×
Ad

ಹಿಂದಿ ದಿನಪತ್ರಿಕೆ 'ಪಂಜಾಬ್ ಕೇಸರಿ' ವಿರುದ್ಧ 2 ಕೋಟಿ ರೂ. ಮಾನಹಾನಿ ಮೊಕದ್ದಮೆ ದಾಖಲಿಸಿದ ಗೌತಮ್ ಗಂಭೀರ್

Update: 2023-05-17 22:01 IST

ಹೊಸದಿಲ್ಲಿ: ರೂ. 2 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಹಿಂದಿ ದಿನಪತ್ರಿಕೆ ಪಂಜಾಬ್ ಕೇಸರಿ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನ್ಯಾ. ಚಂದ್ರಧಾರಿ ಸಿಂಗ್ ಎದುರು ಇಂದು ಬಂದಿತ್ತು ಎಂದು thenewsminute.com ವರದಿ ಮಾಡಿದೆ.

ಪಂಜಾಬ್ ಕೇಸರಿ ದಿನಪತ್ರಿಕೆ, ಅದರ ಸಂಪಾದಕ ಆದಿತ್ಯ ಚೋಪ್ರಾ ಹಾಗೂ ಅದರ ಪ್ರತಿನಿಧಿ ಅಮಿತ್ ಕುಮಾರ್ ಹಾಗೂ ಇಮ್ರಾನ್ ಖಾನ್ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಿರುವ ಗೌತಮ್ ಗಂಭೀರ್, ತನ್ನನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ಕಳಂಕಿತ ಹಾಗೂ ಮಾನಹಾನಿ ಸರಣಿ ಲೇಖನಗಳನ್ನು ಬರೆಯುವ ಮೂಲಕ ಪತ್ರಕರ್ತರ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕೆಯು ತನ್ನ ವರದಿಗಳನ್ನು ದಾರಿ ತಪ್ಪಿಸುವ ರೀತಿಯಲ್ಲಿ ವಿಕೃತಗೊಳಿಸಿದೆ ಎಂಬ ತಮ್ಮ ಪ್ರತಿಪಾದನೆಗೆ ಪೂರಕವಾಗಿ ಹಲವಾರು ವರದಿಗಳನ್ನು ತಮ್ಮ ವಕೀಲ ಜೈ ಅನಂತ್ ದೇಹಾದ್ರೈ ಮೂಲಕ ಗೌತಮ್ ಗಂಭೀರ್ ಮೊಕದ್ದಮೆಯೊಂದಿಗೆ ಸಲ್ಲಿಸಿದ್ದಾರೆ. ಈ ಪೈಕಿ ಒಂದು ವರದಿಯಲ್ಲಿ ತನ್ನನ್ನು ರಾಕ್ಷಸ ಭಸ್ಮಾಸುರನಿಗೆ ಹೋಲಿಕೆ ಮಾಡುವ ಮಟ್ಟಕ್ಕೆ ಹೋಗಲಾಗಿದೆ ಎಂದು ಅವರು ಮೊಕದ್ದಮೆಯಲ್ಲಿ ಪ್ರತಿಪಾದಿಸಿದ್ದಾರೆ.

ಇದಲ್ಲದೆ, ತನ್ನ ವಿರುದ್ಧ ಪ್ರಕಟವಾಗಿರುವ ಮಾನಹಾನಿ ಲೇಖನಗಳನ್ನು ಹಿಂಪಡೆಯುವಂತೆ ಪತ್ರಿಕೆಗೆ ನಿರ್ದೇಶನ ನೀಡಬೇಕು ಎಂದೂ ಗೌತಮ್ ಗಂಭೀರ್ ಮನವಿ ಮಾಡಿದ್ದಾರೆ.

Similar News