇಷ್ಟಪಟ್ಟಂತೆ ಕಾಣುವುದಿಲ್ಲ...
ಅದು ತೀರಾ ಸರಳೀಕರಣವಾಯಿತು. ಮನುಷ್ಯರು ಗೌಣವಾಗಿ ಯಂತ್ರಗಳು ಮುನ್ನೆಲೆಗೆ ಬಂದ ಜಗತ್ತನ್ನು ನಾನು ವಿರೋಧಿಸುತ್ತೇನೆ, ನಿಜ. ಆದರೆ ಎಲ್ಲ ರೀತಿಯಿಂದಲೂ ನಾನು ಯಂತ್ರಗಳನ್ನು ವಿರೋಧಿಸುತ್ತೇನೆ ಎನ್ನುವುದು ಮಾತ್ರ ಸುಳ್ಳು.
► ಪ್ರಶ್ನೆ: ಭಾರತವು ಕೈಗಾರಿಕೆಗೆ ತೆರೆದುಕೊಳ್ಳಬೇಕು ಎನ್ನುವುದರ ಕುರಿತು ನಿಮ್ಮ ನಿಲುವೇನು?
ಭಾರತವು ಅಗತ್ಯವಾಗಿ ಕೈಗಾರಿಕೆಗೆ ತೆರೆದುಕೊಳ್ಳಬೇಕು. ಆದರೆ ನಾವು ಪಶ್ಚಿಮದ ಮಾದರಿಯನ್ನು ಅಳವಡಿಸಿಕೊಳ್ಳಬೇಕಿಲ್ಲ. ಗ್ರಾಮ ಸಮುದಾಯಗಳಿಗೆ ಅನುಕೂಲ ವಾಗುವಂತೆ ನಾವು ನಮ್ಮ ಕೈಗಾರಿಕೆಯ ನೀತಿಯನ್ನು ರೂಪಿಸಿಕೊಳ್ಳಬೇಕು. ಇಲ್ಲಿಯವರೆಗೆ ಭಾರತದ ನಗರ ಮತ್ತು ಪಟ್ಟಣಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾತ್ರವೇ ನಮ್ಮ ಗ್ರಾಮಗಳು ಬಳಕೆಯಾಗಿವೆ. ವಿದೇಶಿ ಬಂಡವಾಳಿಗರಿಗೆ ನಮ್ಮ ನಗರಗಳು ಮಾರುಕಟ್ಟೆಗಳಷ್ಟೆ? ವಿದೇಶಿ ಆರ್ಥಿಕತೆಯು ನಮ್ಮ ನಗರಗಳನ್ನು ಬಳಸಿಕೊಂಡಂತೆಯೇ ನಗರಗಳೆಲ್ಲ ಹಳ್ಳಿಗಳನ್ನು ಬಳಸಿಕೊಂಡಿವೆ.
► ಪ್ರಶ್ನೆ: ಹಾಗಾದರೆ ಭಾರತದ ಆರ್ಥಿಕ ವ್ಯವಸ್ಥೆ ಹೇಗಿರಬೇಕೆಂದು ನಿಮ್ಮ ಅನಿಸಿಕೆ?
ಉತ್ತರ: ಈಗ ನನಗೆ ಒಂದು ಉದ್ಯಮವನ್ನು ನಗರಪ್ರದೇಶದಲ್ಲಿ ಸ್ಥಾಪಿಸುವ ಶಕ್ತಿ ಇದೆ ಎಂದಿಟ್ಟುಕೊಳ್ಳೋಣ. ಆದರೆ ನಾನು ಹಾಗೆ ಮಾಡಲಾರೆ. ಅದು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ ಎಂಬುದು ಮೊದಲನೇ ಕಾರಣ. ಎರಡನೆಯದಾಗಿ, ನನಗೆ ನನ್ನ ವೈಯಕ್ತಿಕ ಹಿತಾಸಕ್ತಿಯನ್ನೂ ಮೀರಿ ದೇಶದ ಹಿತಾಸಕ್ತಿಯನ್ನು ಪರಿಗಣಿಸಬೇಕಿದೆ. ಹಾಗಾಗಿ ನಾನು ಗ್ರಾಮ ಸಮುದಾಯಗಳಿಗೆ ಕಸುವು ತುಂಬುವ ಉದ್ಯಮವನ್ನು ಆಯ್ದುಕೊಳ್ಳುವೆ.
