ಚುನಾಯಿತ ಸರಕಾರ ಆಡಳಿತದ ಮೇಲೆ ನಿಯಂತ್ರಣ ಹೊಂದಿರಬೇಕು: ದಿಲ್ಲಿ ಸರಕಾರದ ಪರ ಸುಪ್ರೀಂಕೋರ್ಟ್ ತೀರ್ಪು

Update: 2023-05-11 15:58 GMT

ಹೊಸದಿಲ್ಲಿ, ಮೇ 11: ದಿಲ್ಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರಕ್ಕೆ ಲಭಿಸಿದ ಮಹತ್ವದ ವಿಜಯವೊಂದರಲ್ಲಿ, ಸರಕಾರದ ಸೇವೆಗಳ ಮೇಲೆ ಚುನಾಯಿತ ಸರಕಾರವೇ ಶಾಸನಾತ್ಮಕ ಮತ್ತು ಕಾರ್ಯಕಾರಿ ಅಧಿಕಾರಗಳನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸಾರ್ವಜನಿಕ ವ್ಯವಸ್ಥೆ, ಪೊಲೀಸ್ ಮತ್ತು ಜಮೀನು- ಈ ಮೂರನ್ನು ಹೊರತುಪಡಿಸಿದ ವಿಷಯಗಳಲ್ಲಿ ದಿಲ್ಲಿ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಲೆಫ್ಟಿನೆಂಟ್ ಗವರ್ನರ್ ಬದ್ಧರಾಗಿರುತ್ತಾರೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಮ್.ಆರ್. ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಸಂವಿಧಾನ ಪೀಠವೊಂದು ಹೇಳಿದೆ.

ದಿಲ್ಲಿ ಸರಕಾರದ ಆಡಳಿತ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ವಿವಾದದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ದಿಲ್ಲಿ ಸಚಿವ ಸಂಪುಟದ ಸಲಹೆಯಂತೆ ರಾಜ್ಯಪಾಲರು ಮುನ್ನಡೆಯಬೇಕು ಎಂದಿದೆ.

‘‘ರಾಜ್ಯವೊಂದರಲ್ಲಿ ಕೇಂದ್ರ ಸರಕಾರದ ಕಾರ್ಯಕಾರಿ ಅಧಿಕಾರ ಸೀಮಿತವಾಗಿದೆ. ರಾಜ್ಯದ ಆಡಳಿತವನ್ನು ಕೇಂದ್ರ ಸರಕಾರವೇ ವಹಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ಹೀಗೆ ಮಾಡಲಾಗಿದೆ. ರಾಜ್ಯಗಳ ಮೇಲೆ ಕೇಂದ್ರ ಸರಕಾರದ ಪಾರಮ್ಯವು, ಒಕ್ಕೂಟ ವ್ಯವಸ್ಥೆಯನ್ನು ಮತ್ತು ಪ್ರಾತಿನಿಧಿಕ ಪ್ರಜಾಪ್ರಭುತ್ವದ ತತ್ವವನ್ನು ಸಂಪೂರ್ಣವಾಗಿ ಬುಡಮೇಲು ಮಾಡುತ್ತದೆ’’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

‘‘ರಾಷ್ಟ್ರ ರಾಜಧಾನಿ ದಿಲ್ಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದರೂ, ಅದು ಒಕ್ಕೂಟ ವ್ಯವಸ್ಥೆಯ ಭಾಗವೇ ಆಗಿದೆ. ರಾಜ್ಯಗಳ ಆಡಳಿತವನ್ನು ಕೇಂದ್ರ ಸರಕಾರ ವಹಿಸಿಕೊಳ್ಳದಂತೆ ಖಾತರಿಪಡಿಸಬೇಕಾಗಿದೆ’’ ಎಂದು ಮುಖ್ಯ ನ್ಯಾಯಾಧೀಶ ಹೇಳಿದರು.

ಪ್ರಜಾಪ್ರಭುತ್ವ ಮಾದರಿಯ ಸರಕಾರವೊಂದರಲ್ಲಿ, ಆಡಳಿತದ ನಿಜವಾದ ಅಧಿಕಾರವು ಸರಕಾರದ ಚುನಾಯಿತ ಘಟಕದಲ್ಲಿರಬೇಕು ಎಂದು ಅವರು ನುಡಿದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಸರಕಾರಕ್ಕೆ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ನೀಡದಿದ್ದರೆ ಉತ್ತರದಾಯಿತ್ವದ ತತ್ವಕ್ಕೆ ಯಾವುದೇ ಅರ್ಥವಿಲ್ಲ ಎಂದರು.

