ಭಾರತಕ್ಕೆ ಕರ್ನಾಟಕ ತೋರಿಸಿದ ಹೊಸ ದಾರಿ

Update: 2023-05-15 07:49 GMT

ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಡಬಲ್ ಇಂಜಿನ ಸರಕಾರದ ಪ್ರಸ್ತಾಪ ಮಾಡುತ್ತಲೇ ಇದ್ದರು. ಸಂವಿಧಾನ ವಿರೋಧಿಯಾದ ಈ ಪರಿಕಲ್ಪನೆಯನ್ನು ವಿರೋಧಿಸಿದ ಜನ ಎರಡೂ ಇಂಜಿನ್ ಗಳನ್ನು ತಿರಸ್ಕರಿಸಿದರು. ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಭಕ್ತರು ಆ ಭ್ರಮಾ ಲೋಕದಿಂದ ಹೊರಬಂದು ವಾಸ್ತವಕ್ಕೆ ಕಣ್ಣು ತೆರೆಯಬೇಕು.ಮೋದಿಯವರಿಗೆ ಸಾವಿರ ವರ್ಷ ಆಯುಷ್ಯವಿರುತ್ತದೆ ಎಂಬ ಭ್ರಮೆಯಲ್ಲಿ ಇವರಿದ್ದಾರೆ. ಮೋದಿಯವರಿಗೆ ಈಗ 73 ವರ್ಷ. ಅವರೊಬ್ಬರೇ ದೇಶದಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಪ್ರವಾಸ ಮಾಡಿ ತನ್ನ ಶಕ್ತಿ, ಸಾಮರ್ಥ್ಯವನ್ನು ಪಣಕ್ಕಿಟ್ಟರೂ ದೈಹಿಕ ಪರಿಸ್ಥಿತಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಅವರ ವರ್ಚಸ್ಸು ಕ್ಷೀಣಿಸುತ್ತಿರುವುದು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲೇ ಗೊತ್ತಾಗಿದೆ.

ಈಸಲದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಮುಖ ನೋಡಿ ಮತ ಹಾಕುವಂತೆ ಮತದಾರರಲ್ಲಿ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದರು. ರಾಜ್ಯ ಸರಕಾರ ಅವರದೇ ಆಗಿದ್ದರೂ ಯಡಿಯೂರಪ್ಪ ನವರಂಥ ಮಾಜಿ ಮುಖ್ಯ ಮಂತ್ರಿ ಮತ್ತು ಜನಪ್ರಿಯ ನಾಯಕ ಇಲ್ಲಿದ್ದರೂ ಅವರಾರನ್ನೂ ಮುಂದೆ ಬಿಡದೆ ಮೋದಿಯವರ ಹೆಸರಿನಲ್ಲಿ ಮತ ಕೇಳಲಾಯಿತು.ಮೋದಿಯವರು ನಾಲ್ಕೂವರೆ ತಿಂಗಳಲ್ಲಿ ಹನ್ನೊಂದು ಸಲ ಬಂದು ಹೋದರು.ಕೊನೆಯ ಬಾರಿ ಬಂದಾಗ ಒಂದು ವಾರ ಇಲ್ಲೇ ಝೆಂಡಾ ಊರಿ, ಪ್ರತಿ ನಗರ, ತಾಲೂಕು, ಪಂಚಾಯತ್, ಸಂದಿ ಗೊಂದಿಗಳಲ್ಲಿ ಕೈ ಬೀಸುತ್ತ ಓಡಾಡಿದರು. ಅವರು ಮಾತ್ರವಲ್ಲ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ನಡ್ಡಾ ರಾಜ್ಯದ ಮೂಲೆ ಮೂಲೆಗೆ ಸಂಚರಿಸಿದರು. ಆದರೆ ಮೋದಿ ಸಂಚರಿಸಿ ಪ್ರಚಾರ ಮಾಡಿದ ಬಹುತೇಕ ಕಡೆ ಬಿಜೆಪಿ ಅಭ್ಯರ್ಥಿಗಳು ಸೋತರು.ಇದು ಮೋದಿ ವರ್ಚಸ್ಸಿಗೆ ಚೇತರಿಸಲಾಗದ ಪೆಟ್ಟು.

