×
Ad

ಮಧ್ಯಪ್ರದೇಶದಲ್ಲಿ ಕಾಣೆಯಾಗಿರುವ 36,000ಕ್ಕೂ ಅಧಿಕ ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ: ವರದಿ

Update: 2023-05-12 19:38 IST

ಭೋಪಾಲ: ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ಗೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿರುವ ಮಧ್ಯಪ್ರದೇಶವು ದೇಶದಲ್ಲಿ ಎರಡನೇ ಅತ್ಯಂತ ಹೆಚ್ಚಿನ ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಹೊಂದಿದೆ. ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ ಎಂದು newsclick.in ವರದಿ ಮಾಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ 2021ರ ವರದಿಯಂತೆ, ಮಧ್ಯಪ್ರದೇಶವು ಈವರೆಗೆ 2,830 ಅಪ್ರಾಪ್ತ ವಯಸ್ಕ ಬಾಲಕಿಯರು ಸೇರಿದಂತೆ ನಾಪತ್ತೆಯಾಗಿರುವ 36,104 ಮಹಿಳೆಯರನ್ನು ಪತ್ತೆ ಹಚ್ಚುವಲ್ಲಿ ವಿಫಲಗೊಂಡಿದೆ. ಅಗ್ರಸ್ಥಾನದಲ್ಲಿರುವ ಪ.ಬಂಗಾಳದಲ್ಲಿ ಕಾಣೆಯಾಗಿರುವ 40,719 ಮಹಿಳೆಯರು ಈವರೆಗೂ ಪತ್ತೆಯಾಗಿಲ್ಲ.

‘ದಿ ಕೇರಳ ಸ್ಟೋರಿ’ಯು ಕೇರಳದಿಂದ ನಾಪತ್ತೆಯಾಗಿರುವ 32,000 ಮಹಿಳೆಯರ ಕಥೆ ಎಂದು ಈ ಮೊದಲು ಹೇಳಿಕೊಂಡಿದ್ದ ಚಿತ್ರ ನಿರ್ಮಾಪಕರು ರಾಜ್ಯ ಸರಕಾರದ ತೀವ್ರ ವಿರೋಧದ ಬಳಿಕ ಈ ಸಂಖ್ಯೆಯನ್ನು ಮೂರಕ್ಕೆ ಇಳಿಸಿದ್ದಾರೆ. ಇದೊಂದು ನಕಲಿ ಕಥೆ ಎಂದು ಬಣ್ಣಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ಚಿತ್ರವು ತಮ್ಮ ಅಪ್ರಚಾರವನ್ನು ಹರಡಲು ಸಂಘಪರಿವಾರದ ಸುಳ್ಳಿನ ಕಾರ್ಖಾನೆಯ ಉತ್ಪನ್ನವಾಗಿದೆ ಎಂದು ಹೇಳಿದ್ದಾರೆ.

ಅಂಕಿಅಂಶಗಳನ್ನು ತಿರುಚಲಾಗಿದೆ ಮತ್ತು ದ್ವೇಷವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಲಾಗಿರುವ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬೆಂಬಲಿಸಿದ್ದು, ಆ ಬಳಿಕ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಚಿತ್ರವನ್ನು ತೆರಿಗೆಮುಕ್ತಗೊಳಿಸಲಾಗಿದೆ, ಇದೇ ವೇಳೆ ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಚಿತ್ರಕ್ಕೆ ಹಿನ್ನಡೆಯುಂಟಾಗುತ್ತಿದೆ.

ಮೇ 6ರಂದು ‘ದಿ ಕೇರಳ ಸ್ಟೋರಿ’ಗೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರು,‘ಲವ್ ಜಿಹಾದ್ ನ ಬಲೆಯಲ್ಲಿ ಸಿಲುಕುವ ಹೆಣ್ಣುಮಕ್ಕಳ ಜೀವನವು ಹೇಗೆ ನಾಶಗೊಳ್ಳುತ್ತದೆ ಎನ್ನುವುದನ್ನು ಚಿತ್ರವು ತೋರಿಸಿದೆ. ನಾವು ಈಗಾಗಲೇ ಮತಾಂತರದ ವಿರುದ್ಧ ಕಾನೂನನ್ನು ಜಾರಿಗೊಳಿಸಿದ್ದೇವೆ ಮತ್ತು ಚಿತ್ರವು ಈ ವಿಷಯದ ಕುರಿತು ಅರಿವು ಮೂಡಿಸುತ್ತದೆ. ಈ ಚಿತ್ರವನ್ನು ಪೋಷಕರು,ಮಕ್ಕಳು ಮತ್ತು ಹೆಣ್ಣುಮಕ್ಕಳು ಅಗತ್ಯವಾಗಿ ನೋಡಬೇಕು,ಇದೇ ಕಾರಣದಿಂದ ಚಿತ್ರವನ್ನು ತೆರಿಗೆಮುಕ್ತಗೊಳಿಸಲಾಗಿದೆ ’ ಎಂದು ಹೇಳಿದ್ದರು.