ದಿಲ್ಲಿಯಲ್ಲಿ ಚುನಾಯಿತ ಸರಕಾರ ಮುಖ್ಯವೋ, ರಾಜ್ಯಪಾಲರು ಮುಖ್ಯವೋ ಎಂಬ ವಿಷಯಕ್ಕೆ ಸಂಬಂಧಿಸಿ 2019 ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠವು ಭಿನ್ನ ತೀರ್ಪನ್ನು ನೀಡಿತ್ತು ಹಾಗೂ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಆ ವಿಚಾರಣೆಯನ್ನು ಮುಂದುವರಿಸಿದ ಸಂವಿಧಾನ ಪೀಠವು ಗುರುವಾರ ತೀರ್ಪು ನೀಡಿದೆ.

ಸೇವೆಗಳ ವಿಭಾಗದ ಕಾರ್ಯದರ್ಶಿ ವರ್ಗ

ಅಧಿಕಾರಿಗಳ ನೇಮಕಾತಿಯ ಅಧಿಕಾರವನ್ನು ದಿಲ್ಲಿಯ ಚುನಾಯಿತ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ ಬೆನ್ನಿಗೇ, ಗುರುವಾರ ಅರವಿಂದ ಕೇಜ್ರಿವಾಲ್ ಸರಕಾರವು ದಿಲ್ಲಿ ಸರಕಾರದ ಸೇವೆಗಳ ವಿಭಾಗದ ಕಾರ್ಯದರ್ಶಿ ಆಶಿಶ್ ಮೋರೆಯನ್ನು ವರ್ಗ ಮಾಡಿದೆ.

ಇದು ಮೊದಲ ವರ್ಗಾವಣೆಯಾಗಿದ್ದು ಇನ್ನು ಹಲವು ವರ್ಗಾವಣೆಗಳು ನಡೆಯಲಿವೆ ಎಂದು ಭಾವಿಸಲಾಗಿದೆ. ಆಡಳಿತದಲ್ಲಿ ಮಹತ್ವದ ಬದಲಾವಣೆಯನ್ನು ಮಾಡುವ ಇಂಗಿತವನ್ನು ಕೇಜ್ರಿವಾಲ್ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಸಾರ್ವಜನಿಕ ಕೆಲಸಗಳಿಗೆ ‘‘ತಡೆಯೊಡ್ಡುವ’’ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ‘‘ಜಾಗೃತ ದಳವು ಇನ್ನು ನಮ್ಮ ಬಳಿ ಇರುತ್ತದೆ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ’’ ಎಂದು ಮುಖ್ಯಮಂತ್ರಿ ಹೇಳಿದರು.