ಭಾರತದ ಆರ್ಥಿಕ ವ್ಯವಸ್ಥೆ ನಗರ ಕೇಂದ್ರಿತವಾಗಿರಬಾರದು ಎಂಬುದು ನನ್ನ ಅನಿಸಿಕೆ. ಹಳ್ಳಿಗಳ ಕಡೆ ಅದು ಚಲಿಸಬೇಕು. ಯಂತ್ರ ವ್ಯವಸ್ಥೆ ಮತ್ತು ಉದ್ಯಮ ವ್ಯವಸ್ಥೆ ಏನು ಮಾಡುತ್ತದೆಯೆಂದರೆ, ಮನುಷ್ಯರ ಉಪಭೋಗಕ್ಕೆ ಅಗತ್ಯವಿರುವ ಉತ್ಪನ್ನಗಳ ತಯಾರಿಕೆಯನ್ನು ಮಾತ್ರ ಆದ್ಯತೆಯಾಗಿಟ್ಟುಕೊಳ್ಳುತ್ತದೆ. ಈ ವ್ಯವಸ್ಥೆಯಲ್ಲಿ ಉತ್ಪನ್ನ ವಿತರಣೆಗಳು ಉತ್ಪಾದಕರ ಮರ್ಜಿಗೆ ತಕ್ಕಂತೆ ನಿಗದಿಯಾಗುತ್ತವೆ. ಇದಕ್ಕೆ ಪ್ರತಿಯಾಗಿ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಉತ್ಪಾದನೆಯ ಮತ್ತು ವಿತರಣೆಯ ವ್ಯವಸ್ಥೆ ನೆಲೆಗೊಳ್ಳಬೇಕು. ಅಂದರೆ ಈ ವ್ಯವಸ್ಥೆಯ ವಿಕೇಂದ್ರೀಕರಣ ಆಗಬೇಕು. ಸ್ಥಳೀಯ ಅಗತ್ಯಗಳಿಗೆ ಹೊಂದುವಂತೆ ಉತ್ಪಾದನಾ ವ್ಯವಸ್ಥೆ ರೂಪಗೊಂಡಂತೆ ಮಾರುಕಟ್ಟೆಯ ಮೇಲೆ ವ್ಯಾಪಾರಿ ಹಿತಾಸಕ್ತಿಗಳ ಹಿಡಿತ ಕಡಿಮೆಯಾಗುತ್ತದೆ. ಮಾರುಕಟ್ಟೆಯ ಒತ್ತಡಗಳು ದರವನ್ನು ನಿರ್ಧರಿಸುವುದು ತಪ್ಪುತ್ತದೆ.
ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆ ಎಂದುಕೊಳ್ಳುತ್ತೇನೆ. ನಾನು ಪ್ರತಿಪಾದಿಸುತ್ತಿರುವುದು ಉದ್ಯಮ ವ್ಯವಸ್ಥೆಯನ್ನೇ. ಆದರೆ ಅದು ಕೇಂದ್ರೀಕರಣಗೊಂಡ ವ್ಯವಸ್ಥೆ ಆಗಿರಕೂಡದು. ಅದು ಹೆಚ್ಚು ಹೆಚ್ಚು ಸ್ಥಳೀಯ ಸ್ವರೂಪವನ್ನು ಪಡೆದಿರಬೇಕು.
ಹಾಗೆಯೇ ಅದರಲ್ಲಿ ಸಮುದಾಯದ ಪಾಲು ಹೆಚ್ಚು ಇರತಕ್ಕದ್ದು. ಲಾಭಾಂಶ ಎಲ್ಲರಿಗೆ ದಕ್ಕುವಂತೆ ಕೂಡ ಅದು ಇರತಕ್ಕದ್ದು.
ಈ ಸ್ಥಳೀಯ ಉದ್ಯಮದ ಸಣ್ಣ ರೂಪವೇ ಗೃಹ ಕೈಗಾರಿಕೆ. ಇಲ್ಲಿ ಮನೆಯೇ ಒಂದು ಉತ್ಪನ್ನ ಘಟಕ. ವ್ಯಕ್ತಿ ಪರಿಶ್ರಮವನ್ನು ನೀವು ಒಟ್ಟುಮಾಡುತ್ತಾ ಸಾಮೂಹಿಕಗೊಳಿಸುತ್ತಾ ಹೋದಂತೆ ಬೃಹತ್ ಉದ್ಯಮ ಪಡೆದುಕೊಳ್ಳುವಷ್ಟೇ ಲಾಭವನ್ನು ಅದೂ ಕೂಡ ಪಡೆದುಕೊಳ್ಳುವುದನ್ನು ನೋಡಬಹುದು. ನಿಮ್ಮ ಬೃಹತ್ ಉದ್ಯಮದ ಪರಿಕಲ್ಪನೆಯಲ್ಲಿ ಸಮೂಹದ ಭಾಗವಹಿಸುವಿಕೆ ಕಡಿಮೆ, ಯಂತ್ರಗಳ ಬಳಕೆ ಹೆಚ್ಚು. ನನ್ನ ಪರಿಕಲ್ಪನೆಯ ಬೃಹತ್ ಉದ್ಯಮದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುತ್ತದೆ. ಅಲ್ಲದೆ ನಾನು ಯಂತ್ರವನ್ನು ಉತ್ಪಾದಕನ ಬಳಿಗೆ ಒಯ್ಯುವಂಥವನು.
