×
Ad

ಐಓಎಗೆ ಡಬ್ಲ್ಯುಎಫ್ಐ ಉಸ್ತುವಾರಿ: 'ನ್ಯಾಯದೆಡೆಗೆ ಇಟ್ಟ ಮೊದಲ ಹೆಜ್ಜೆ'; ಬಜರಂಗ್ ಪುನಿಯಾ

Update: 2023-05-14 22:05 IST

ಹೊಸದಿಲ್ಲಿ,ಮೇ 14: ಭಾರತೀಯ ಕುಸ್ತಿ ಫೆಡರೇಶನ್ ನ  ಎಲ್ಲಾ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಳ್ಳುವ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (IOA)ನ ನಿರ್ಧಾರವು ಭಾರತೀಯ ಕುಸ್ತಿ ಫೆಡರೇಶನ್ನ ಮಾಜಿ ವರಿಷ್ಠ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ನ್ಯಾಯ ಪಡೆಯುವತ್ತ ತಾವು ಇಟ್ಟಿರುವ ಮೊದಲ ಹೆಜ್ಜೆಯಾಗಿದೆ ಎಂದು  ಪ್ರತಿಭಟನಾ ನಿರತ ಕುಸ್ತಿಪಟುಗಳು ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ಭೂಷಣ್ ಬಂಧನಕ್ಕೆ ಆಗ್ರಹಿಸಿ  ಕುಸ್ತಿಪಟುಗಳು ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ಕಳೆದ 22 ದಿನಗಳಿಂದ  ಧರಣಿ ನಡೆಸುತ್ತಿದ್ದಾರೆ.

ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಮೇ 12ರಂದು ಭಾರತೀಯ ಕುಸ್ತಿ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ (WFI) ಯವರಿಗೆ ಪತ್ರವೊಂದನ್ನು ಬರೆದು ಹಣಕಾಸು ಲೆಕ್ಕಪತ್ರಗಳು ಸೇರಿದಂತೆ ಸಂಸ್ಥೆಯ ಎಲ್ಲಾ ಅಧಿಕೃತ ದಾಖಲೆಗಳನ್ನು ತನ್ನ ಅಡ್ಹಾಕ್ ಸಮಿತಿಗೆ  ಹಸ್ತಾಂತರಿಸುವಂತೆ ತಿಳಿಸಿತ್ತು. ಅಲ್ಲದೆ ಡಬ್ಲ್ಯುಎಫ್ಐನ ನಿರ್ಗಮನ ಪದಾಧಿಕಾರಿಗಳಿಗೆ ಫೆಡರೇಶನ್ನ  ಆಡಳಿತದಲ್ಲಿ  ಯಾವುದೇ ಪಾತ್ರವಿರುವುದಿಲ್ಲವೆಂದು ತಿಳಿಸಿತ್ತು.

‘‘ಹಾಲಿ ಭಾರತೀಯ ಕುಸ್ತಿ ಫೆಡರೇಶನ್ನ ವಿಸರ್ಜನೆಯು ನ್ಯಾಯಕ್ಕಾಗಿ ನಾವು ನಡೆಸುತ್ತಿರುವ ಹೋರಾಟದಲ್ಲೊಂದು ಮೊದಲ ಹೆಜ್ಜೆಯಾಗಿದೆ. ನಮ್ಮ ಹೋರಾಟವು ಶ್ರದ್ಧಾಪೂರ್ವಕವಾಗಿ ಆರಂಭಗೊಂಡಿತ್ತು. ಇದು ನಮಗೆ ದೊರೆತ ಗೆಲುವು... ನ್ಯಾಯ ದೊರೆಯುವ ತನಕವೂ ನಾವು ಹೋರಾಟ ಮುಂದುವರಿಸಲಿದ್ದೇವೆ’’ ಎಂದು ಟೊಕಿಯೋ ಒಲಿಂಪಿಕ್ನಲ್ಲಿ ಕಂಚು ಪದಕ ವಿಜೇತ ಕುಸ್ತಿಪಟು ಬಜರಂಗ ಪುನಿಯಾ ತಿಳಿಸಿದ್ದಾರೆ.

ಈ ಮಧ್ಯೆ ಡಬ್ಲ್ಯುಎಫ್ಐ ಹೇಳಿಕೆಯೊಂದ್ನು ನೀಡಿ, ಭಾರತೀಯ ಒಲಿಂಪಿಕ್ ಅಸೋಸಿಯೇಶನ್ನ ಆದೇಶವನ್ನು ತಾನು ಪಾಲಿಸುವುದಾಗಿ ತಿಳಿಸಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಾನು ಸಹಕರಿಸುತ್ತಿರುವುದಾಗಿ ತಿಳಿಸಿದೆ.

ಮಹಿಳೆಯರ ಘನತೆಗಾಗಿ ನಾವು ನಡೆಸುತ್ತಿರುವ  ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು  ಆಡಳಿತ ಪಕ್ಷದ ಒಬ್ಬನೇ ಒಬ್ಬ ಸಂಸದ  ಧರಣಿ ನಿರತರನ್ನು ಭೇಟಿಯಾಗಿಲ್ಲವೆಂದು ಏಶ್ಯನ್ ಗೇಮ್ಸ್ನ ಪದಕ ವಿಜೇತೆ ವಿನೇಶ್ ಫೋಗಟ್ ತಿಳಿಸಿದ್ದಾರೆ.

ತಮ್ಮನ್ನು ಬೆಂಬಲಿಸುವಂತೆ ಕೋರಿ  ಕುಸ್ತಿಪಟುಗಳು ಆಡಳಿತ ಪಕ್ಷದ ಎಲ್ಲಾ ಮಹಿಳಾ ಸಂಸದರಿಗೆ  ತಾವು ಪತ್ರವನ್ನು ನೀಡಲಿದ್ದೇವೆ ಅಥವಾ ಇಮೇಲ್ ರವಾನಿಸಲಿದ್ದೇವೆ ಎಂದು ಆಕೆ ಹೇಳಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು  45 ದಿನಗಳೊಳಗೆ ಪೂರ್ಣಗೊಳಿಸಬೇಕಾಗಿದೆ ಹಾಗೂ ನೂತನ ಚುನಾಯಿತ ಘಟಕಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಗುವುದೆಂದು  ಭಾರತೀಯ ಒಲಿಂಪಿಕ್ ಅಸೋಸಿಯೇಶನ್ನ ತ್ರಿಸದಸ್ಯ ಸಮಿತಿಯು ಸ್ಪಷ್ಟಪಡಿಸಿದೆ.

Similar News