ನಿತೀಶ್ ಕುಮಾರ್ ಆಪ್ತ ಆರ್‌ಸಿಪಿ ಸಿಂಗ್ ಬಿಜೆಪಿಗೆ ಸೇರ್ಪಡೆ

Update: 2023-05-12 03:19 GMT

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಸಂಘಟಿಸುವ ಉದ್ದೇಶದಿಂದ ಬಿಹಾರ ಸಿಎಂ ನಿತೀಶ್ ಕುಮಾರ್ ಒಂದೆಡೆ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಅವರ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಮತ್ತು ನಿತೀಶ್ ಆಪ್ತ ಆರ್‌ಸಿಪಿ ಸಿಂಗ್ ಬಿಜೆಪಿ ಸೇರಿದ್ದಾರೆ.

ಧೀರ್ಘಕಾಲದಿಂದ ನಿತೀಶ್ ಅವರ ನಿಕಟವರ್ತಿಯಾಗಿದ್ದ ಸಿಂಗ್ ಅವರನ್ನು ಜೆಡಿಯು ರಾಷ್ಟ್ರೀಯ ಅಧ್ಯಕ್ಷರನ್ನಾಗಿಯೂ ನಿತೀಶ್ ನೇಮಿಸಿದ್ದರು. ಆದರೆ ಮೋದಿ ಸರ್ಕಾರದ ಜತೆ ಕೈಜೋಡಿಸುವಲ್ಲಿ ನಿತೀಶ್ ಏಕಪಕ್ಷೀಯ ನಿರ್ಧಾರಕೈಗೊಂಡಿದ್ದಾರೆ ಎಂದು ಒಂದು ಹಂತದಲ್ಲಿ ಸಿಂಗ್ ಆಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಐಎಎಸ್ ಅಧಿಕಾರಿಯನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.

ಸಿಂಗ್ ಇನ್ನೂ ನೇರ ಚುನಾವಣೆ ಎದುರಿಸಿಲ್ಲವಾದರೂ, ನಿತೀಶ್ ಅವರ ಕಾರ್ಯವೈಖರಿಯ ಬಗ್ಗೆ ತೀರಾ ಸೂಕ್ಷ್ಮ ಒಳನೋಟಗಳ ಬಗ್ಗೆ ಅರಿವು ಹೊಂದಿರುವ ಮತ್ತು ಜೆಡಿಯು ನಾಯಕರ ಜತೆ ಉತ್ತಮ ಸಂಬಂಧ ಹೊಂದಿರುವ ಇವರನ್ನು ಬಿಜೆಪಿ ಪ್ರಮುಖವಾಗಿ ಪರಿಗಣಿಸಿ ಪಕ್ಷಕ್ಕೆ ಬರಮಾಡಿಕೊಂಡಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನಿಲ್ ಬಲೂನಿ ಸಮ್ಮುಖದಲ್ಲಿ ಸಿಂಗ್ ಬಿಜೆಪಿ ಸೇರಿದರು.

"ನಿತೀಶ್ ಕುಮಾರ್ ಪಿಎಂ ಆಗಿದ್ದವರು. ಇದು ಅವರಿಗೆ ಕಾಯಂ ಪಟ್ಟ. ಆದರೆ ನಾವು ನೀವು ಅಂದುಕೊಂಡ ಪಿಎಂ ಅಲ್ಲ; ನಿತೀಶ್ ಪಿಎಂ ಅಂದರೆ ಪಲ್ಟಿ-ಮಾರ್ (ಪಕ್ಷಾಂತರಿ)" ಎಂದು ಸಿಂಗ್ ಲೇವಡಿ ಮಾಡಿದ್ದಾರೆ.

Similar News