ಉತ್ತರ ಭಾರತದ ಬಹುತೇಕ ರಾಜ್ಯಗಳನ್ನು ಮತ್ತು ಈಶಾನ್ಯ ಭಾರತದ ರಾಜ್ಯಗಳನ್ನು ಬುಟ್ಟಿಗೆ ಹಾಕಿಕೊಂಡಂತೆ ದಕ್ಷಿಣ ಭಾರತದ ರಾಜ್ಯಗಳನ್ನು ಸ್ವಾಧೀನ ಪಡಿಸಿಕೊಳ್ಳುವ ನಾಗಪುರದ ಭಾಗವತರ ತಂತ್ರ ವಿಫಲಗೊಳ್ಳುತ್ತಲೇ ಇದೆ. ನರೇಂದ್ರ ಮೋದಿ ಸ್ವತಃ ವಿಶ್ವಗುರು ಎಂದು ವಾಟ್ಸ್‌ಆ್ಯಪ್ ಯುನಿವರ್ಸಿಟಿ ಭಕ್ತರ ಭಜನಾ ಮಂಡಳಿಗಳಿಂದ ಕರೆಯಿಸಿಕೊಂಡರೂ ಅವರನ್ನು ನಿಯಂತ್ರಿಸುತ್ತಿರುವುದು ಕಾರ್ಪೊರೇಟ್ ಲಾಬಿ ಮತ್ತು ಆ ಲಾಬಿಯೊಂದಿಗೆ ಶಾಮೀಲಾದ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ.

ಆಡಳಿತದ ಹೊಣೆ ಹೊತ್ತವರು ಸಮಾಜದಲ್ಲಿ ಶಾಂತಿ, ಸೌಹಾರ್ದಕ್ಕೆ ಯತ್ನಿಸಬೇಕು. ಆದರೆ ಬಿಜೆಪಿ ಸರಕಾರದ ಮಂತ್ರಿಗಳು ಆರೆಸ್ಸೆಸ್ ನಾಯಕರನ್ನು ಒಲೈಸಲು ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾದರು. ಮಹಾವೀರ,ಬುದ್ಧ, ಕುವೆಂಪು, ಬಸವಣ್ಣ, ಬಾಬಾಸಾಹೇಬರಿಗೆ ಸಂಬಂಧಿಸಿದ ಅಂಶಗಳನ್ನು ಪಠ್ಯಕ್ರಮದಿಂದ ತೆಗೆದು ಹಾಕಲು ಯತ್ನಿಸಿದರು. ಬಲವಂತದ ಹಿಂದಿ ಹೇರಿಕೆ ಮಿತಿ ಮೀರಿತು. ಕೋವಿಡ್ ಸಂದರ್ಭದಲ್ಲಿ ಇವರು ಮಾಡಿದ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬಂದವು, ಇದರಿಂದ ರೋಸಿ ಹೋದ ಜನ ಚುನಾವಣೆಯಲ್ಲಿ ಬಿಜೆಪಿಯನ್ನು ತಿಪ್ಪೆಗೆ ಬಿಸಾಡಿದರು.