2019ರಿಂದ 2021ರ ನಡುವೆ ರಾಜ್ಯದ 25,209 ಅಪ್ರಾಪ್ತ ವಯಸ್ಕರ ನಾಪತ್ತೆ ವರದಿಯಾಗಿರುವ ಸಂದರ್ಭದಲ್ಲಿಯೇ ಚೌಹಾಣ್ ಅವರ ಈ ಹೇಳಿಕೆ ಹೊರಬಿದ್ದಿದೆ. ಈ ಪೈಕಿ 2,830 ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಹಿಂದಿನ ವರ್ಷಗಳ ಪತ್ತೆಯಾಗದ ಒಟ್ಟು ಪ್ರಕರಣಗಳನ್ನು ಒಳಗೊಂಡಿದೆ. ಇದರೊಂದಿಗೆ ಮಧ್ಯಪ್ರದೇಶವು ಬಿಹಾರ ಮತ್ತು ಪ.ಬಂಗಾಳಗಳ ಬಳಿಕ ಅತ್ಯಂತ ಹೆಚ್ಚು ಅಪ್ರಾಪ್ತ ವಯಸ್ಕ ಬಾಲಕಿಯರ ನಾಪತ್ತೆ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. 5,609 ಪ್ರಕರಣಗಳೊಂದಿಗೆ ಇಲ್ಲಿಯೂ ಪಶ್ಚಿಮ ಬಂಗಾಳವೇ ಅಗ್ರಸ್ಥಾನದಲ್ಲಿದೆ.

ನಾಪತ್ತೆಯಾಗಿರುವ ಮಹಿಳೆಯರ ಪ್ರಕರಣಗಳಿಗೆ ಸಂಬಂಧಿಸಿದಂತೆ 2019-2021ರ ನಡುವೆ ಮಧ್ಯಪ್ರದೇಶದಲ್ಲಿ ಇಂತಹ 99,119 ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ ಅರ್ಧಕ್ಕೂ ಅಧಿಕ ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. ಪತ್ತೆ ಹಚ್ಚುವಿಕೆ ದರವು ಶೇ.47ರಿಂದ ಶೇ.51ರ ನಡುವೆ ಇದ್ದು,33,274 ಮಹಿಳೆಯರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಇದೇ ಅವಧಿಯಲ್ಲಿ ಕೇರಳದಲ್ಲಿ 24,258 ಮಹಿಳೆಯರ ನಾಪತ್ತೆ ಪ್ರಕರಣಗಳು ವರದಿಯಾಗಿದ್ದು,ಇದರಲ್ಲಿ 2,837 ಅಪ್ರಾಪ್ತ ವಯಸ್ಕ ಬಾಲಕಿಯರು ಸೇರಿದ್ದಾರೆ. ಅಂದರೆ ಶೇ.90ಕ್ಕೂ ಅಧಿಕ ಪ್ರಕರಣಗಳು ಯಶಸ್ವಿಯಾಗಿ ವಿಲೇವಾರಿಗೊಂಡಿದ್ದು, ನಾಪತ್ತೆಯಾಗಿದ್ದ ಹೆಚ್ಚಿನ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಕೇರಳ ಪೊಲೀಸರು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. 2021ಕ್ಕೆ ಇದ್ದಂತೆ ರಾಜ್ಯದಲ್ಲಿ ಕಾಣೆಯಾಗಿರುವ 366 ಮಹಿಳೆಯರು ಮತ್ತು 32 ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಪತ್ತೆ ಹಚ್ಚಲಾಗಿರಲಿಲ್ಲ. ಆದರೆ ಮಧ್ಯಪ್ರದೇಶದಲ್ಲಿ 36,000ಕ್ಕೂ ಅಧಿಕ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.

Similar News