×
Ad

ಆರ್ಯನ್ ಖಾನ್ ರನ್ನು ಬಂಧಿಸಿದ್ದ ವಾಂಖೆಡೆ ವಿರುದ್ಧ ಸಿಬಿಐ ನಿಂದ ಭ್ರಷ್ಟಾಚಾರ ಪ್ರಕರಣ

Update: 2023-05-12 22:37 IST

ಹೊಸದಿಲ್ಲಿ,ಮೇ 12; ಎರಡು ವರ್ಷಗಳ ಹಿಂದೆ ವಿಹಾರ ನೌಕೆಯಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ರನ್ನು ಬಂಧಿಸಿದ್ದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಶುಕ್ರವಾರ ಭ್ರಷ್ಟಾಚಾರ ಮೊಕದ್ದಮೆಯನ್ನು ದಾಖಲಿಸಿಕೊಂಡಿದೆ.

ಮಾದಕ ದ್ರವ್ಯ ಪ್ರಕರಣದಲ್ಲಿ ಆರ್ಯನ್ ಖಾನ್ ರನ್ನು ಸಿಲುಕಿಸದಿರಲು ವಾಂಖೆಡೆ ಮತ್ತು ಇತರರು 25 ಕೋ.ರೂ.ಗಳ ಲಂಚಕ್ಕೆ ಬೇಡಿಕೆಯಿರಿಸಿದ್ದರು ಎಂದು ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಿಬಿಐ ಮುಂಬೈ, ದಿಲ್ಲಿ, ರಾಂಚಿ ಮತ್ತು ಕಾನ್ಪುರಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.

2021ರಲ್ಲಿ ಎನ್ಸಿಬಿಯ ಮುಂಬೈ ವಲಯ ಕಚೇರಿಯ ಮುಖ್ಯಸ್ಥರಾಗಿದ್ದ ವಾಂಖೆಡೆ ಮತ್ತು ಇತರರು ಮುಂಬೈ ಕರಾವಳಿಯಾಚೆ ವಿಹಾರ ನೌಕೆಯ ಮೇಲೆ ದಾಳಿ ನಡೆಸಿದ್ದರು.

ಬಂಧನದ ಬಳಿಕ ನಾಲ್ಕು ವಾರಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಖಾನ್ರನ್ನು ಎನ್ಸಿಬಿ ಸಾಕಷ್ಟು ಸಾಕ್ಷಾಧಾರಗಳ ಕೊರತೆಯಿಂದಾಗಿ ಮೇ 2022ರಲ್ಲಿ ಆರೋಪಗಳಿಂದ ಮುಕ್ತಗೊಳಿಸಿತ್ತು.

ಈ ಹಿಂದೆ ಎನ್ಸಿಬಿ ರಚಿಸಿದ್ದ ವಿಶೇಷ ತನಿಖಾ ತಂಡವು ವಾಂಖೆಡೆ ನೇತೃತ್ವದಲ್ಲಿ ನಡೆದಿದ್ದ ತನಿಖೆಯಲ್ಲಿ ಲೋಪಗಳಿವೆ ಎಂದು ಹೇಳಿತ್ತು.

Similar News