 ಕರ್ನಾಟಕದಲ್ಲಿ ಗೆಲುವು ಸಾಧಿಸಲು ಹಿಂದೂ-ಮುಸಲ್ಮಾನರ ನಡುವೆ ಬೆಂಕಿ ಹಚ್ಚಲು ಮುಂದಾದರು. ಕಾನೂನು ಪಾಲನೆ ಮಾಡಬೇಕಾದ ಅಮಿತ್ ಶಾ ಇಂಥದಕ್ಕೆ ಪ್ರಚೋದನೆ ಮಾಡಿದರು. ಹಿಜಾಬ್, ಹಲಾಲ್ ಕಟ್, ಅಝಾನ್ ಮತ್ತು ಲವ್ ಜಿಹಾದ್‌ನಂಥ ವಿವಾದಗಳನ್ನು ಉಂಟು ಮಾಡಿದ್ದಲ್ಲದೇ ಉರಿಗೌಡ-ನಂಜೇಗೌಡ ಎಂಬ ಕಟ್ಟುಕಥೆಗಳನ್ನು ಕಟ್ಟಿ ಒಕ್ಕಲಿಗರು ಮತ್ತು ಮುಸಲ್ಮಾನರ ನಡುವೆ ಕಿಡಿ ಹಚ್ಚಲು ಮಸಲತ್ತು ಮಾಡಿದರು.ಹಿರಿಯ ಸಚಿವರಾದ ಅಶ್ವತ್ಥನಾರಾಯಣ, ಶಾಸಕ ಸಿ.ಟಿ. ರವಿಯಂಥವರು ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಎಂದು ಸಾಧಿಸಲು ಯತ್ನಿಸಿದರು. ಇವೆಲ್ಲ ಕಪಿಚೇಷ್ಟೆಗಳನ್ನು ಮೌನವಾಗಿ ಗಮನಿಸುತ್ತಿದ್ದ ಕರ್ನಾಟಕದ ಮತದಾರರು ಚುನಾವಣೆಯಲ್ಲಿ ಚೇತರಿಸಲಾಗದ ಪೆಟ್ಟು ನೀಡಿದರು.

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಪ್ರಾಮುಖ್ಯತೆ ಬರಲು ಇನ್ನೊಂದು ಮುಖ್ಯ ಕಾರಣ ಮುಂಬರುವ ೨೦೨೪ರ ಲೋಕಸಭಾ ಚುನಾವಣೆ. ರಾಜ್ಯದ ಚುನಾವಣೆಯ ಫಲಿತಾಂಶದ ಪರಿಣಾಮ ಲೋಕಸಭಾ ಚುನಾವಣೆಯ ಮೇಲೆ ಆಗುತ್ತದೆ. ಅಂತಲೇ ಸ್ವತಃ ಮೋದಿಯವರು ಕರ್ನಾಟಕಕ್ಕೆ ಬಂದು ಉರಿ ಬಿಸಲಲ್ಲಿ ಬೆವರು ಸುರಿಸಿದರು. ಮೋದಿಯವರ ಮುಖ ನೋಡಿ ಮತ ಹಾಕಿ ಎಂಬ ಮನವಿ ತಿರಸ್ಕರಿಸಿದ ಜನ ಕಾಂಗ್ರೆಸ್ ಗೆ 135 ಸ್ಥಾನಗಳನ್ನು ನೀಡಿದರು.

ಹೇಗಾದರೂ ಮಾಡಿ ದಕ್ಷಿಣ ಭಾರತವನ್ನು ಗೆದ್ದರೆ ಮನುವಾದಿ ಹಿಂದೂ ರಾಷ್ಟ್ರ ಮಾಡಲು ಮಾರ್ಗ ಸುಗಮವಾಗುತ್ತದೆ ಎಂಬ ಉದ್ದೇಶದಿಂದ ಮೋದಿ, ಅಮಿತ್ ಶಾ ಜೋಡಿ ನಡೆಸುತ್ತ ಬಂದ ಕಸರತ್ತುಗಳನ್ನು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದ ಜನತೆ ತಿರಸ್ಕರಿಸುತ್ತಲೇ ಬಂದಿದ್ದಾರೆ. ಈಗ ಕರ್ನಾಟಕದ ಜನ ತಿರಸ್ಕರಿಸಿದರು. ಇದು ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ.

ಬಿಜೆಪಿಯಲ್ಲಿ ನರೇಂದ್ರ ಮೋದಿಯವರನ್ನು ಬಿಟ್ಟರೆ ಬೇರೆ ಪ್ರಭಾವಿ ನಾಯಕರಿಲ್ಲ. ಅಮಿತ್ ಶಾ, ಯೋಗಿ ಆದಿತ್ಯನಾಥರನ್ನು ಜನ ಒಪ್ಪುವುದಿಲ್ಲ. ಇದೇ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಒಂದುಗೂಡಿದರೆ ಬಿಜೆಪಿ ಮುಂದಿನ ೨೦೨೪ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಸುಲಭವಲ್ಲ.

ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಡಬಲ್ ಇಂಜಿನ ಸರಕಾರದ ಪ್ರಸ್ತಾಪ ಮಾಡುತ್ತಲೇ ಇದ್ದರು. ಸಂವಿಧಾನ ವಿರೋಧಿಯಾದ ಈ ಪರಿಕಲ್ಪನೆಯನ್ನು ವಿರೋಧಿಸಿದ ಜನ ಎರಡೂ ಇಂಜಿನ್ ಗಳನ್ನು ತಿರಸ್ಕರಿಸಿದರು. ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಭಕ್ತರು ಆ ಭ್ರಮಾ ಲೋಕದಿಂದ ಹೊರಬಂದು ವಾಸ್ತವಕ್ಕೆ ಕಣ್ಣು ತೆರೆಯಬೇಕು.ಮೋದಿಯವರಿಗೆ ಸಾವಿರ ವರ್ಷ ಆಯುಷ್ಯವಿರುತ್ತದೆ ಎಂಬ ಭ್ರಮೆಯಲ್ಲಿ ಇವರಿದ್ದಾರೆ. ಮೋದಿಯವರಿಗೆ ಈಗ 73 ವರ್ಷ. ಅವರೊಬ್ಬರೇ ದೇಶದಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಪ್ರವಾಸ ಮಾಡಿ ತನ್ನ ಶಕ್ತಿ, ಸಾಮರ್ಥ್ಯವನ್ನು ಪಣಕ್ಕಿಟ್ಟರೂ ದೈಹಿಕ ಪರಿಸ್ಥಿತಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಅವರ ವರ್ಚಸ್ಸು ಕ್ಷೀಣಿಸುತ್ತಿರುವುದು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲೇ ಗೊತ್ತಾಗಿದೆ.

ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಸಿಬಿಐ, ಜಾರಿ ನಿರ್ದೇಶನಾಲಯ, ಎನ್.ಐ.ಎ.ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೋದಿ, ಅಮಿತ್ ಶಾ ಮತ್ತು ನಾಗಪುರದ ಕೂಟಕ್ಕೆ ಪಾಠ ಕಲಿಸಲು ಪ್ರತಿಪಕ್ಷ ಗಳು ಒಂದಾಗುವ ಸೂಚನೆಗಳಿವೆ. ಮೋದಿಯವರ ಚರಿಸ್ಮಾ ಕುಸಿಯುತ್ತಿರುವುದರಿಂದ ಮುಳುಗುವ ಬಿಜೆಪಿ ದೋಣಿಯನ್ನು ಅವರೂ ಕಾಪಾಡುವ ಸ್ಥಿತಿಯಲ್ಲಿ ಇಲ್ಲ.

ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಪ್ರತಿಪಕ್ಷಗಳ ಪರ್ಯಾಯದ ಹೊಸ ಭರವಸೆ ಮೂಡಿದೆ. ಪ್ರತಿಪಕ್ಷಗಳ ನಾಯಕತ್ವವನ್ನು ಸಹಜವಾಗಿ ಕಾಂಗ್ರೆಸ್ ವಹಿಸಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ, ಛತ್ತೀಸಗಡ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶದ ಪ್ರಭಾವ ಬೀರಲಿದ್ದು, ಕರ್ನಾಟಕದಂತೆ ಎಲ್ಲರೂ ಒಟ್ಟಾಗಿ ಹೋದರೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಹೊಸ ದಾರಿ ಗೋಚರಿಸಿದೆ.ಇದು ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲೂ ಪ್ರಭಾವ ಬೀರಲಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಪ್ರಭಾವ, ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಶಕ್ತಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಮಾರ್ಗದರ್ಶನದ ಮುಂದೆ ನಾಗಪುರದ ಭಾಗವತರ ಮತ್ತು ಅವರ ಮುಖವಾಡ ಮೋದಿಯವರ ಆಟ ನಡೆಯಲಿಲ್ಲ. ಮುಸ್ಲಿಮ್, ಕ್ರೈಸ್ತ ಮತ್ತು ಕಮ್ಯುನಿಸ್ಟ್ ವಿರೋಧಿ ಗೋಳ್ವಾಲ್ಕರ್ ಸಿದ್ಧಾಂತಗಳನ್ನು ಇಟ್ಟುಕೊಂಡು ಬಹಳ ಕಾಲ ಜನಸಾಮಾನ್ಯರನ್ನು ದಾರಿ ತಪ್ಪಿಸಲು ಸ್ವಾಮಿ ವಿವೇಕಾನಂದರು ಹೇಳಿದಂತೆ ಧರ್ಮ ಮತ್ತು ದೇವರು ಮತ್ತು ರೊಟ್ಟಿಯ ನಡುವಿನ ಆಯ್ಕೆ ಎದುರಾದಾಗ ಹಸಿದವರ ಆಯ್ಕೆ ರೊಟ್ಟಿ ಆಗಿರುತ್ತದೆ. ಮೋದಿಯವರ ಆಡಳಿತದಲ್ಲಿ ಹಸಿದವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಧರ್ಮದ ಹೆಸರಿನ ಮೋಸ, ವಂಚನೆಗಳಿಗೆ ಜನ ಮಾರು ಹೋಗುವುದಿಲ್ಲ.

