ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕ
ಹೊಸದಿಲ್ಲಿ: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾದ (ಡಿಜಿಪಿ) ಪ್ರವೀಣ್ ಸೂದ್ ಎರಡು ವರ್ಷಗಳ ಕಾಲ ಕೇಂದ್ರೀಯ ತನಿಖಾ ದಳ(ಸಿಬಿಐ)ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಪ್ರಧಾನಿ ನೇತೃತ್ವದಲ್ಲಿ ರಚನೆಗೊಂಡಿರುವ ವಿಶೇಷ ಸಮಿತಿ ಮೂವರು ಅರ್ಹ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.
ಸೂದ್ ಅವರು ಕರ್ನಾಟಕ ಕೇಡರ್‌ನ 1986-ಬ್ಯಾಚ್‌ನ IPS ಅಧಿಕಾರಿ. ಮೂರು ವರ್ಷಗಳ ಹಿಂದೆ ರಾಜ್ಯ ಡಿಜಿಪಿಯಾಗಿ ನೇಮಕಗೊಂಡಿದ್ದರು. ಹಿಮಾಚಲ ಪ್ರದೇಶದ ಸೂದ್ ಅವರು IIT-ದಿಲ್ಲಿಯ ಹಳೆಯ ವಿದ್ಯಾರ್ಥಿ. ಅವರು ಮೇ 2024 ರಲ್ಲಿ ನಿವೃತ್ತರಾಗಬೇಕಿತ್ತು, ಆದರೆ ಈಗ ಎರಡು ವರ್ಷಗಳ ನಿಶ್ಚಿತ ಅಧಿಕಾರಾವಧಿಯನ್ನು ಪಡೆಯುತ್ತಾರೆ ಹಾಗೂ ಕನಿಷ್ಠ ಮೇ 2025 ರವರೆಗೆ ಅಧಿಕಾರದಲ್ಲಿರುತ್ತಾರೆ.
ಪ್ರಧಾನ ಮಂತ್ರಿ, ಸಿಜೆಐ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.