 ದಿಲ್ಲಿಯ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗುರುವಾರ ದಿಲ್ಲಿಯ ಕೇಜ್ರಿವಾಲ್ ಸರಕಾರದ ಪರವಾಗಿ ಮಹತ್ವದ ತೀರ್ಪು ನೀಡಿದೆ. ಕಾನೂನು, ಸುವ್ಯವಸ್ಥೆ ಹಾಗೂ ಜಮೀನು ಹೊರತಾಗಿ ಉಳಿದೆಲ್ಲಾ ಸೇವೆಗಳ ಮೇಲೆ ದಿಲ್ಲಿ ಸರಕಾರ ಪೂರ್ಣ ಅಧಿಕಾರವನ್ನು ಹೊಂದಿದೆ ಎಂದು ಹೇಳಿದೆ. ದಿಲ್ಲಿಯ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೇಂದ್ರ ಸರಕಾರಕ್ಕೆ ಇರುವುದಾದರೆ, ದಿಲ್ಲಿಯಲ್ಲಿ ಚುನಾಯಿತ ಸರಕಾರವಿರುವುದರ ಅಗತ್ಯವೇನು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಿ.ಜೆ.ಚಂದ್ರಚೂಡ ನೇತೃತ್ವದ ನ್ಯಾಯಪೀಠವು ಈ ಸಂದರ್ಭದಲ್ಲಿ ಪ್ರಶ್ನಿಸಿದೆ. ರಾಷ್ಟ್ರಪತಿಯವರು ತನಗೆ ವಹಿಸಿಕೊಟ್ಟಿರುವ ನಿರ್ದಿಷ್ಟ ಆಡಳಿತಾತ್ಮಕ ಅಧಿಕಾರಗಳನ್ನು ಮಾತ್ರವೇ ಲೆಫ್ಟಿನೆಂಟ್ ಗವರ್ನರ್ ಅವರು ಚಲಾಯಿಸಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಕೇವಲ ವಿಧಾನಸಭೆಯ ಅಧಿಕಾರ ವ್ಯಾಪ್ತಿಗೆ ಬರುವ ವಿಷಯಗಳಲ್ಲಿ ಕಾರ್ಯನಿರ್ವಾಹಕ ಆಡಳಿತವು ಕೈಹಾಕಬಾರದು. ರಾಷ್ಟ್ರಪತಿಯವರು ವಹಿಸಿಕೊಟ್ಟಿರುವ ಅಧಿಕಾರಗಳಿಗೆ ಮಾತ್ರವೇ ಅದು ಸೀಮಿತವಾಗಿರುತ್ತದೆ. ಆದುದರಿಂದ ಸಮಗ್ರ ದಿಲ್ಲಿ ರಾಷ್ಟ್ರ ರಾಜಧಾನಿ ಪ್ರಾಂತದ ಆಡಳಿದ ಅಧಿಕಾರವನ್ನು ತನಗೆ ನೀಡಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಅವರ ಅಧೀನದಲ್ಲಿರುವ ಕಾರ್ಯನಿರ್ವಾಹಕ ಆಡಳಿತವು ಭಾವಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಇಲ್ಲದಿದ್ದಲ್ಲಿ ದಿಲ್ಲಿಗೆ ಪ್ರತ್ಯೇಕವಾದ ಚುನಾಯಿತ ಶಾಸನಸಭೆಯಿರುವುದು ನಿರರ್ಥಕವೆನಿಸಿಕೊಳ್ಳುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವು, ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದುವುದು ಸೂಕ್ತವಾದುದಾಗಿದೆ ಎಂದು ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ.

 ಒಂದು ವೇಳೆ ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ಇಲ್ಲದೆ ಇದ್ದಲ್ಲಿ, ಶಾಸಕಾಂಗ ಮತ್ತು ಸಾರ್ವಜನಿಕರ ಕುರಿತಾಗಿ ಅದರ ಹೊಣೆಗಾರಿಕೆಯು ದುರ್ಬಲಗೊಳ್ಳುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ತಿಳಿಸಿದರು.

 ದಿಲ್ಲಿಯ ಆಡಳಿತದ ಸೇವೆಗಳ ಮೇಲಿನ ಅಧಿಕಾರಕ್ಕೆ ಸಂಬಂಧಿಸಿ ದಿಲ್ಲಿ ಸರಕಾರ ಹಾಗೂ ಕೇಂದ್ರದ ನಡುವಿವ ವಿವಾದಕ್ಕೆ ಸಂಬಂಧಿಸಿ 2019ರಲ್ಲಿ ಸಾಂವಿಧಾನಿಕ ಪೀಠವು ನೀಡಿದ ವಿಭಜಿತ ತೀರ್ಪಿನಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ತಾನು ಒಪ್ಪುವುದಿಲ್ಲವೆಂದು ಸಾಂವಿಧಾನಿಕ ಪೀಠ ತಿಳಿಸಿತು. ಒಕ್ಕೂಟ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೂಲಭೂತ ತತ್ವದ ಭಾಗವಾಗಿದ್ದು, ಇದನ್ನು ಉಲ್ಲಂಘಿಸುವ ಹಾಗಿಲ್ಲವೆಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ಆಡಳಿತಾತ್ಮಕ ಸೇವೆಗಳ ಮೇಲೆ ದಿಲ್ಲಿ ಸರಕಾರಕ್ಕಿರುವ ಅಧಿಕಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಕೇಜ್ರಿವಾಲ್ ಸರಕಾರವು ಗುರುವಾರ ದಿಲ್ಲಿ ಸರಕಾರಿ ಸೇವೆಗಳ ಇಲಾಖೆಯ ಕಾರ್ಯದರ್ಶಿ ಆಶೀಸ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ದಿಲ್ಲಿಯ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

 ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಕೇಜ್ರಿವಾಲ್ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು. ಅಧಿಕಾರಿಗಳನ್ನು ವರ್ಗಾಯಿಸುವ ಹಾಗೂ ನಿಯೋಜಿಸುವ ಅಧಿಕಾರವನ್ನು ದಿಲ್ಲಿ ಸರಕಾರ ಹೊಂದಿದೆ. ಚುನಾಯಿತ ಸರಕಾರದ ಮೂಲಕವೇ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದರು.

Similar News