ನಾನು ಯಾರೊಂದಿಗೂ ಸೇಡು ತೀರಿಸಿಕೊಳ್ಳುತ್ತಿಲ್ಲ: ಸರಕಾರದ ವಿರುದ್ಧ ಯಾತ್ರೆ ಆರಂಭಿಸಿರುವ ಪೈಲಟ್ ಪ್ರತಿಕ್ರಿಯೆ
ಹೊಸದಿಲ್ಲಿ: ಅಜ್ಮೀರ್‌ನಿಂದ ಜೈಪುರಕ್ಕೆ ಗುರುವಾರ ಜನಸಂಘರ್ಷ್ ಯಾತ್ರೆಯನ್ನು ಆರಂಭಿಸಿರುವ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್(Sachin Pilot ), ತಾನು ಯಾರೊಂದಿಗೂ ಸೇಡು ತೀರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಭಿನ್ನಾಭಿಪ್ರಾಯ ಹೆಚ್ಚಿಸಿಕೊಂಡಿರುವ ಪೈಲಟ್, ರಾಜ್ಯದ ಮಾಜಿ ಸಿಎಂ ವಸುಂಧರಾ ರಾಜೇ ಅವರೊಂದಿಗೆ ಶಾಮೀಲಾಗಿರುವ ಕುರಿತಂತೆ ಗೆಹ್ಲೋಟ್ ಅವರು ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲವಾದ್ದರಿಂದ ಪಕ್ಷದ ಹೈಕಮಾಂಡ್ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪರಿಹರಿಸಬೇಕು. ಭ್ರಷ್ಟಾಚಾರದ ವಿಷಯಗಳ ಬಗ್ಗೆ ತನಿಖೆ ನಡೆಸಬೇಕು" ಎಂದು ಪೈಲಟ್ 'ಇಂಡಿಯಾ ಟುಡೇ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ವಸುಂಧರಾ ರಾಜೇ ಅವರೊಂದಿಗೆ ಶಾಮೀಲಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮಾತನಾಡಬೇಕು. ನನಗೆ ವೈಯಕ್ತಿಕವಾಗಿ ಯಾರೊಂದಿಗೂ ಸಮಸ್ಯೆಗಳಿಲ್ಲ. ನಾವು ಕೆಲವು ವಿಷಯಗಳ ಮೇಲೆ ಹೋರಾಡಿದ್ದೇವೆ. ಆ ನಂತರ ನಾವು ಅಧಿಕಾರಕ್ಕೆ ಬಂದಿದ್ದೇವೆ. ಭ್ರಷ್ಟಾಚಾರದ ವಿಷಯಗಳ ಬಗ್ಗೆ ತನಿಖೆ ನಡೆಸುವುದು ಅತ್ಯಂತ ಮುಖ್ಯವಾಗಿದೆ" ಎಂದು ಪೈಲಟ್ 'ಇಂಡಿಯಾ ಟುಡೇ'ಗೆ ತಿಳಿಸಿದರು.