ಜೂ. 4ರಂದು ಕೇರಳಕ್ಕೆ ಮುಂಗಾರು ಆಗಮನ: ಹವಾಮಾನ ಇಲಾಖೆ

Update: 2023-05-16 15:56 GMT

ಮಂಗಳೂರು, ಮೇ 16: ನೈಋತ್ಯ ಮಾನ್ಸೂನ್  ಈ ಬಾರಿ ವಿಳಂಬವಾಗಲಿದ್ದು, ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ.

ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ. ಆದರೆ ಈ ಬಾರಿ 4 ದಿನ ವಿಳಂಬವಾಗಿ ಜೂನ್ 4 ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

2022ರಲ್ಲಿ ಮೇ 29 ಆರಂಭ: ಕಳೆದ ವರ್ಷ ಮೇ 29ರಂದು ಮುಂಗಾರು ಆರಂಭವಾಗಿತ್ತು. ಕಳೆದ 18 ವರ್ಷಗಳಲ್ಲಿ ಕೇರಳದ ಮೇಲೆ ಮಾನ್ಸೂನ್ ಪ್ರಾರಂಭವಾಗುವ ದಿನಾಂಕದ ಕಾರ್ಯಾಚರಣೆಯ ಮುನ್ಸೂಚನೆಗಳು 2015ನ್ನು ಹೊರತುಪಡಿಸಿ ಸರಿಯಾಗಿವೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಐದು ವರ್ಷಗಳತ್ತ ನೋಡಿದರೆ ಮಾನ್ಸೂನ್ 2018 ಮತ್ತು 2022ರಲ್ಲಿ  ಮೇ 29 ರಂದು, 2021ರಲ್ಲಿ ಜೂನ್ 3 ಮತ್ತು 2020 ರಲ್ಲಿ ಜೂನ್ 1 ರಂದು , 2019ರಲ್ಲಿ ಜೂನ್ 8ರಂದು ಕೇರಳ ಪ್ರವೇಶಿಸಿತ್ತು.

ಮಂಗಳೂರಿನಲ್ಲಿ ಆರದ ಬಿಸಿ: ಕರಾವಳಿ ಕರ್ನಾಟಕದ ಪ್ರಮುಖ ನಗರ ಮಂಗಳೂರಿನಲ್ಲಿ ಕಳೆದ ನವೆಂಬರ್‌ನಲ್ಲಿ ಕಾಣೆಯಾಗಿದ್ದ ಮಳೆ ಮೇ ತಿಂಗಳಲ್ಲಿ ಕಾಣಿಸಿಕೊಂಡಿತ್ತು. ಮೇ ತಿಂಗಳಲ್ಲಿ ಮೂರು ಬಾರಿ ಮಳೆಯಾಗಿದೆ. ಹೀಗಿದ್ದರೂ ವಾತಾವರಣದ ತಾಪಮಾನ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಬಹುತೇಕ ಕೆರೆ, ಬಾವಿ, ಕೊಳವೆ ಬಾವಿ, ನದಿ, ಹೊಳೆ ನೀರಿಲ್ಲದೆ ಬತ್ತಿ ಹೋಗಿದ್ದು, ಜನಸಾಮಾನ್ಯರು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ನೀರಿಲ್ಲದೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ನೀರು ಇಲ್ಲದೆ  ಒಣಗುತ್ತಿದ್ದ ಅಡಿಕೆ, ತೆಂಗು, ಬಾಳೆ ಗಿಡಗಳಿಗೆ ಇತ್ತೀಚಿನ ಮಳೆ ಮರು ಜೀವ ನೀಡಿದೆ.

Similar News