ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣದ ಕುರಿತ ತೀರ್ಪನ್ನು ಕೇಂದ್ರ ಧಿಕ್ಕರಿಸುತ್ತಿದೆ ಎಂದು ಸುಪ್ರೀಂ ಮೊರೆ ಹೋದ ಎಎಪಿ

Update: 2023-05-12 07:01 GMT

ಹೊಸದಿಲ್ಲಿ: ದಿಲ್ಲಿಯ ಆಡಳಿತಾತ್ಮಕ ಸೇವೆಗಳ ಮೇಲಿನ  ನಿಯಂತ್ರಣಕ್ಕೆ ಸಂಬಂಧಿಸಿದಂತೆ  ಸಾಂವಿಧಾನಿಕ ಪೀಠದ ಆದೇಶವನ್ನು ಕೇಂದ್ರ ಸರಕಾರ ಧಿಕ್ಕರಿಸುತ್ತಿದೆ ಎಂದು ಆರೋಪಿಸಿ ದಿಲ್ಲಿ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ದಿಲ್ಲಿಯ ಆಡಳಿತಾತ್ಮಕ ಸೇವೆಗಳ ಮೇಲಿನ  ನಿಯಂತ್ರಣಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ಗುರುವಾರ ಅರವಿಂದ ಕೇಜ್ರಿವಾಲ್(Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ಸರಕಾರದ ಪರವಾಗಿ ತೀರ್ಪು ನೀಡಿತ್ತು.

ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣ ಹೊಂದುವುದು ಸೂಕ್ತವಾದುದಾಗಿದೆ ಎಂದು ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ.

ಒಂದು ವೇಳೆ ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರಕಾರ ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ಇಲ್ಲದೆ ಇದ್ದಲ್ಲಿ ಶಾಸಕಾಂಗ ಹಾಗೂ ಸಾರ್ವಜನಿಕರ ಕುರಿತಾಗಿ ಅದರ ಹೊಣೆಗಾರಿಕೆ ದುರ್ಬಲವಾಗುತ್ತದೆ.  ದಿಲ್ಲಿಯ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೇಂದ್ರ ಸರಕಾರಕ್ಕೆ ಇರುವುದಾದರೆ ದಿಲ್ಲಿಯಲ್ಲಿ ಚುನಾಯಿತ ಸರಕಾರ ಇರುವುದರ ಅಗತ್ಯವೇನಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಿ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಸಂದರ್ಭ ಪ್ರಶ್ನಿಸಿತ್ತು.

Similar News