68 ನ್ಯಾಯಾಂಗ ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾಗಿ ಭಡ್ತಿ ನೀಡುವ ಗುಜರಾತ್ ಸರಕಾರದ ನಿರ್ಧಾರಕ್ಕೆ ಸುಪ್ರೀಂ ತಡೆ
ಭಡ್ತಿ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದ ಹರೀಶ್ ಹಸ್ಮುಖ್ ಭಾಯಿ ವರ್ಮಾ ಹೆಸರು
Update: 2023-05-12 13:34 IST
ಹೊಸದಿಲ್ಲಿ: 68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರನ್ನಾಗಿ ಭಡ್ತಿ ನೀಡುವ ಗುಜರಾತ್ ಸರಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠವು ನೀಡಿರುವ ಮಧ್ಯಂತರ ಆದೇಶದಲ್ಲಿ ಅಧಿಕಾರಿಗಳಿಗೆ ಭಡ್ತಿ ನೀಡುವ ಗುಜರಾತ್ ಹೈಕೋರ್ಟ್ ಶಿಫಾರಸಿಗೆ ಹಾಗೂ ಇದರ ಅನ್ವಯ ರಾಜ್ಯ ಅಧಿಸೂಚನೆಗೆ ತಡೆ ನೀಡಿದೆ.
ಹೈಕೋರ್ಟ್ ಶಿಫಾರಸನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದ ನಂತರ ರಾಜ್ಯವು ಅಧಿಸೂಚನೆ ಹೊರಡಿಸಿದೆ ಎಂದು ಪೀಠವು ಗಮನಿಸಿದೆ.
ಜಿಲ್ಲಾ ನ್ಯಾಯಾಧೀಶರಾಗಿ ಭಡ್ತಿ ಪಡೆಯಲು ಶಿಫಾರಸು ಮಾಡಿರುವ 68 ನ್ಯಾಯಾಂಗ ಅಧಿಕಾರಿಗಳ ಪೈಕಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದ ಹರೀಶ್ ಹಸ್ಮುಖ್ ಭಾಯಿ ವರ್ಮಾ ಅವರು ಕೂಡ ಇದ್ದರು.