ಸರ್ವಾಧಿಕಾರಿಗಳನ್ನು ನಂಬಿದ ಜನ ಕೊನೆಗೆ ಮೋಸ ಹೋಗುತ್ತಾರೆ. ಜರ್ಮನಿಯಲ್ಲಿ ನಾಝಿ ಪಾರ್ಟಿಯ ಅಡಾಲ್ಫ್ ಹಿಟ್ಲರ್ ತೊಂಬತ್ತು ವರ್ಷ ಗಳ ಹಿಂದೆ ಅಧಿಕಾರಕ್ಕೆ ಬಂದು ತಾನು ಸ್ಥಾಪಿಸಿದ ‘ನ್ಯಾಷನಲ್ ಸೋಷಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ’ ಮುಂದಿನ ಸಾವಿರ ವರ್ಷಗಳ ಕಾಲ ಜರ್ಮನಿಯನ್ನು ಆಳುತ್ತದೆ ಎಂದು ದುರಹಂಕಾರದಿಂದ ಘೋಷಿಸಿದ. ಆತನ ಅಂಧ ಭಕ್ತರು ಈ ಮಾತನ್ನು ನಂಬಿ ಹಿಟ್ಲರ್, ಹಿಟ್ಲರ್ ಎಂದು ಘೋಷಣೆ ಹಾಕುತ್ತಿದ್ದರು. ಮುಂದೆ ಹನ್ನೆರಡು ವರ್ಷಗಳಲ್ಲಿ ಅಂದಿನ ಸೋವಿಯತ್ ರಶ್ಯದ ಕೆಂಪುಸೇನೆ ಜರ್ಮನಿಯನ್ನು ಪ್ರವೇಶಿಸಿ ಹಿಟ್ಲರ್‌ನ ಪತನವಾಯಿತು.ಆತನ ಫ್ಯಾಶಿಸ್ಟ್ ಪಕ್ಷವೂ ಮಣ್ಣು ಮುಕ್ಕಿತು.ಜರ್ಮನಿಯ ಇಂದಿನ ಪೀಳಿಗೆ ಹಿಟ್ಲರ್ ಹೆಸರನ್ನು ಹೇಳಿದರೆ ಸಾಕು ಉರಿದು ಬೀಳುತ್ತಾರೆ.

ಆತ ಜರ್ಮನಿಗೆ ಕಳಂಕ ಎಂದು ಹಿಡಿಶಾಪ ಹಾಕುತ್ತಾರೆ ಭಾರತದಲ್ಲಿ ಹಿಟ್ಲರ್, ಮುಸ್ಸೋಲಿನಿ ಸಿದ್ಧಾಂತವನ್ನು ಆಮದು ಮಾಡಿಕೊಂಡು ಹಿಂದುತ್ವ ಎಂಬ ಹೊಸ ಸಿದ್ಧಾಂತ ಹುಟ್ಟು ಹಾಕಿದವರಿಗೂ ಅದೇ ಗತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

Similar News