ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿಗೆ ಡಾ.ಪುಂಡಿಕಾ ಗಣಪಯ್ಯ ಭಟ್ ಆಯ್ಕೆ

Update: 2023-05-14 15:06 GMT

ಉಡುಪಿ, ಮೇ 14: ಇತಿಹಾಸ ತಜ್ಞ ಡಾ.ಕೆ.ಪುಂಡಿಕಾ ಗಣಪಯ್ಯ ಭಟ್ 2023ನೇ ಸಾಲಿನ ಪೊಳಲಿ ಶೀನಪ್ಪಹೆಗ್ಡೆ ಮತ್ತು ಎಸ್.ಆರ್.ಹೆಗ್ಡೆ ಜಂಟಿ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು 20000ರೂ. ಹಾಗೂ ಪ್ರಶಸ್ತಿ ಫಲಕವನ್ನೊಳ ಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಂಡಿಕಾ ಗಣಪಯ್ಯ ಭಟ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ನಡೆಸಿದ್ದಲ್ಲದೆ ತುಳುನಾಡಿನ ಶಾಸನೋಕ್ತ ಅಧ್ಯಯನ ನಡಿಸಿದ್ದಾರೆ. ಪಿಎಚ್.ಡಿ ಪದವೀಧರರಾದ ಇವರು ಸುಮಾರು 30 ವರ್ಷ ಇತಿಹಾಸ, ಪುರಾತತ್ವ ಪ್ರಾಧ್ಯಾಪಕರಾಗಿ ಸಂಶೋಧನಾ ಮಾರ್ಗದರ್ಶಕರಾಗಿದ್ದರು.

ಇವರು ಕನ್ನಡ ವಿ.ವಿ ಹಂಪಿ ಮತ್ತು ಮಣಿಪಾಲ ವಿ.ವಿಗಳ ಸಂಶೋಧನಾ ಮಾರ್ಗ ದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಯುರೋಪ್ ನೆನಪುಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ತೌಳವ-ಸಂಶೋಧನ ಲೇಖನಗಳ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ತುಳುಸಾಹಿತ್ಯ ಅಕಾಡೆಮಿ ಪ್ರಶಸಿತಿಗಳು ಬಂದಿವೆ. ಇವರು ಕರ್ನಾಟಕ ಇತಿಹಾಸ ಅಕಾಡೆಮಿ, ಭಾರತೀಯ ಸ್ಥಳನಾಮ ಅಧ್ಯಯನ ಸಂಘ, ಇಂಡಿಯನ್ ಹಿಸ್ಟರಿ ಕಾಂಗ್ರೆಸ್,  ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News