ಯಂತ್ರಸ್ವಾಮ್ಯ ವ್ಯವಸ್ಥೆಯ ಬಗ್ಗೆ ನನಗೆ ನಿಜಕ್ಕೂ ದಿಗಿಲು, ಅನುಮಾನ ಎಲ್ಲ ಇವೆ. ಯಂತ್ರಗಳು ತ್ವರಿತ ಗತಿಯಲ್ಲಿ ಉತ್ಪಾದನೆ ಮಾಡುವುದರಿಂದ ಆರ್ಥಿಕತೆಯಲ್ಲಿ ಅವು ವೇಗದ ಪರಿಣಾಮ ಉಂಟುಮಾಡಬಲ್ಲವು. ಆ ವೇಗವನ್ನು ಅಳೆಯು ವುದಾಗಲೀ ಪರಿಣಾಮಗಳನ್ನು ಅಂದಾಜಿಸುವುದಾಗಲೀ ನನಗೆ ಕಷ್ಟ. ಒಂದು ವ್ಯವಸ್ಥೆಯಲ್ಲಿ ಕೇವಲ ವ್ಯವಸ್ಥೆಯ ಅನುಕೂಲತೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳು ವುದು ನನ್ನಿಂದಾಗದು. ವ್ಯವಸ್ಥೆಯ ಅನನುಕೂಲತೆಯ ಪ್ರಮಾಣವನ್ನೂ ಪರಿಗಣಿಸಬೇಕಾಗುತ್ತದೆ.
ನಮ್ಮ ಜನಸಮುದಾಯಗಳು ಆರೋಗ್ಯದಿಂದ, ಸಂತೋಷದಿಂದ ಇರಬೇಕೆಂದು ನನ್ನಾಸೆ. ಹಾಗೆಯೇ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಆಗುತ್ತಿರಬೇಕೆಂಬುದು ನನ್ನ ತುಡಿತ. ಇದಕ್ಕೆ ಯಂತ್ರ ವ್ಯವಸ್ಥೆಯ ನೆರವು ಬೇಕೆಂದೇನೂ ತೋರುತ್ತಿಲ್ಲ. ಕ್ರಮೇಣ ನಮಗೆ ಅದರ ಅಗತ್ಯ ಕಂಡುಬಂದರೆ ನಾವು ಯಂತ್ರ ವ್ಯವಸ್ಥೆಯನ್ನು ಸಾಧ್ಯವಾದಷ್ಟು ವಿವೇಚನೆಯಿಂದ ಅಳವಡಿಸಿಕೊಳ್ಳುವ ಮನಸ್ಸು ಮಾಡಬೇಕು. ಅಹಿಂಸೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಹೋದಂತೆ ಯಂತ್ರಗಳನ್ನು ಪಳಗಿಸಿಕೊಳ್ಳುವ ರೀತಿಯನ್ನೂ ನಾವು ಕಂಡುಕೊಳ್ಳಬಹುದು ಎನಿಸುತ್ತದೆ.
ಉದ್ಯಮ ನಮ್ಮ ಪಾಲಿಗೆ ಅಗತ್ಯವೆನಿಸಿದರೆ, ನಾವು ನಮ್ಮ ಪಾಲಿನ ಶ್ರಮ ಅದರಲ್ಲಿ ಹೂಡಿಕೆಯಾಗುವಂತೆ, ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು. ಸ್ವಾಯತ್ತತೆ ಮತ್ತು ಸ್ವಾವಲಂಬನೆ ನಮ್ಮ ಮೂಲಮಂತ್ರವಾಗಬೇಕು. ಆಗ ನಮಗೆ ಮುನ್ನಡೆಸುವವರ ಅಗತ್ಯ ಅಷ್ಟು ಬೀಳಲಾರದು.
(‘ದ ಆಕ್ಸ್ಫರ್ಡ್ ಇಂಡಿಯಾ ಗಾಂಧಿ’ ಪುಸ್ತಕದಿಂದ.)
(ಕೃಪೆ: ನಟರಾಜ್ ಹುಳಿಯಾರ್ ಸಂಪಾದಿತ ‘ಎಲ್ಲರ ಗಾಂಧೀಜಿ-ಮಹಾತ್ಮಾ ಗಾಂಧೀಜಿಯವರ ಮಾತು-ಬರಹ-ಚಿಂತನೆ’ ಕೃತಿ)