ಮೇ 17ರಿಂದ ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮ ಕುಂಭಾಭಿಷೇಕ

Update: 2023-05-16 15:09 GMT

ಉಡುಪಿ, ಮೇ 16: ತಾಲೂಕಿನ  ಉದ್ಯಾವರ, ಮಟ್ಟು ಹಾಗೂ ನಿಡಂಬೂರು ಮಾಗಣೆಯ ಕುತ್ಪಾಡಿ, ಕಡೆಕಾರು, ಕಿದಿಯೂರು, ಅಂಬಲ್ಪಾಡಿ, ಬನ್ನಂಜೆ, ಕಪ್ಪೆಟ್ಟು ಹಾಗೂ  ಕನ್ನರ್ಪಾಡಿ ಗ್ರಾಮಸ್ಥರಿಗೆ ಗ್ರಾಮಾಧಿಪತಿಯಾ ಗಿರುವ ಉದ್ಯಾವರ ಶ್ರೀಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸುಮಾರು ಮೂರು ಕೋಟಿ ರೂ.ವೆಚ್ಟದಲ್ಲಿ ನಿರ್ಮಿಸಿರುವ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿ ಪೂಜಾ ಮಹೋತ್ಸವ ಮೇ 17ರಿಂದ 24ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಪ್ರಾಚೀನವಾದ ಅಲೂಪರ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ  ಈ ದೇವಾಲಯಕ್ಕೆ ಕಳೆದ ಐವತ್ತು ವರ್ಷಗಳಲ್ಲಿ ಮೂರು ಬಾರಿ ಬ್ರಹ್ಮಕಲಶ ನಡೆದಿದೆ ಎಂದರು.

ಈ ಬಾರಿ ದೇವಾಲಯದ ಸುತ್ತುಪೌಳಿ ಮತ್ತು ಅಗ್ರಸಭಾ ಮಂಟಪವನ್ನು ನವೀಕರಿಸಿ ತಾಮ್ರದ ಮುಚ್ಚಿಗೆ ಹಾಕುವ ಕಾರ್ಯಕ್ಕೆ 1.5 ಕೋಟಿ ರೂ. ವೆಚ್ಚ ಮಾಡಲಾಗಿದೆ.ಗರ್ಭಗುಡಿಯ ಸುತ್ತು ಹಾಸುಕಲ್ಲಿನ ನವೀಕರಣ ವ್ಯವಸ್ಥೆ, ಒಳ ಮತ್ತು ಹೊರಸುತ್ತಿನ ತಗಡಿನ ಚಪ್ಪರದ ನವೀಕರಣ ಹಾಗೂ ದೇವಸ್ಥಾನ ಎದುರಿನ ರಥಬೀದಿಯ ಕಾಂಕ್ರೀಟಿಕರಣ ಮಾಡಲಾಗುತ್ತಿದೆ ಎಂದರು.

ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು ಹಾಗೂ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಉಪಸ್ಥಿತಿಯಲ್ಲಿ ವೇದಮೂರ್ತಿ ಪುತ್ತೂರು ಶ್ರೀಶ ತಂತ್ರಿ ಮತ್ತು  ವೇದಮೂರ್ತಿ ಕುತ್ಪಾಡಿ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಸಿದ್ಧಿ ವಿನಾಯಕ ದೇವರಿಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದರು. 

ಮೇ 19ರ ಅಪರಾಹ್ನ 3:30ಕ್ಕೆ  ಅಂಬಲ್ಪಾಡಿ ದೇವಸ್ಥಾನದಿಂದ ಹೊರೆಕಾಣಿಕೆ  ಮೆರವಣಿಗೆಗೆ ಅಂಬಲ್ಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳರು ಚಾಲನೆ ನೀಡುವರು. ಮೇ 21ರ ರವಿವಾರ ಬೆಳಗ್ಗೆ 9:15ಕ್ಕೆ ಮಿಥುನ ಲಗ್ನದಲ್ಲಿ  ಸಿದ್ಧಿ ವಿನಾಯಕ ದೇವರಿಗೆ ಬ್ರಹ್ಮಕುಂಭಾಭಿಷೇಕ, ಬಳಿಕ ಮಹಾಪೂಜೆ ಹಾಗೂ  ಮಹಾ ಅನ್ನ ಸಂತರ್ಪಣೆ  ಜರಗಲಿದೆ.

ಮೇ 23ರ ಮಂಗಳವಾರ ಮುಂಜಾನೆ  5:38ಕ್ಕೆ ರಾಶಿಪೂಜೆ ಮಹೋತ್ಸವ ಆರಂಭಗೊಂಡು 24ರ ಬುಧವಾರ ಬೆಳಿಗ್ಗೆ 5:34ಕ್ಕೆ ಪರಿಸಮಾಪ್ತಿ ಗೊಳ್ಳಲಿದೆ ಎಂದರು. ಈ ವೇಳೆ ಅಹೋ ರಾತ್ರಿ ಅಖಂಡ ಭಜನೆ ಹಾಗೂ ನಿರಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದರು.

ಮೇ 17ರಿಂದ 24ರವರೆಗೆ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳಲ್ಲದೆ  ಪ್ರವಚನ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು,  ನಿರಂತರ ಭಜನೆ ನಡೆಯಲಿದೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ ಯು.ಬಿ. ಸಂತೋಷ ಕುಮಾರ್, ಗಣಪತಿ ಕಾರಂತ, ಮುರಳಿ ಶೆಟ್ಟಿ ಕಡೆಕಾರ್, ವಿನೋದ್ ಕುಮಾರ್, ಪ್ರಭಾಕರ ಗಾಣಿಗ, ಶ್ರೀಶ ಭಟ್ ಕಡೆಕಾರು, ಯು.ಸುರೇಸ್ ಆಚಾರ್ಯ ಉಪಸ್ಥಿತರಿದ್ದರು.

Similar News