×
Ad

ತಮಿಳುನಾಡು ನಕಲಿ ಮದ್ಯ ದುರಂತ: ಸಾವುಗಳ ಸಂಖ್ಯೆ 20ಕ್ಕೇರಿಕೆ, ಪೊಲೀಸರಿಗೆ NHRC ನೋಟಿಸ್

Update: 2023-05-17 21:02 IST

ಚೆನ್ನೈ,ಮೇ 17: ತಮಿಳುನಾಡಿನಲ್ಲಿ ನಕಲಿ ಮದ್ಯಸೇವನೆಯಿಂದ ಸಾವುಗಳ ಸಂಖ್ಯೆ 20ಕ್ಕೇರಿಕೆಯಾಗಿದೆ. ವಿಲ್ಲುಪುರಂ ಜಿಲ್ಲೆಯ ಎಕ್ಕಿಯಾರಕುಪ್ಪಂ ಗ್ರಾಮದ 13 ಮತ್ತು ಚೆಂಗಲ್ಪೇಟೆ ಜಿಲ್ಲೆಯ ಮಧುರಾಂತಕಮ್‌ನ ಏಳು ನಿವಾಸಿಗಳು ಮೃತಪಟ್ಟಿದ್ದು,45 ಜನರು ಈಗಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ಜಿಲ್ಲೆಗಳಲ್ಲಿಯ ಸಾವುಗಳ ನಡುವಿನ ಸಂಬಂಧವನ್ನು ಅಧಿಕಾರಿಗಳು ಇನ್ನಷ್ಟೇ ಕಂಡುಕೊಳ್ಳಬೇಕಿದೆ,ಆದರೆ ಇಂತಹ ನಂಟಿನ ಸಾಧ್ಯತೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತರು ಎಥೆನಾಲ್ ಮತ್ತು ಮಿಥೆನಾಲ್ ಮಿಶ್ರಿತ ನಕಲಿ ಮದ್ಯವನ್ನು ಸೇವಿಸಿರಬಹುದು ಎನ್ನುವುದನ್ನು ಪ್ರಾಥಮಿಕ ತನಿಖೆಗಳು ತೋರಿಸಿವೆ ಎಂದು ಐಜಿಪಿ ಎನ್.ಕಣ್ಣನ್ ತಿಳಿಸಿದರು.

ಈ ಗ್ರಾಮಗಳ ನಿವಾಸಿಗಳು ಇಂಧನಕ್ಕೆ ಪರ್ಯಾಯವಾಗಿ ಬಳಸಲಾಗುವ ಮಿಥೆನಾಲ್‌ನ್ನು ಸೇವಿಸಿದ್ದರು,ಅಕ್ರಮ ಮದ್ಯವನ್ನಲ್ಲ ಎಂದು ಪೊಲೀಸರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದರು.

ತಮಿಳುನಾಡಿನಲ್ಲಿ ಅಕ್ರಮ ಮದ್ಯ ತಯಾರಿಕೆಯನ್ನು ತಡೆಯಲು ತೆಗೆದುಕೊಳ್ಳಲಾಗಿರುವ ಪರಿಣಾಮಕಾರಿ ಕ್ರಮಗಳು ಮತ್ತು ಅದರ ಸಾಗಾಟದ ವಿರುದ್ಧ ಕಟ್ಟೆಚ್ಚರವನ್ನು ವಹಿಸಿರುವುದರಿಂದ ಅದು ರಾಜ್ಯದಲ್ಲಿ ಲಭ್ಯವಾಗುತ್ತಿಲ್ಲ. ಕೆಲವು ವ್ಯಕ್ತಿಗಳು ಕೈಗಾರಿಕಾ ಘಟಕಗಳಿಂದ ಕದ್ದ ಮಿಥೆನಾಲ್‌ನ್ನು ಮಾರಾಟ ಮಾಡಿದ್ದರು. ಇದರ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದ ಡಿಜಿಪಿ ಸಿ.ಶೈಲೇಂದ್ರ ಬಾಬು ಅವರು,ಯಾವ ಕೈಗಾರಿಕಾ ಘಟಕದಿಂದ ಮಿಥೆನಾಲ್ ಕಳ್ಳತನ ಮಾಡಲಾಗಿತ್ತು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು.

 ದುರಂತಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ

 NHRC ನೋಟಿಸ್

ಈ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ತಮಿಳುನಾಡು ಪೊಲೀಸರಿಗೆ ನೋಟಿಸ್‌ನ್ನು ಹೊರಡಿಸಿದ್ದು,ಸಾವುಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ವರದಿಯು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನ ಸ್ಥಿತಿಗತಿ,ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದರೆ ಅದರ ವಿವರಗಳನ್ನು ಒಳಗೊಂಡಿರಬೇಕು ಎಂದು ಅದು ಸೂಚಿಸಿದೆ. ದುರಂತಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ಕುರಿತೂ ತಿಳಿದುಕೊಳ್ಳಲು ಆಯೋಗವು ಬಯಸಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆಯನ್ನು ನೀಡಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ಮೃತರ ಕುಟುಂಬಗಳಿಗೆ 10 ಲ.ರೂ. ಮತ್ತು ಆಸ್ಪತ್ರೆಗೆ ದಾಖಲಾಗಿರುವವರಿಗೆ 50,000 ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.

Similar News